ಶುಕ್ರವಾರ, ಮಾರ್ಚ್ 5, 2021
30 °C
ಕಾಗಿನೆಲೆಯಲ್ಲಿ ‘ಐತಿಹಾಸಿಕ ಪಾದಯಾತ್ರೆ’ ಕಾರ್ಯಕ್ರಮ

ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು: ಈಶ್ವರಾನಂದಪುರಿ ಸ್ವಾಮೀಜಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಗಿನೆಲೆ (ಹಾವೇರಿ): ‘ಕುರುಬರ ಎಸ್.‌ಟಿ ಮೀಸಲಾತಿ ಹೋರಾಟ ಸಮಿತಿಯ ಪಾದಯಾತ್ರೆ ಐತಿಹಾಸಿಕವಾಗಿದ್ದು, ಮೀಸಲಾತಿ ದೊರೆಯುವವರೆಗೂ ಹೋರಾಟ ನಿಲ್ಲದು’ ಎಂದು ಕನಕ ಗುರುಪೀಠದ ಶಾಖಾ ಮಠದ ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಕಾಗಿನೆಲೆಯ ಕನಕದಾಸರ ಕರ್ಮಭೂಮಿಯಿಂದ ಶುಕ್ರವಾರ ಆರಂಭವಾದ ಎಸ್.‌ಟಿ. ಹೋರಾಟ ಸಮಿತಿಯ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮಕ್ಕೆ ಡಮರುಗ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕುರುಬ ಸಮಾಜದ ಶಾಸಕರ ಪಾತ್ರವಿತ್ತು. ಅದನ್ನು ಮನಗಂಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎಂ.ಟಿ.ಬಿ. ನಾಗರಾಜ ಹಾಗೂ ಆರ್‌.ಶಂಕರ್‌ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಸೂರ್ಯ ತನ್ನ ದಿಕ್ಕನ್ನು ಬದಲಿಸೋ ಶುಭ ದಿನದಂದು ಕುರುಬರ ದಿಕ್ಕನ್ನು ಬದಲಿಸಬೇಕು ಅಂತ ನಿರಂಜನಾನಂದಪುರಿ ಸ್ವಾಮೀಜಿ ಅವರು ‘ಐತಿಹಾಸಿಕ ಪಾದಯಾತ್ರೆ’ ಹಮ್ಮಿಕೊಂಡಿದ್ದಾರೆ ಎಂದರು. 

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ: ‘ಕನಕದಾಸರ ಕರ್ಮಭೂಮಿಯಿಂದ ಕುರುಬರಿಗೆ ಸಾಮಾಜಿಕ ನ್ಯಾಯ ಕೊಡಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಲ್ಲಿ ಯಾವುದೇ ವ್ಯಕ್ತಿಯನ್ನು ವೈಭವಕರಿಸುವ ಉದ್ದೇಶವಿಲ್ಲ. ಪಾದಯಾತ್ರೆ ಬೇಕಿತ್ತಾ ಅನ್ನೋ ಗೊಂದಲವಿದೆ. ಎಸ್.‌ಟಿ. ಮೀಸಲಾತಿ ಹೋರಾಟ ಇಂದಿನದಲ್ಲ. ಸ್ವಾಮೀಜಿ ಪಾದಯಾತ್ರೆ ಮಾಡುತ್ತಿರುವುದು ನಮ್ಮ ಹಕ್ಕಿಗಾಗಿ. ಡಾ.ಅಂಬೇಡ್ಕರ್‌ ನಮ್ಮನ್ನು ಎಸ್.‌ಟಿ. ಪಟ್ಟಿಗೆ ಸೇರಿಸಿದ್ದಾರೆ. ಇಡೀ ರಾಜ್ಯದ ಕುರುಬರನ್ನು ಎಸ್.‌ಟಿ.ಗೆ ಸೇರಿಸಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆದಿದೆ’ ಎಂದರು. 

ಮೊದಲು ಕುರುಬ, ನಂತರ ಮಂತ್ರಿ: ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ, ಕೆ.ಎಸ್‌.ಈಶ್ವರಪ್ಪನವರು ಸರ್ಕಾರದಲ್ಲಿ ಮಂತ್ರಿಯಾಗಿದ್ದುಕೊಂಡು, ನಮ್ಮ ಹೋರಾಟಕ್ಕೆ ಇಳಿದದ್ದು ಆಶ್ಚರ್ಯ ತಂದಿತು. ಅವರೇ ಒಮ್ಮೆ ಇದಕ್ಕೆ ಉತ್ತರ ನೀಡಿದರು. ‘ನಾನು ಮೊದಲು ಕುರುಬ, ನಂತರ ಮಂತ್ರಿ’ ಎಂದು. ನಾವು ಎಸ್‌.ಟಿ. ಮೀಸಲಾತಿ ಕೇಳಿದರೆ ಬೇರೆ ಜನಾಂಗಕ್ಕೆ ಅನ್ಯಾಯವಾಗುವುದಿಲ್ಲ. ನಮ್ಮ ಹೋರಾಟ ‘ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹವಿದ್ದಂತೆ’ ಎಂದು ಬಣ್ಣಿಸಿದರು. 

ನಾಯಕ ಸಮಾಜದವರು ಶೇ 7.5 ಮೀಸಲಾತಿ ಬೇಕು ಅಂದಾಗ ಯಾರೂ ಅಪಸ್ವರ ಎತ್ತಲಿಲ್ಲ. ಪಂಚಮಸಾಲಿ ಸಮಾಜದವರು ಕೂಡ ಮೀಸಲಾತಿ ಕೇಳುತ್ತಿದ್ದಾರೆ. ಹೀಗಾಗಿ ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಕುರುಬ ಜನಾಂಗಕ್ಕೆ ಮೀಸಲಾತಿ ಕೇಳುವುದರಲ್ಲಿ ತಪ್ಪೇನಿದೆ. ಮೀಸಲಾತಿ ಕಲ್ಪಿಸಿದರೆ, ಶಿಕ್ಷಣ, ಉದ್ಯೋಗ, ಸೂರು ಮುಂತಾದ ಸೌಕರ್ಯಗಳು ದೊರೆಯುತ್ತವೆ ಎಂದರು. 

ವೇದಿಕೆ ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಟಿ.ಬಿ. ನಾಗರಾಜ್‌, ಆರ್.ಶಂಕರ್‌, ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌, ಎಸ್‌.ಟಿ. ಹೋರಾಟ ಸಮಿತಿಯ ಗೌರವಾಧ್ಯಕ್ಷ ವಿರೂಪಾಕ್ಷಪ್ಪ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಸಮಾಜದ ಮುಖಂಡರಾದ ಮುಕುಟಪ್ಪ, ಜಿಲ್ಲಾ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಹರಿಹರ, ಎಸ್.‌ಎಫ್.‌ಎನ್‌ ಗಾಜಿಗೌಡ್ರ, ಮಹದೇವ ಗಾಜಿಗೌಡ್ರ ಸೇರಿದಂತೆ ಹಲವಾರು ಗಣ್ಯರು, ಸಮಾಜದ ಮುಖಂಡರು, ಗೊರವಯ್ಯ ಮತ್ತು ಕುರುಬದ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು