ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು: ಬಿತ್ತನೆಗೆ ಸಜ್ಜಾದ ರೈತರು, ನಿರೀಕ್ಷೆಗಿಂತ ಕಡಿಮೆ ಮಳೆ

Published 30 ಮೇ 2023, 1:18 IST
Last Updated 30 ಮೇ 2023, 1:18 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಮುಂಬರುವ ಮಳೆಯನ್ನು ನಂಬಿ ತಾಲ್ಲೂಕಿನಾದ್ಯಂತ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಭೂಮಿ ಹದಗೊಳಿಸವ ಜೊತೆಗೆ ಕೃಷಿ ಪರಿಕರಗಳ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನಾದ್ಯಂತ ಮಾರ್ಚ್‌ನಿಂದ ಇಲ್ಲಿಯವರೆಗೂ ಮುಂಗಾರು ಪೂರ್ವ ಮಳೆ ವಾಡಿಕೆಯಷ್ಟು ಸುರಿದಿದ್ದರೆ, ಇಷ್ಟೊತ್ತಿಗೆ ರೈತರು ಹೊಲ ಹದ ಮಾಡಿಕೊಂಡು, ಬಿತ್ತನೆ ಆರಂಭ ಮಾಡುತ್ತಿದ್ದರು. ಆದರೆ ಈ ಬಾರಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದ್ದು, ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ. 

ಮುಂಗಾರು ಬಿತ್ತನೆಗೆ ತಾಲ್ಲೂಕಿನ ರೈತರು ಈಗಾಗಲೇ ಭೂಮಿ ಹದಗೊಳಿಸುತ್ತಿದ್ದು, ಬಿತ್ತನೆಗೆ ಮಳೆಗಾಗಿ ಕಾಯುತ್ತಿದ್ದಾರೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಬಹತೇಕ ರೈತರು ಕೃಷಿ ಯಂತ್ರಗಳತ್ತ ಮುಖ ಮಾಡಿದ್ದಾರೆ. ಭೂಮಿ ಉಳುಮೆಗೆ ಟ್ರ್ಯಾಕ್ಟರ್‌ ಹಾಗೂ ಎತ್ತುಗಳಿಗೆ ಭಾರಿ ಬೇಡಿಕೆಯಿದ್ದು, ಟ್ರ್ಯಾಕ್ಟರ್‌ ಉಳಿಮೆ ಮಾಡಲು ಎಕರೆಗೆ ₹2,100 ಹಾಗೂ ಎತ್ತುಗಳ ಉಳುಮೆಗೆ ₹1,500 ರಷ್ಟು ಬೇಡಿಕೆ ಇದೆ.

ಈಗಾಗಲೇ ಈರುಳ್ಳಿ, ಬೆಳ್ಳುಳ್ಳಿ, ಹೆಸರು, ಸೊಯಾಬಿನ್‌ ಬಿತ್ತನೆಗೆ ಭೂಮಿ ಸಜ್ಜುಗೊಳಿಸಿದ್ದೇವೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜೂ.20 ರೊಳಗೆ ಉತ್ತಮ ಮಳೆಯಾಗದಿದ್ದರೆ ಇಳುವರಿ ಕಡಿಮೆಯಾಗುತ್ತದೆ. ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದಿದ್ದರೆ ಮೆಕ್ಕೆಜೋಳ ಬೆಳೆಯಬೇಕಾಗುತ್ತದೆ ಎನ್ನುತ್ತಾರೆ ಯತ್ತಿನಹಳ್ಳಿಯ ರೈತ ಭರಮರಡ್ಡಿ ದೇವರಡ್ಡಿ.

ಮಳೆ ವಿವರ: ಒಟ್ಟು ವಾರ್ಷಿಕ ವಾಡಿಕೆ ಮಳೆ 611.00 ಮಿಮೀ ಇದ್ದು, ಕಳೆದ ಬಾರಿ 2022 ಕ್ಕೆ ಸರಾಸರಿ 1177.88 ರಷ್ಟು ಮಳೆಯಾಗಿತ್ತು. ಈವರೆಗೆ 457.9 ಮಿಮೀ ಮಳೆಯಾಗಿದೆ. ರಾಣೆಬೆನ್ನೂರು ಆಸ್ಪತ್ರೆ 113.60 ಮಿಮೀ, ಅಸುಂಡಿ 95 ಮಿಮೀ, ಮೇಡ್ಲೇರಿ 85.60 ಮಿಮೀ, ಕುಪ್ಪೇಲೂರು 84.90 ಮಿಮೀ ಹಾಗೂ ಹನುಮನಮಟ್ಟಿ 78.80 ಮಿಮೀ ನಷ್ಟು ಮಳೆಯಾಗಿದೆ. ಈ ಬಾರಿ ಮುಂಗಾರು ಮಳೆ ಎಲ್ಲೆಡೆ ಆಗಿಲ್ಲ ಎಂದು ಕೃಷಿ ಅಧಿಕಾರಿ ಶಿವಾನಂದ ಹಾವೇರಿ ತಿಳಿಸಿದರು.

ರಸಗೊಬ್ಬರ ವಿವರ: ಯೂರಿಯಾ 9656, ಡಿಎಪಿ 3875, ಎಂಒಪಿ 578, ಕಾಂಪ್ಲೆಕ್ಸ್‌ 9631, ಎಸ್‌ಎಸ್‌ಪಿ 270 ಒಟ್ಟು 24010 ಮೆಟ್ರಿಕ್‌ ಟನ್‌ ತಾಲ್ಲೂಕಿಗೆ ಕೇಂದ್ರ ಕಚೇರಿಯಿಂದ ರಸಗೊಬ್ಬರ ಹಂಚಿಕೆಯಾಗಿದ್ದು, ರೈತರಿಗೆ ಸಕಾಲದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಬಿತ್ತನೆ ಗುರಿ: 54923 ಹೆಕ್ಟೇರ್‌ ಬಿತ್ತನೆ ಗುರಿ, 40 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, ಭತ್ತ 6000 ಹೆಕ್ಟೇರ್‌, ದ್ವಿದಳ ಧಾನ್ಯ 1100 ಹೆಕ್ಟೇರ್‌, ಶೇಂಗಾ 1300 ಹೆಕ್ಟೇರ್‌, ಹತ್ತಿ 900 ಹೆಕ್ಟೇರ್‌ ಹಾಗೂ 5623 ಹೆಕ್ಟೇರ್‌ ಇತರೆ ಬಿತ್ತನೆ ಬೆಳೆ ಗುರಿ ಇದೆ.

ಪ್ರಸಕ್ತ ಮುಂಗಾರು ಹಂಗಾಮು ಜೂ.4ರಿಂದ ಪ್ರಾರಂಭವಾಗುತ್ತಿದ್ದು, ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳ ಕೊರತೆ ಇರುವುದಿಲ್ಲ. ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ತಾಲ್ಲೂಕಿನ 3 ರೈತ ಸಂಪರ್ಕ ಕೇಂದ್ರ, 2 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ 2 ಹೆಚ್ಚುವರಿ ಕೇಂದ್ರಗಳು ಸೇರಿದಂತೆ 7 ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.

ಮುಂಗಾರು ಹಂಗಾಮು ಮುನ್ನವೇ ರಾಣೆಬೆನ್ನೂರಿನ ತಾಲ್ಲೂಕಿನ ಯರೇಕುಪ್ಪಿ ರಸ್ತೆಯಲ್ಲಿ ರಾಣೆಬೆನ್ನೂರು ಪಟ್ಟಣದ ಹದ್ದಿನ ಬೈಪಾಸ್‌ ಬಳಿ ಕೃಷಿಕ ರಾಜು ಮರಡಿಬಣಕಾರ ಅವರು ಬಿತ್ತನೆಗೆ ಟ್ರಾಕ್ಟರ್‌ನಿಂದ ಹೊಲ ಹಸನುಗೊಳಿಸಿದರು.
ಮುಂಗಾರು ಹಂಗಾಮು ಮುನ್ನವೇ ರಾಣೆಬೆನ್ನೂರಿನ ತಾಲ್ಲೂಕಿನ ಯರೇಕುಪ್ಪಿ ರಸ್ತೆಯಲ್ಲಿ ರಾಣೆಬೆನ್ನೂರು ಪಟ್ಟಣದ ಹದ್ದಿನ ಬೈಪಾಸ್‌ ಬಳಿ ಕೃಷಿಕ ರಾಜು ಮರಡಿಬಣಕಾರ ಅವರು ಬಿತ್ತನೆಗೆ ಟ್ರಾಕ್ಟರ್‌ನಿಂದ ಹೊಲ ಹಸನುಗೊಳಿಸಿದರು.

Quote - ಬಿತ್ತನೆ ಬೀಜ ರಸಗೊಬ್ಬರ ಇತರೆ ಕೃಷಿ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿಗೆ ರೈತರಿಗೆ ತೊಂದರೆಯಾಗದೆಂದು 7 ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಚ್‌.ಬಿ.ಗೌಡಪ್ಪಳವರ ಸಹಾಯಕ ಕೃಷಿ ನಿರ್ದೇಶಕ

Quote - ರೈತರು ಸದ್ಯ ರೋಹಿಣಿ ಮಳೆ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಿತ್ತನೆ ಮಾಡಿದರೆ ಬೆಳೆಗಳಿಗೆ ರೋಗಗಳು ಕಡಿಮೆ. ಬೆಳೆ ಸಮೃದ್ಧಿಯಾಗಿ ಬರುತ್ತವೆ. ಆದರೆ ಮುಂಗಾರು ದುರ್ಬಲವಾಗಿದೆ ಚನ್ನಬಸಪ್ಪ ಕೊಂಬಳಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ

Cut-off box - ಇ- ಕೆವೈಸಿ ಕಡ್ಡಾಯ ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರ ವಿತರಣೆಗೆ ಕ್ಯೂಆರ್‌ ಕೋಡ್‌ ವ್ಯವಸ್ಥೆ ಅಳವಡಿಸಿದ್ದು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದಾಗ ರೈತರಿಗೆ ಬಿಲ್‌ ಜನರೇಟ್‌ ಆಗುತ್ತದೆ. ಬಿತ್ತನೆ ಬೀಜ ವಿತರಣೆ ಸಮಯದಲ್ಲಿ ಪ್ಯಾಕೇಟ್‌ ಸ್ಕ್ಯಾನ್‌ ಮಾಡಿ ಸೀಡ್‌ ಎಂಐಎಸ್‌ನಲ್ಲಿ ಕ್ಯೂಆರ್‌ ಕೋಡ್‌ ಜೊತೆಗೆ ಇತರೆ ದಾಖಲಾತಿ ನಮೂದಿಸಿದ ನಂತರವೇ ಬೀಜ ವಿತರಣೆ ಮಾಡಲಾಗುತ್ತದೆ. ಬೇರೆ ರೈತರ ಹೆಸರಿನಲ್ಲಿ ಬಿತ್ತನೆ ಬೀಜ ಮತ್ತು ಕೃಷಿ ಪರಿಕರಗಳನ್ನು ಖರೀದಿಸಲು ಸಾಧ್ಯವಿಲ್ಲ. ಒಂದು ವೇಳೆ ಖರೀದಿಸಿದರೆ ಮೊಬೈಲ್‌ ಸಂದೇಶ ತಕ್ಷಣ ರೈತರಿಗೆ ಹೋಗುತ್ತದೆ. ಕಾರಣ ರೈತರು ತಾವೇ ಖುದ್ದು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕೃಷಿ ಪರಿಕರಗಳನ್ನು ಖರೀದಿಸಬೇಕು. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ 14ನೇ ಕಂತಿನ ಆರ್ಥಿಕ ಸೌಲಭ್ಯ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು ಇ- ಕೆವೈಸಿ ಮಾಡಿಸದ ರೈತರು ಕೂಡಲೇ ಗ್ರಾಮ- ಒನ್‌ ಕೇಂದ್ರಕ್ಕೆ ತೆರಳಿ ಇ- ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್‌.ಬಿ.ಗೌಡಪ್ಪಳವರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT