ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ಸ್ಥಳ ಪರಿಶೀಲನೆ

Last Updated 19 ಡಿಸೆಂಬರ್ 2020, 13:30 IST
ಅಕ್ಷರ ಗಾತ್ರ

ಹಾವೇರಿ: ಫೆಬ್ರುವರಿ 26, 27 ಹಾಗೂ 28ರಂದು ನಡೆಸಲು ಉದ್ದೇಶಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುತಿಸಿರುವ ಜಾಗವನ್ನು ಕಸಾಪ ಅಧ್ಯಕ್ಷ ಮನು ಬಳಿಗಾರ ಪರಿಶೀಲನೆ ನಡೆಸಿದರು.

ನಗರದಲ್ಲಿ ಶನಿವಾರ ಪಿ.ಬಿ. ರಸ್ತೆಯ ಹೀರೊ ಶೋರೂಂ ಎದುರಿನಲ್ಲಿ ತಾತ್ಕಾಲಿಕವಾಗಿ ಗುರುತಿಸಿರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಜಿ.ಎಚ್. ಕಾಲೇಜು ಪಕ್ಕದ 20 ಎಕರೆ ಹಾಗೂ ಈ ಜಮೀನಿಗೆ ಹೊಂದಿಕೊಂಡ 6ರಿಂದ 8 ಎಕರೆ ಖಾಲಿ ಜಾಗವನ್ನು ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗುರುತಿಸಿದೆ. ಈ ಜಾಗ ಸಾಹಿತ್ಯ ಸಮ್ಮೇಳನಕ್ಕೆ ಅತ್ಯಂತ ಸೂಕ್ತವಾದ ಜಾಗವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನು ಬಳಿಗಾರ ಮಾತನಾಡಿ, ಊಟದ ವ್ಯವಸ್ಥೆ, ವಾಣಿಜ್ಯ ಮಳಿಗೆ, ಪುಸ್ತಕ ಮಳಿಗೆ ಸೇರಿದಂತೆ ಈ ಜಾಗದಲ್ಲಿ ಎಲ್ಲ ವ್ಯವಸ್ಥೆ ಮಾಡಬಹುದಾಗಿದೆ. ಪ್ರಧಾನ ವೇದಿಕೆ ಜೊತೆಗೆ ಎರಡು ಸಮಾನಾಂತರ ವೇದಿಕೆಗಳಿಗೆ ಬೇಡಿಕೆ ಇದೆ. ಪಕ್ಕದಲ್ಲಿ ನೊಳಂಬ ಕಲ್ಯಾಣ ಮಂಟಪದಲ್ಲಿ ಸಾವಿರ ಆಸನಕ್ಕೆ ವ್ಯವಸ್ಥೆ ಇದೆ. ಇನ್ನೊಂದು ವೇದಿಕೆಗೆ ಸ್ಥಳ ನಿಗದಿ ಮಾಡಬೇಕಾಗಿದೆ. ಜಿಲ್ಲಾ ಕಸಾಪ ಹಾಗೂ ಜಿಲ್ಲಾಡಳಿತ ಈ ಕುರಿತಂತೆ ನಿರ್ಧರಿಸಲಿದೆ ಎಂದರು.

15 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಹಾಗೂ ಸಾಹಿತಿಗಳಿಗೆ, ಗಣ್ಯರಿಗೆ ವಸತಿ ವ್ಯವಸ್ಥೆ ಮಾಡಬೇಕಾಗಿದೆ. ಹಾವೇರಿ ನಗರಕ್ಕೆ 20 ಕಿ.ಮೀ. ವ್ಯಾಪ್ತಿಯಲ್ಲಿರುವ ಹೋಟೆಲ್‍ಗಳು, ಸಮುದಾಯ ಭವನ, ವಿವಿಧ ವಸತಿ ನಿಲಯಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ದಾವಣಗೆರೆ, ಹುಬ್ಬಳ್ಳಿ, ರಾಣೆಬೆನ್ನೂರುಗಳಲ್ಲೂ ವಸತಿ ವ್ಯವಸ್ಥೆಗೆ ಹೋಟೆಲ್‍ಗಳನ್ನು ಗುರುತಿಸಲಾಗುತ್ತದೆ ಎಂದು ವಿವರಿಸಿದರು.

ಗೃಹ ಸಚಿವರು, ಕೃಷಿ ಸಚಿವರು ಹಾಗೂ ವಿವಿಧ ಶಾಸಕರು ನಿನ್ನೆ ನಡೆಸಿದ ಸಭೆಯಲ್ಲಿ ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ನಾಂದಿ ಹಾಡಿದ್ದಾರೆ. ಖರ್ಚು ವೆಚ್ಚವಿಲ್ಲದ ಸಿದ್ಧತೆಗಳನ್ನು ಮಾಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿಗಳು ಕಾರ್ಯೋನ್ಮುಖವಾಗಲಿವೆ. ಹಾಗಾಗಿ ಬೆಂಗಳೂರಿನಿಂದ ನಾನೂ ಸಹ ಹಾವೇರಿಗೆ ಆಗಮಿಸಿ ಸಮ್ಮೇಳನದ ಸಿದ್ಧತೆಗೆ ಭಾಗಿಯಾಗುವುದಾಗಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ ಅಧ್ಯಕ್ಷ ಯಲ್ಲಪ್ಪ ಆದಲಕಟ್ಟಿ, ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT