ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ನಿವಾರಣೆಗೆ ಸ್ವಚ್ಛತೆಯೇ ಮದ್ದು: ಡಾ.ಉಷಾ ವೀರಾಪೂರ

ಪ್ರಜಾವಾಣಿ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಸ್ತ್ರೀರೋಗಗಳಿಗೆ ಪರಿಹಾರ ಸೂಚಿಸಿದ ಡಾ.ಉಷಾ ವೀರಾಪೂರ
Last Updated 11 ಸೆಪ್ಟೆಂಬರ್ 2022, 2:50 IST
ಅಕ್ಷರ ಗಾತ್ರ

ಹಾವೇರಿ:ಹೆಣ್ಣಿಗೆ ತಾಯ್ತನ ಪ್ರಕೃತಿ ಕೊಟ್ಟ ವಿಶಿಷ್ಟ ವರ. ಈ ತಾಯಂದಿರನ್ನು ಹಲವಾರು ರೋಗಗಳು ವಿವಿಧ ಹಂತಗಳಲ್ಲಿ ಬಾಧಿಸುತ್ತವೆ.ಹಾರ್ಮೋನ್ ವ್ಯತ್ಯಯ, ಸ್ತನ ಕ್ಯಾನ್ಸರ್‌,ಗರ್ಭಕೋಶದ ಸಮಸ್ಯೆ, ಮುಟ್ಟಿನ ತೊಂದರೆ, ಥೈರಾಯ್ಡ್‌ ಸಮಸ್ಯೆಗಳು ಸೇರಿದಂತೆ ಸ್ತ್ರೀಯರನ್ನು ಕಾಡುವ ರೋಗಗಳ ಬಗ್ಗೆ ಮಹಿಳಾ ಓದುಗರು ಕೇಳಿದ ಪ್ರಶ್ನೆಗಳಿಗೆ ಹಾವೇರಿಯ ಸ್ತ್ರೀರೋಗ ತಜ್ಞರಾದ ಡಾ.ಉಷಾ ವೀರಾಪೂರ ಅವರು ಪರಿಹಾರ ಮತ್ತು ಮಾಹಿತಿಯನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಿಕೊಟ್ಟರು.

ಹಾವೇರಿ ನಗರದಲ್ಲಿ ‘ಪ್ರಜಾವಾಣಿ’ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಫೋನ್‌ ಇನ್‌ ಕಾರ್ಯಕ್ರಮ’ದಲ್ಲಿ ಹಲವಾರು ಮಹಿಳೆಯರು ತಮ್ಮ ಸಮಸ್ಯೆ, ತೊಂದರೆಗಳನ್ನು ಹೇಳಿಕೊಂಡರು. ಸಮಸ್ಯೆಗಳಿಗೆ ಚಿಕಿತ್ಸೆಯ ಮಾಹಿತಿ, ಸಾಂತ್ವನ ಮತ್ತು ಸಮಾಧಾನದ ಉತ್ತರವನ್ನು ವೈದ್ಯರು ನೀಡಿದರು.

ಗರ್ಭಿಣಿ ಮತ್ತು ಬಾಣಂತಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸುವ ಜತೆಗೆ ಹೆರಿಗೆಯ ಬಗೆಗಿನ ಅನಗತ್ಯ ಆತಂಕವನ್ನು ದೂರ ಮಾಡಿದರು.ಪ್ರಗ್ನೆನ್ಸಿ ಸಮಸ್ಯೆಗಳು, ಉರಿಮೂತ್ರ, ಮೆನೋಪಾಸ್, ಅಂಡಾಶಯ ಸೋಂಕು.. ಇವೇ ಮೊದಲಾದ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಸೂಚಿಸಿದರು.

*ರಾಜೇಶ್ವರಿ ಬುಶೆಟ್ಟಿ, ಸವಣೂರು– ಸಿಸೇರಿಯನ್‌ ಇಲ್ಲದೆ ನಾರ್ಮಲ್‌ ಹೆರಿಗೆ ಮಾಡಿಸಲು ಸಾಧ್ಯವೇ?

– ಮಗುವಿನ ಹೃದಯ ಬಡಿತದಲ್ಲಿ ವ್ಯತ್ಯಾಸವಾದಾಗ, ಮಗುವಿನ ತಲೆ ದಪ್ಪವಿದ್ದರೆ, ಮಗು ಮಲ ಮಾಡಿಕೊಂಡು ಉಸಿರುಗಟ್ಟುತ್ತಿದ್ದರೆ, ದಿನಗಳು ತುಂಬಿದ್ದು ಹೆರಿಗೆ ನೋವು ಕಾಣಿಸಿಕೊಳ್ಳದಿದ್ದರೆ ಮುಂತಾದ ಕಾರಣಗಳಿಂದ ಸಿಸೇರಿಯನ್‌ ಮಾಡಬೇಕಾಗುತ್ತದೆ. ಇಲ್ಲದೇ ಹೋದರೆ ನಾರ್ಮಲ್‌ ಹೆರಿಗೆಯೇ ಆಗುತ್ತದೆ.

* ದೀಪಾ, ಅಕ್ಕಿಆಲೂರು– ಸ್ತನ ಕ್ಯಾನ್ಸರ್‌ ಬಗ್ಗೆ ತಿಳಿಸಿ

– ಬಲಗೈಯಿಂದ ಎಡಗೈ ಸ್ತನವನ್ನು, ಎಡಗೈಯಿಂದ ಬಲಗೈ ಸ್ತನವನ್ನು ಮುಟ್ಟಿ ನೋಡಿಕೊಳ್ಳುವ ಮೂಲಕ ಸ್ತನ್ಯ ಕ್ಯಾನ್ಸರ್‌ ಬಗ್ಗೆ ಪ್ರಾಥಮಿಕವಾಗಿ ಪರೀಕ್ಷೆ ಮಾಡಿಕೊಳ್ಳಬಹುದು. ನೋವು, ಗಡ್ಡೆ ಇರುವುದು ಅನುಭವಕ್ಕೆ ಬಂದರೆ ಕೂಡಲೇ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಬೇಕು.

*ರೇಖಾ, ಶಿಗ್ಗಾವಿ–ನನ್ನ ಮಗಳಿಗೆ ಮುಟ್ಟಿನ ತೊಂದರೆ ಕಾಡುತ್ತಿದೆ, ಪರಿಹಾರ ತಿಳಿಸಿ.

– 12ರಿಂದ 16ವರ್ಷದವರೆಗೆ ಸಾಮಾನ್ಯವಾಗಿ ಮುಟ್ಟಿನ ದಿನಾಂಕ ವ್ಯತ್ಯಾಸವಾಗುತ್ತದೆ. 18ರ ನಂತರ ಮುಟ್ಟಿನ ದಿನಾಂಕದಲ್ಲಿ ವ್ಯತ್ಯಯವಾಗುತ್ತಿದ್ದರೆ, ಪಿಸಿಓಡಿ ಹಾಗೂ ಥೈರಾಯ್ಡ್‌ ಸಮಸ್ಯೆ ಕಾರಣವಿರಬಹುದು. ಹಾರ್ಮೋನುಗಳ ವ್ಯತ್ಯಯದಿಂದ ಪಿಸಿಓಡಿ ಸಮಸ್ಯೆ ತಲೆದೋರುತ್ತದೆ. ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಸೇವಿಸಿದರೆ ಹಾರ್ಮೋನುಗಳಲ್ಲಿ ಸಮತೋಲನ ಸಾಧಿಸಬಹುದು. ಜತೆಗೆ ಪಿಸಿಓಡಿ ಸಮಸ್ಯೆಯೂ ಪರಿಹಾರವಾಗುತ್ತದೆ.

*ಫಿರ್ದೋಷಾ, ಹಾವೇರಿ– ಗರ್ಭ ಧರಿಸಿದ ಒಂದೂವರೆ ತಿಂಗಳಲ್ಲಿ ಎರಡು ಬಾರಿ ಗರ್ಭಪಾತವಾಗಿ, ಮಗು ಸಾವನ್ನಪ್ಪಿದೆ. ಪರಿಹಾರ ತಿಳಿಸಿ

– ಪಿಸಿಓಡಿ ಮತ್ತು ಹಾರ್ಮೋನುಗಳ ವ್ಯತ್ಯಯದಿಂದ ಈ ಸಮಸ್ಯೆಯಾಗಿರಬಹುದು. ಕೆಲವೊಮ್ಮೆ ಸೋಂಕಿನಿಂದಲೂ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.6 ತಿಂಗಳ ಕಾಲ ಹಾಲು, ಹಣ್ಣು, ಹಸಿ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ರೊಟ್ಟಿ ಮತ್ತು ಕಾಳಿನ ಪಲ್ಯವನ್ನು ಚೆನ್ನಾಗಿ ತಿನ್ನಬೇಕು. ವೈದ್ಯರ ಬಳಿ ಪರೀಕ್ಷಿಸಿಕೊಂಡರೆ ನಿಮಗೆ ವಿಟಮಿನ್‌ ಮಾತ್ರೆಗಳನ್ನು ಸಹ ಕೊಡುತ್ತಾರೆ.

*ಸರೋಜಾ ರಾಯ್ಕರ್‌, ಸವಣೂರು– ನನಗೆ 53 ವರ್ಷ. ಮೂರ್ನಾಲ್ಕು ವರ್ಷಗಳಿಂದ ಮುಟ್ಟಿನ ಸಮಸ್ಯೆ ಅನುಭವಿಸಿದ್ದೇನೆ. 3 ತಿಂಗಳಿಂದ ಮುಟ್ಟು ನಿಂತಿದ್ದು, ಖಚಿತಪಡಿಸಿಕೊಳ್ಳುವುದು ಹೇಗೆ?

– ನೀವು ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್ ಮಾಡಿಸಿಕೊಂಡಾಗ ಏನಾದರೂ ಸಮಸ್ಯೆ ಕಾಡಿತ್ತೇ? ಸ್ಕ್ರೀನಿಂಗ್ ಮಾಡಿಸುವ ಮೂಲಕ ಮುಟ್ಟು ನಿಂತಿರುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು. ನಿಮಗೆ ಸುಸ್ತು ಕಾಣಿಸಿಕೊಂಡಿದ್ದರೆ, ಪೌಷ್ಟಿಕ ಆಹಾರ ಸೇವನೆ ಮತ್ತು ನಿತ್ಯ ವಾಕಿಂಗ್‌ ಮಾಡಿ. ಆಡುಭಾಷೆಯಲ್ಲಿ ಹೇಳುವುದಾದರೆ, ‘ಗಟ್ಟಿ ಊಟ ಮಾಡಿ ಗಟ್ಟಿ ಕೆಲಸ ಮಾಡಿ’ ಎಂದರು.

*ಶ್ರುತಿ, ಹಾವನೂರು– ನನಗೆ ಮೂವರು ಮಕ್ಕಳು. ಗರ್ಭಕೋಶದ ಪಕ್ಕ ನೀರಿನ ಗುಳ್ಳೆ ಆಗಿದೆ. ಸಮಸ್ಯೆಗೆ ಪರಿಹಾರ ತಿಳಿಸಿ

– ಅಂಡಾಶಯ ಮತ್ತು ಟ್ಯೂಬ್‌ ಯಾವುದರಲ್ಲಿ ಗುಳ್ಳೆ ಕಾಣಿಸಿಕೊಂಡಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಅಂಡಾಶಯದಲ್ಲಿ 5 ಸೆಂ.ಮೀ. ಗಿಂತ ಕಡಿಮೆ ಇದ್ದರೆ, ಕರಗುವುದಕ್ಕೆ ಮಾತ್ರೆ ಕೊಡುತ್ತೇವೆ. 5 ಸೆಂ.ಮೀ. ಗಿಂತ ದೊಡ್ಡದಿದ್ದರೆ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ.

*ಮಮತಾ, ಹಿರೇಕೆರೂರು– ವೈದ್ಯರು ಕೊಟ್ಟ ದಿನಾಂಕಕ್ಕಿಂತ ಮೊದಲೇ ಹೆರಿಗೆಯಾಗುವುದು ಏಕೆ?

– 37ರಿಂದ 40 ವಾರಗಳ ನಡುವೆ ಯಾವ ಸಂದರ್ಭದಲ್ಲಾದರೂ ಹೆರಿಗೆ ನೋವು ಕಾಣಿಸಿಕೊಂಡರೆ ಮಗು ಆರೋಗ್ಯವಾಗಿ ಬೆಳವಣಿಗೆ ಹೊಂದಿರುತ್ತದೆ. ಹೀಗಾಗಿ ಈ ಸಮಯದಲ್ಲಿ ಹೆರಿಗೆಯಾದರೆ ಸಮಸ್ಯೆಯಿಲ್ಲ. ಕೆಲವೊಮ್ಮೆ 41ನೇ ವಾರದಲ್ಲೂ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ.

*ಲಲಿತಾ, ಸವಣೂರು– 2018ರಲ್ಲಿ ಕ್ಯಾನ್ಸರ್‌ ಆಗಿತ್ತು, ಈಗ ಗುಣಮುಖಳಾಗಿದ್ದೇನೆ. ವಿಪರೀತ ಮಧುಮೇಹವಿದೆ. ಜನನಾಂಗದ ಭಾಗದಲ್ಲಿ ನೆವೆ ಕಾಣಿಸಿಕೊಂಡಿದ್ದು, ಪರಿಹಾರ ತಿಳಿಸಿ.

– ಫಂಗಲ್‌ ಇನ್‌ಫೆಕ್ಷನ್‌ನಿಂದ ನೆವೆ ಕಾಣಿಸಿಕೊಂಡಿರಬಹುದು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಾಷ್‌ ಲಿಕ್ವಿಡ್‌ ಅನ್ನು ಬಳಸಬಹುದು. ನೀವು ಆಸ್ಪತ್ರೆಗೆ ಬಂದು ಭೇಟಿ ಮಾಡಿದರೆ, ಪರೀಕ್ಷಿಸಿ ಪರಿಹಾರ ನೀಡಲಾಗುವುದು.

*ಜ್ಯೋತಿ ಅಂಗಡಿ, ಸವಣೂರು– ಸೊಸೆಗೆ 26 ವರ್ಷ. ಪಿಸಿಓಡಿ ಸಮಸ್ಯೆಯಾಗಿದ್ದು, ಇನ್ನೂ ಮಕ್ಕಳಾಗಿಲ್ಲ.

– ಹಾರ್ಮೋನುಗಳ ವ್ಯತ್ಯಯದಿಂದ ಪಿಸಿಓಡಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 6 ತಿಂಗಳ ಕಾಲ ಪೌಷ್ಟಿಕ ಆಹಾರದ ಜತೆಗೆ ವಿಟಮಿನ್‌ ಮಾತ್ರೆಗಳನ್ನು ಸೇವಿಸಿದರೆ ಪಿಸಿಓಡಿ ಸಮಸ್ಯೆ ನಿವಾರಣೆಯಾಗುತ್ತದೆ. ಮಕ್ಕಳಾಗದೇ ಇರುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಒಮ್ಮೆ ನೀವು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೆ, ನಿಖರ ಕಾರಣ ಪತ್ತೆ ಹಚ್ಚಬಹುದು.

*ಪವಿತ್ರಾ ಗುತ್ತಲ– ರಕ್ತಹೀನತೆಯಿಂದ ಬಳಲುತ್ತಿದ್ದೇನೆ. ಪರಿಹಾರ ತಿಳಿಸಿ.

– ಹಿಮೋಗ್ಲೋಬಿನ್‌ 7.5 ಇದ್ದರೆ 6 ಇಂಜೆಕ್ಷನ್‌ ಮತ್ತು 8.5 ಇದ್ದರೆ 4 ಇಂಜೆಕ್ಷನ್‌ ಹಾಕಿಸಿಕೊಳ್ಳಬೇಕಾಗುತ್ತದೆ. ಜತೆಗೆ ಹಾಲು, ಹಣ್ಣು, ಹಸಿ ತರಕಾರಿ, ಕಾಳಿನ ಪಲ್ಯ ತಿನ್ನಬೇಕು.

ಕುದಿಸಿದ ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ ಕಾಡುತ್ತದೆ. ಹಾಲಿನಲ್ಲಿ ಯಥೇಚ್ಛವಾಗಿ ಬಿ12 ವಿಟಮಿನ್‌ ಇರುತ್ತದೆ. ಗರ್ಭಿಣಿಯರು ಸಸ್ಯಾಹಾರಿಗಳಾಗಿದ್ದರೆ, ಹಾಲು ಮತ್ತು ಹಾಲಿನ ಉತ್ಪನ್ನ ಸೇವಿಸುವುದು ಅಗತ್ಯ.

