ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಸಾರಿಗೆ ನೌಕರರಿಗಾಗಿ 3 ಸಾವಿರ ಕಾಟನ್‌ ಮಾಸ್ಕ್‌ ತಯಾರಿ!

ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ 543 ಬಸ್‌ಗಳಿಗೆ ಸೋಂಕು ನಿವಾರಕ ಸಿಂಪಡಣೆ
Last Updated 17 ಮಾರ್ಚ್ 2020, 9:17 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ಎಲ್ಲ ಬಸ್‌ಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುತ್ತಿದೆ.

ಈಗಾಗಲೇ 6 ಸ್ಲೀಪರ್‌, 4 ರಾಜಹಂಸ, 30 ನಗರ ಸಾರಿಗೆ (ಮಿಡಿ ಬಸ್‌) ಸೇರಿದಂತೆ ಒಟ್ಟು 543 ಬಸ್‌ಗಳಿಗೆ ಡೆಟಾಲ್‌ ಮತ್ತು ಫಿನಾಯಿಲ್‌ಗಳನ್ನು ಸಿಂಪಡಿಸಲಾಗಿದೆ. ಯಾರಿಗಾದರೂ ಸೋಂಕು ಇದ್ದರೆ, ಅವರಿಂದ ಇತರ ಪ್ರಯಾಣಿಕರಿಗೆ ಹರಡಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಸೋಂಕಿತ ವ್ಯಕ್ತಿಯು ಕೆಮ್ಮಿದರೆ ಮತ್ತು ಸೀನಿದರೆ ವೈರಾಣುಗಳು ಸುಲಭವಾಗಿ ಇತರ ಪ್ರಯಾಣಿಕರಿಗೂ ಹರಡುವ ಸಾಧ್ಯತೆ ಇರುತ್ತದೆ. ಕೊರೊನಾ ಸೋಂಕಿತ ವ್ಯಕ್ತಿಗಳು ಮುಟ್ಟಿದ ಸೀಟು, ಕಂಬಿಗಳನ್ನು ಇತರರು ಮುಟ್ಟುತ್ತಾರೆ. ನಂತರ ಅದೇ ಕೈಯಿಂದ ಕಣ್ಣು, ಮೂಗು, ಬಾಯಿ ಮುಟ್ಟಿಕೊಂಡಾಗ ವೈರಾಣುಗಳು ದೇಹವನ್ನು ಪ್ರವೇಶಿಸುತ್ತವೆ.ಈ ಹಿನ್ನೆಲೆಯಲ್ಲಿ ನಗರದ ಹೊರವಲಯದ ಡಿಪೋಗೆ ಬಂದ ಬಸ್‌ಗಳನ್ನು ಚೆನ್ನಾಗಿ ತೊಳೆಯುವುದು ಮತ್ತು ಸೋಂಕು ನಿವಾರಕ ಸಿಂಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಉಚಿತ ಮಾಸ್ಕ್‌ ವಿತರಿಸಲು ಸಿದ್ಧತೆ

‘ಮಾರುಕಟ್ಟೆಯಲ್ಲಿ ಮಾಸ್ಕ್‌ಗಳಿಗೆ ತೀವ್ರ ಅಭಾವವಿದೆ. ಹೀಗಾಗಿ ಹಾವೇರಿ ವಿಭಾಗದ 2,700 ನೌಕರರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದಲೇ ಉಚಿತವಾಗಿ ವಿತರಿಸಲು 3 ಸಾವಿರ ಕಾಟನ್‌ ಮಾಸ್ಕ್‌ಗಳನ್ನು ಡಿಪೋದ ಸಿಬ್ಬಂದಿಯಿಂದಲೇ ತಯಾರು ಮಾಡಿಸುತ್ತಿದ್ದೇವೆ. ನಾಲ್ಕೈದು ದಿನದೊಳಗೆ ಎಲ್ಲ ಸಿಬ್ಬಂದಿಗೆ ಕೊಡುವ ಗುರಿ ಹೊಂದಿದ್ದೇವೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌. ಜಗದೀಶ ಹೇಳಿದರು.

ನಿರ್ವಾಹಕ ಮತ್ತು ಚಾಲಕರು ನಿತ್ಯ 250ರಿಂದ 400 ಪ್ರಯಾಣಿಕರನ್ನು ಸಂಪರ್ಕಿಸುತ್ತಾರೆ. ಸದಾ ಜನದಟ್ಟಣೆ ಇರುವ ಬಸ್‌ ನಿಲ್ದಾಣಗಳಲ್ಲಿ ಓಡಾಡುತ್ತಾರೆ. ಹೀಗಾಗಿ ಎಲ್ಲರಿಗಿಂತ ಮುಖ್ಯವಾಗಿ ಸಾರಿಗೆ ಸಂಸ್ಥೆ ನೌಕರರು ಮಾಸ್ಕ್‌ಗಳನ್ನು ಧರಿಸಬೇಕು. ಜತೆಗೆ ಇತರರಿಗೂ ಮಾದರಿಯಾಗಬೇಕು ಎಂಬುದು ನಮ್ಮ ಆಶಯ ಎನ್ನುತ್ತಾರೆ ಜಗದೀಶ.

ಬಸ್‌ಗಳು ಖಾಲಿ ಖಾಲಿ!

ಸಾರಿಗೆ ಸಂಸ್ಥೆ ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ. ಅದರಲ್ಲೂ ಬೆಂಗಳೂರು, ಮುಂಬೈ, ಗೋವಾ, ಕಲಬುರ್ಗಿ ಮಾರ್ಗಗಳ ಬಸ್‌ಗಳಲ್ಲಿ 5ರಿಂದ 10 ಪ್ರಯಾಣಿಕರು ಮಾತ್ರ ಕಂಡು ಬರುತ್ತಿದ್ದಾರೆ. ಪ್ರವಾಸಿಗರು ಇಲ್ಲವೇ ಇಲ್ಲ ಎಂಬಂತ ಪರಿಸ್ಥಿತಿ ಇದೆ. ಅದರಲ್ಲೂ ತಾಲ್ಲೂಕು ಕೇಂದ್ರಗಳ ನಡುವೆ ಓಡಾಡುವ ಸ್ಥಳೀಯ ಪ್ರಯಾಣಿಕರೇ ಹೆಚ್ಚು.

‘ಶಿವಮೊಗ್ಗದಿಂದ ಪಣಜಿಗೆ ಹೋಗುವ ಬಸ್‌ನಲ್ಲಿ ಹಾವೇರಿಗೆ 6 ಸೀಟುಗಳು ಮಾತ್ರ ಇದ್ದವು. ಇಲ್ಲಿಂದ 8–10 ಪ್ರಯಾಣಿಕರು ಹುಬ್ಬಳ್ಳಿಗೆ ಹೋಗುವವರು ಇದ್ದಾರೆ. ನೇರ ಪಣಜಿಗೆ ಹೋಗುವ ಪ್ರಯಾಣಿಕರು ಇಲ್ಲವೇ ಇಲ್ಲ’ ಎಂದು ನಿರ್ವಾಹಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT