ಮಂಗಳವಾರ, ಜೂನ್ 15, 2021
24 °C
ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ಹೇಳಿಕೆ

ಮನೆ–ಮನೆಗೆ ಪುಸ್ತಕ ಭಾಗ್ಯ: ಶೇಖರಗೌಡ ಮಾಲಿಪಾಟೀಲ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಪ್ರತಿವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜತೆಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿಧ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ ಆಯೋಜನೆಗೆ ಒತ್ತು ನೀಡುವ ಉದ್ದೇಶ ಹೊಂದಿದ್ದೇನೆ’ ಎಂದು ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಚನ ಸಾಹಿತ್ಯ, ದಾಸ ಸಾಹಿತ್ಯ, ನಾಟಕ ಸಾಹಿತ್ಯ, ದಲಿತ ಸಾಹಿತ್ಯ, ಮಕ್ಕಳ ಸಾಹಿತ್ಯ ಹಾಗೂ ಕನ್ನಡ ಪರಂಪರೆಯ ಚಿಂತನೆಗಳ ಸಮಾವೇಶ ಆಯೋಜನೆ ಮಾಡುವ ಕನಸಿದೆ. ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷರ ವಿಶಿಷ್ಟ ಯೋಜನೆಗಳಾದ ಪುಸ್ತಕ ಸಂತೆ, ಗ್ರಾಮಸಿರಿ, ಮನೆ–ಮನೆಗೆ ಪುಸ್ತಕ (ಪುಸ್ತಕ ಭಾಗ್ಯ) ಯೋಜನೆ ಜಾರಿಗೊಳಿಸುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ತಿಳಿಸಿದರು.

ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ, ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ‘ಕನ್ನಡ ಸಾಹಿತ್ಯ ಪರಿಷತ್ತು ಮಾದರಿ ಕನ್ನಡ ಶಾಲೆ’ ಸ್ಥಾಪನೆ, ಹಳೆಗನ್ನಡ ಮತ್ತು ಆಧುನಿಕ ಸಾಹಿತ್ಯದ ಮರು ಓದು, ಮೌಲಿಕ ಗ್ರಂಥಗಳ ಮರುಮುದ್ರಣ, ಪುಸ್ತಕಗಳ ಆನ್‌ಲೈನ್‌ ಮಾರಾಟ ವ್ಯವಸ್ಥೆಗೆ ಒತ್ತು ನೀಡಲಾಗುವುದು. ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ‘ಉತ್ಸವ ಮೂರ್ತಿ’ಗಳನ್ನಾಗಿಸದೆ, ವರ್ಷವಿಡೀ ಅವರ ಕ್ರಿಯಾಶೀಲತೆಯನ್ನು ಪರಿಷತ್ತು ರಾಜ್ಯದ ವಿವಿಧೆಡೆ ಬಳಸಿಕೊಳ್ಳುವ ಚಿಂತನೆಯಿದೆ ಎಂದರು. 

ಕೋವಿಡ್‌ ಇದ್ದರೂ ಕಸಾಪ ಚುನಾವಣೆ ನಡೆಸಲು ಏನೂ ತೊಂದರೆಯಿಲ್ಲ. ಕಾರಣ ರಾಜ್ಯದಲ್ಲಿ 3.10 ಲಕ್ಷ ಮತದಾರರು ಇದ್ದಾರೆ. ವಿಧಾನಸಭೆ ಮತ್ತು ಲೋಕಸಭೆಗಳ ಉಪ ಚುನಾವಣೆಯನ್ನೇ ಸರ್ಕಾರ ನಡೆಸಿದೆ. ಅದಕ್ಕೆ ಹೋಲಿಸಿದರೆ, ಕಸಾಪ ಚುನಾವಣೆ ವ್ಯಾಪ್ತಿ ತೀರಾ ಕಡಿಮೆ. ಇನ್ನು ‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ಕಾರ ಮುಂದೂಡಿರುವುದು ಸರಿ ಇದೆ. ಏಕೆಂದರೆ ಲಕ್ಷಾಂತರ ಜನರು ಒಂದೆಡೆ ಸೇರಿದರೆ ಕೋವಿಡ್‌ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕಾಗಿ. ಎಲ್ಲ ಜನರನ್ನು ಒಳಗೊಂಡ ಗೋಷ್ಠಿ ಮಾಡಬೇಕು. ರೈತಪರ ಮತ್ತು ಜನಪರ ಧ್ವನಿಗಳಿಗೆ ಅವಕಾಶ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು