ಬುಧವಾರ, ಏಪ್ರಿಲ್ 21, 2021
27 °C

ಚಾಲಕನಾಗಿದ್ದ ಧರ್ಮಪ್ಪ ಈಗ ಕೃಷಿಕ

ಬಸವರಾಜ ಒಡೇರಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತುಮ್ಮಿನಕಟ್ಟಿ: ಬೆಂಗಳೂರಿನ ಕಾಲ್‌ ಸೆಂಟರ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಗ್ರಾಮದ ಧರ್ಮಪ್ಪ ಬೈಲಮನಿ ಎಲೆ ಬಳ್ಳಿ ಕೃಷಿ ಮಾಡುವ ಮೂಲಕ ಯಶಸ್ಸು ಕಂಡಿದ್ದಾರೆ.

ತಮ್ಮ ಕುಟುಂಬದಿಂದ ಬಂದ 2 ಎಕರೆ ಕೃಷಿ ಭೂಮಿಯಲ್ಲಿ ಎಲೆ ಬಳ್ಳಿ ಬೆಳೆದಿದ್ದಾರೆ. ಬಳ್ಳಿ ಬೆಳೆಯುವ ಮಾಹಿತಿಯನ್ನು ಬೇರೆ ರೈತರಿಗೆ ನೀಡುವುದು ಹಾಗೂ ಅವರಿಂದ ಪಡೆಯುತ್ತಿದ್ದಾರೆ. ವಿವಿಧ ಪ್ರಯೋಗಗಳನ್ನು ಮಾಡುತ್ತ ಸ್ಥಿರ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ.

ಚಾಲಕನಾಗಿದ್ದಾಗ ಬಿಡುವಿಲ್ಲದೆ ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಬಂದವು. ಇದರಿಂದ ಕೆಲಸ ಬಿಟ್ಟು ಸ್ವಂತ ಜಮೀನಲ್ಲಿ ಕೃಷಿ ಮಾಡ ತೊಡಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ₹50 ಸಾವಿರ ಸಾಲ ಪಡೆದು ಗೋಡಿಹಾಳ ಗ್ರಾಮದ ಒಂದು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಅರ್ಧ ಎಕರೆ ಎಲೆ ಬಳ್ಳಿ ಬೆಳೆದೆ. ನೀರಿನ ಕೊರತೆ ಆಗದಿರಲಿ ಎಂದು ಮತ್ತೊಂದು ಕೊಳವೆ ಬಾವಿ ಕೊರೆಸಿ 10 ಗುಂಟೆ ಬೀಜ ಬಾಳೆ ಬೆಳೆದೆ ಎಂದು ಧರ್ಮಪ್ಪ ತಿಳಿಸಿದರು.

ಬೆಳೆಯುವುದು ಹೇಗೆ?: ಇದನ್ನು ಬೆಳೆಯಲು ಅತಿಯಾದ ನೀರು ನಿಲ್ಲದ ಕೃಷಿ ಭೂಮಿ ಸೂಕ್ತ. ಅರ್ಧ ಎಕರೆ ಕಲ್ಲು ಮಿಶ್ರಿತ ಕಂಪು ಭೂಮಿಯಲ್ಲಿ 4/4 ಅಡಿ ಅಂತರದಲ್ಲಿ ಗುಣಿಗಳನ್ನು ತೆಗೆದು ಮೂರು ಗಣ್ಣಿಗೆ ಕತ್ತರಿಸಿದ ಒಂದು ಎಲೆ ಬಳ್ಳಿ ತುಂಡು ಸೇರಿದಂತೆ ನುಗ್ಗೆ, ಚೊಗಚೆ, ಬೊರಲ ಗಿಡಗಳನ್ನು ನೆಟ್ಟಿದ್ದೇನೆ. ಆರಂಭದಲ್ಲಿ ಎರಡು ದಿನಕ್ಕೊಮ್ಮೆ, ನಂತರ ವಾರಕ್ಕೆ ಎರಡು ಬಾರಿ ನೀರನ್ನು ನೀಡಬೇಕು. ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು

ರಾಣೆಬೆನ್ನೂರು, ಹರಿಹರ ಮಾರುಕಟ್ಟೆಗೆ ಒಯ್ಯುತ್ತೇವೆ. ಬೇಡಿಕೆ ಇದ್ದಾಗ ಹುಬ್ಬಳ್ಳಿ ಮಾರುಕಟ್ಟೆಯಿಂದ ಇಲ್ಲಿಗೆ ಬಂದು ಕೊಳ್ಳುತ್ತಾರೆ. ಸ್ಥಳೀಯರು ಮದುವೆ ಇತರೆ ಶುಭ ಕಾರ್ಯಗಳಿಗೆ ಬೇಕಾದಾಗ ಇಲ್ಲಿಗೆ ಬಂದು ಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಎಲೆಬಳ್ಳಿಯನ್ನು ನೆಲಕ್ಕೆ ಇಳಿಸಿ 6 ರಿಂದ 7 ಅಡಿವರೆಗೆ ಉಳಿಸಿಕೊಂಡು ಮೇಲ್ಭಾಗದ ತುದಿಯಿಂದ ಸುರುಳಿ ಸುತ್ತಿ ಗುಂಡಿಯಲ್ಲಿ ಮುಚ್ಚುತ್ತೇವೆ. ಇದರಿಂದ ಬಳ್ಳಿ ಮತ್ತೆ ಮುಗುಳು ಕೀಳುವುದರಿಂದ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತದೆ ಪತ್ನಿ ನಾಗರತ್ನಮ್ಮ ವಿವರಿಸಿದರು.

ವರ್ಷಕ್ಕೆ 130 ಪೆಂಡಿ ವೀಳ್ಯದೆಲೆ
ವರ್ಷಕ್ಕೊಮ್ಮೆ ಸೆಗಣಿ ಹಾಗೂ ಕುರಿ ಗೊಬ್ಬರ ಹಾಕುತ್ತಿದ್ದೇನೆ. ರೈತ ಮಂಜಪ್ಪ ಮಾದಣ್ಣನವರ ಸಲಹೆ ಮೇರೆಗೆ ಒಂದು ವರ್ಷದಿಂದ ಡ್ರಿಪ್ ಮೂಲಕ ನೀರು ನೀಡುತ್ತಿದ್ದೇನೆ. ಅರ್ಧ ಎಕರೆಗೆ ವರ್ಷಕ್ಕೆ 120 ರಿಂದ 130 ಪೆಂಡಿಗಳಷ್ಟು ವೀಳ್ಯದೆಲೆಯ ಉತ್ಪಾದನೆ ಆಗುತ್ತದೆ. ಒಂದು ಪೆಂಡೆಗೆ ಚಳಿಗಾಲದಲ್ಲಿ ₹8 ಸಾವಿರಕ್ಕೆ, ಮಳೆಗಾಲದಲ್ಲಿ ₹3 ರಿಂದ 5 ಸಾವಿರಕ್ಕೆ ಮಾರುತ್ತೇವೆ. ನುಗ್ಗೆ ವರ್ಷಕ್ಕೆ 3ಕ್ವಿಂಟಾಲ್ ಉತ್ಪಾದನೆ ಆಗುತ್ತಿದೆ ಎಂದು ಧರ್ಮಪ್ಪ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.