*ಬಸಮ್ಮ ತುಮ್ಮಿನಕಟ್ಟಿ– ಅಕ್ಕನ ಮಗಳು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಆರೈಕೆ ಬಗ್ಗೆ ತಿಳಿಸಿ

– ಗರ್ಭಿಣಿಯರು ಮುಖ್ಯವಾಗಿ ಆಹಾರ, ಸ್ವಚ್ಛತೆ ಮತ್ತು ಕೆಲಸ ಈ ಮೂರು ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಬೆಳಿಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಹಾಲು ಕುಡಿಯಬೇಕು.

ಇದರಿಂದ ಬಿ12 ವಿಟಮಿನ್‌ ಹೇರಳವಾಗಿ ದೇಹಕ್ಕೆ ಸಿಗುತ್ತದೆ. ನಿತ್ಯ 3ರಿಂದ 4 ಲೀಟರ್‌ ನೀರು ಕುಡಿಯಬೇಕು. 5 ಕೆ.ಜಿ.ಗಿಂತ ಹೆಚ್ಚಿನ ಭಾರ ಎತ್ತಬಾರದು. ಪೌಷ್ಟಿಕ ಆಹಾರವನ್ನು ತುಸು ಹೆಚ್ಚಾಗಿಯೇ ತಿನ್ನಬೇಕು.

ವೈದ್ಯರ ಸಲಹೆಗಳು

*ಹೆಣ್ಣಿನ ಜೀವನದಲ್ಲಿ ಋತುಚಕ್ರ ಒಂದು ನೈಸರ್ಗಿಕ ಜೈವಿಕಕ್ರಿಯೆ. ಇದರಲ್ಲಿ ಏರುಪೇರಾದಾಗ ಅದಕ್ಕೆ ಸರಿಯಾದ ಕಾರಣವನ್ನು ಪತ್ತೆಹಚ್ಚಿ, ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು.

* ಗರ್ಭಿಣಿಯರು ಮತ್ತು ಬಾಣಂತಿಯರು ನಿತ್ಯ 3ರಿಂದ 4 ಲೀಟರ್‌ ನೀರು, ಹಸಿ ತರಕಾರಿ, ಹಣ್ಣು, ಹಾಲು ಮುಂತಾದ ಪೌಷ್ಟಿಕ ಆಹಾರ ಸೇವಿಸಬೇಕು.

* ಗರ್ಭ ಧರಿಸುವ ನಡುವಿನ ಅವಧಿ ಕನಿಷ್ಠ 2 ವರ್ಷವಿರಬೇಕು. ಇಲ್ಲದಿದ್ದರೆ, ರಕ್ತಹೀನತೆ, ಗರ್ಭಪಾತ, ಮಾನಸಿಕ ಕಾಯಿಲೆ ಮುಂತಾದ ಸಮಸ್ಯೆಗಳಿಗೆ ಮಹಿಳೆ ತುತ್ತಾಗುವ ಸಾಧ್ಯತೆ ಇರುತ್ತದೆ.

* 6 ತಿಂಗಳವರೆಗೆ ಮಗುವಿಗೆ ತಾಯಿಯ ಎದೆ ಹಾಲನ್ನು ಮಾತ್ರ ಉಣಿಸಬೇಕು. ತಾಯಿ ಪೌಷ್ಟಿಕ ಆಹಾರ ಸೇವಿಸುವುದರಿಂದ ಮಗುವಿನಲ್ಲಿ ಕೂಡ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

* ಗರ್ಭಿಣಿಯರಿಗೆ ನಿದ್ದೆ, ಪೌಷ್ಟಿಕ ಆಹಾರ, ವಿಶ್ರಾಂತಿ ಬಹಳ ಮುಖ್ಯ. ಜತೆಗೆ ಮನೆಯವರ ಕಾಳಜಿ ಅತಿಮುಖ್ಯ.

* ಉರಿಮೂತ್ರ,ಮೂತ್ರನಾಳದ ಸೋಂಕು ತಡೆಗಟ್ಟಲು ವೈಯಕ್ತಿಕ ಸ್ವಚ್ಛತೆಗೆ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಬೇಕು

*****

ವೈದ್ಯರನ್ನು ಸಂಪರ್ಕಿಸಿ: ಡಾ.ಉಷಾ ವೀರಾಪೂರ, ಸ್ತ್ರೀರೋಗ ತಜ್ಞರು, ವೀರಾಪೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪಿ.ಬಿ.ರಸ್ತೆ, ಹಾವೇರಿ. ಮೊ: 9164115801

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT