ಮಂಗಳವಾರ, ಏಪ್ರಿಲ್ 20, 2021
32 °C
ಅಪಹರಿಸಿ ₹20 ಲಕ್ಷಕ್ಕೆ ಬೇಡಿಕೆ

ಕ್ರೈಂ ಧಾರಾವಾಹಿಗಳಿಂದ ಪ್ರೇರಣೆ: ಬಾಲಕನ ಕೊಲೆ, ಸಹೋದರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅಪರಾಧ ಧಾರಾವಾಹಿಗಳಿಂದ ಪ್ರೇರಣೆಗೊಂಡ ನಗರದ ಸಹೋದರರಿಬ್ಬರು, ₹20 ಲಕ್ಷಕ್ಕಾಗಿ ಬಾಲಕನನ್ನು ಅಪಹರಿಸಿ, ಹತ್ಯೆ ಮಾಡಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. 

ನಗರದ ಅಶ್ವಿನಿ ನಗರದ 1ನೇ ಕ್ರಾಸ್‌ ನಿವಾಸಿ ತೇಜಸ್‌ಗೌಡ ಜಗದೀಶ ಮಲ್ಲಿಕೇರಿ (11) ಕೊಲೆಯಾದ ಬಾಲಕ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರದ ವಿಶ್ವತೀರ್ಥ ನಗರದ ನಿವಾಸಿಗಳಾದ ರಿತೀಶ್‌ ಬಸಪ್ಪ ಮೇಟಿ (20) ಮತ್ತು ಈತನ ಸಹೋದರ 17 ವರ್ಷದ ಬಾಲಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

ನಾಪತ್ತೆ ದೂರು: ‘ತೇಜಸ್‌ಗೌಡ ಮನೆಯಿಂದ ಹೊರಹೋದವನು ಮರಳಿ ಮನೆಗೆ ಬಂದಿಲ್ಲ. ಕಾಣೆಯಾಗಿರಬಹುದು ಅಥವಾ ಯಾರೋ ಅವನನ್ನು ಅಪಹರಣ ಮಾಡಿರಬಹುದು. ಹೀಗಾಗಿ ಮಗನನ್ನು ಹುಡುಕಿಕೊಡಿ’ ಎಂದು ಮಾರ್ಚ್‌ 7ರಂದು ನಗರ ಪೊಲೀಸ್‌ ಠಾಣೆಗೆ ಬಾಲಕನ ತಂದೆ ಜಗದೀಶ ಮಲ್ಲಿಕೇರಿ ದೂರು ನೀಡಿದ್ದರು. 

ತಂಡ ರಚನೆ: ಎಸ್ಪಿ ಕೆ.ಜಿ.ದೇವರಾಜು ಅವರು, ಇನ್‌ಸ್ಪೆಕ್ಟರ್‌ ಪ್ರಹ್ಲಾದ ಚನ್ನಗಿರಿ ಅವರ ನೇತೃತ್ವದಲ್ಲಿ ಮಾರ್ಚ್‌ 8ರಂದು ತಂಡ ರಚಿಸಿ, ತನಿಖೆ ಕೈಗೊಂಡಿದ್ದರು. ಆರೋಪಿಗಳ ಪಾಲಕರು ತಮ್ಮ ಮಕ್ಕಳ ಬಗ್ಗೆ ಸಂಶಯ ವ್ಯಕ್ತಪಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ, ಪೊಲೀಸರು ಮಾರ್ಚ್‌ 12ರಂದು ಬೆಳಿಗ್ಗೆ ಶಿಗ್ಗಾವಿ ಸಮೀಪ ಆರೋಪಿಗಳನ್ನು ಬಂಧಿಸಿದ್ದಾರೆ. 

ಕಾರಿನಲ್ಲಿ ಅಪಹರಣ: ‘ಆರೋಪಿಗಳು ಟಿ.ವಿ.ಯಲ್ಲಿ ಬರುತ್ತಿದ್ದ ಅಪರಾಧ ಧಾರಾವಾಹಿಗಳನ್ನು ನೋಡಿ, ಅದರಿಂದ ಪ್ರೇರಣೆಗೊಂಡು ಈ ಕೃತ್ಯ ಮಾಡಿದ್ದಾರೆ. ಬಾಲಕನನ್ನು ಹಣಕ್ಕಾಗಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ಶವವನ್ನು ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ಹಾಕಿದ್ದಾರೆ’ ಎಂದು ಎಸ್ಪಿ ದೇವರಾಜು ತಿಳಿಸಿದರು. 

ಶವ ಸುಟ್ಟು ಹಾಕಿದ ಆರೋಪಿಗಳು: ‘ನಂತರ ಮಾರ್ಚ್‌ 10ರಂದು ಕೆರೆಯಲ್ಲಿ ತೇಲುತ್ತಿದ್ದ ಶವವನ್ನು ಮನೆಗೆ ತೆಗೆದುಕೊಂಡು ಬಂದು ತಮ್ಮ ಮನೆಯ ಹಿತ್ತಲಿನಲ್ಲಿ ಚೀಲಕಟ್ಟಿ ಇಟ್ಟಿದ್ದಾರೆ. ಶವ ದುರ್ವಾಸನೆ ಬರುತ್ತಿದ್ದ ಕಾರಣ, ಮನೆಯ ಸಮೀಪವೇ ಇದ್ದ ದೇವರಾಜ ಅರಸು ಹಾಸ್ಟೆಲ್‌ ಪಕ್ಕದಲ್ಲಿದ್ದ ಗಿಡಗಂಟಿಗಳು ಬೆಳೆದ ಜಾಗದಲ್ಲಿ ಶವವನ್ನು ಸುಟ್ಟು ಹಾಕಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು, ಹಗ್ಗ, ಬೆಂಕಿಪೊಟ್ಟಣ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು. 

‘ಆರೋಪಿ ರಿತೀಶ್‌ ಮೇಟಿ ನಾಲ್ಕು ವರ್ಷಗಳ ಹಿಂದೆ ಪಿಯ ಪರೀಕ್ಷೆಯಲ್ಲಿ ಅನುರ್ತೀರ್ಣಗೊಂಡಿದ್ದ. ಆತನ ತಮ್ಮ ದ್ವಿತೀಯ ಪಿಯು ಓದುತ್ತಿದ್ದಾನೆ. ಅತಿ ಕಡಿಮೆ ಸಮಯದಲ್ಲಿ ಹಣ ಮಾಡಬೇಕು ಎಂಬ ದುರಾಸೆಯಿಂದ ಈ ಕೃತ್ಯ ಎಸಗಿದ್ದಾರೆ. ಈ ಹಿಂದೆಯೂ ಬೇರೆ ಬಾಲಕನನ್ನು ಅಪಹರಣ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ’ ಎಂದು ಹೇಳಿದರು. 

ಮೂಳೆ, ತಲೆಬುರುಡೆ ಪತ್ತೆ: ಘಟನಾ ಸ್ಥಳದಲ್ಲಿ ಕೊಲೆಯಾದ ತೇಜಸ್‌ಗೌಡನ ತಲೆಬುರುಡೆ, ಮೂಳೆಗಳು ಪತ್ತೆಯಾಗಿವೆ. ಅವುಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ಇನ್ನೂ ಹೆಚ್ಚಿನ ಸಾಕ್ಷಿ ಕಲೆ ಹಾಕುತ್ತೇವೆ ಎಂದು ಎಸ್ಪಿ ದೇವರಾಜ ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು