ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಗ್ಗೇರಿಕೆರೆಯಿಂದ ನಗರಕ್ಕೆ ನೀರು ಪೂರೈಸಿ: ಸಚಿವ ಶಿವಾನಂದ ಪಾಟೀಲ ಸೂಚನೆ

Published 8 ಮಾರ್ಚ್ 2024, 5:47 IST
Last Updated 8 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಹಾವೇರಿ: ‘ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ ಪ್ರಸ್ತುತ 1800 ಮಿಲಿಯನ್‌ ಲೀಟರ್‌ ನೀರು ಲಭ್ಯವಿದೆ. ಈ ನೀರನ್ನು ಪೈಪ್‌ಲೈನ್‌ ಮೂಲಕ ನೀರು ಶುದ್ಧೀಕರಣ ಘಟಕಕ್ಕೆ ರವಾನಿಸಿ, ಅಲ್ಲಿಂದ ನಗರದ ಮನೆ–ಮನೆಗಳಿಗೆ ಒಂದು ವಾರದೊಳಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ದೇವಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲಜೀವನ ಮಿಷನ್‌ ಹಾಗೂ ಕುಡಿಯುವ ನೀರಿನ ಪೂರೈಕೆ ಕುರಿತು ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

ಹಾಳಾಗಿರುವ ಪಂಪ್‌ಸೆಟ್‌ಗಳನ್ನು ಎರಡು ದಿನಗಳಲ್ಲಿ ದುರಸ್ತಿಗೊಳಿಸಬೇಕು ಇಲ್ಲವೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 100 ಎಚ್‌.ಪಿ. ಸಾಮರ್ಥ್ಯದ ಪಂಪ್‌ಸೆಟ್‌ ಹಾಗೂ ಹೆಸ್ಕಾಂ ವತಿಯಿಂದ ವಿದ್ಯುತ್‌ ಪರಿವರ್ತಕವನ್ನು ಬಾಡಿಗೆಗೆ ಪಡೆದು ಕೂಡಲೇ ನಗರಕ್ಕೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಹಾಗೂ ಅಕ್ಕಮಹಾದೇವಿ, ಮುಲ್ಲಾನಕೆರೆ ಮತ್ತು ದುಂಡಿಬಸವೇಶ್ವರ ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲ ಹೆಚ್ಚಿಸುವ ಮೂಲಕ ಸಾರ್ವಜನಿಕ ಕೊಳವೆಬಾವಿಗಳಲ್ಲಿ ಜಲ ಮರುಪೂರಣವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಾಕೀತು ಮಾಡಿದರು. 

ನೀರಿನ ಉಪಕರಣ ಹಾಳು:

2009ರಲ್ಲಿ ಹೆಗ್ಗೇರಿ ಕೆರೆಯಿಂದ ಹಾವೇರಿ ನಗರಕ್ಕೆ ನೀರು ಪೂರೈಸಲು ಅಳವಡಿಸಿದ್ದ ₹10 ಕೋಟಿ ಮೌಲ್ಯದ ನೀರಿನ ಉಪಕರಣಗಳಾದ ಎಲೆಕ್ಟ್ರಿಕಲ್‌ ಪೆನಲ್‌, ಮೋಟರ್‌ ಹಾಗೂ ಮೂರು ಪಂಪ್‌ಸೆಟ್‌ಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಇದಕ್ಕೆ ಯಾರು ಹೊಣೆ? ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮತ್ತು ನಗರಸಭೆ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ನದಿಪಾತ್ರದಲ್ಲಿ ಮೋಟರ್‌ಗಳ ಹಾವಳಿ:

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡಿಸಲಾಗಿದೆ. ಈ ನೀರನ್ನು ಕೃಷಿಗೆ ಬಳಕೆ ಮಾಡದಂತೆ ಈಗಾಗಲೇ ರಾಜ್ಯದಾದ್ಯಂತ ನಿಷೇಧ ಮಾಡಲಾಗಿದೆ. ಆದರೆ ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ಮೋಟರ್‌ಗಳಿಂದ ನೀರು ಎತ್ತುವ ದೂರುಗಳು ಬಂದಿವೆ. ಈ ಬಗ್ಗೆ ತಹಶೀಲ್ದಾರ್‌ಗಳು ಏಕೆ ಕ್ರಮ ಕೈಗೊಂಡಿಲ್ಲ. ಕೊಟ್ಟ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಗ್ಯತೆ ಇಲ್ಲಾ ಎಂದರೆ ಹೇಗೆ ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ಕೆಲಸ ಮಾಡುತ್ತೀರಿ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.

ಬರ ನಿರ್ವಹಣೆಗಾಗಿ ಪ್ರತಿ ಶಾಸಕರಿಗೆ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಿ, ಶಾಸಕರ ಸಮನ್ವಯದಿಂದ ಶಾಸಕರನ್ನು ಸಂಪರ್ಕಿಸಿ ಕ್ರಿಯಾಯೋಜನೆ ತಯಾರಿಸಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

317 ನೀರಿನ ಸಮಸ್ಯೆ?:

ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಸಭೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು, ಜಿಲ್ಲೆಯಲ್ಲಿ 156 ಗ್ರಾಮ ಪಂಚಾಯಿತಿಯ 317 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಅಂದಾಜು ಮಾಡಲಾಗಿದೆ. ಈ ಗ್ರಾಮಗಳಲ್ಲಿ 458 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಪ್ರಸ್ತುತ 62 ಗ್ರಾಮಗಳಿಗೆ 108 ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

₹50 ಲಕ್ಷ ಬಿಡುಗಡೆ:

ನಗರ ಪ್ರದೇಶದಲ್ಲಿ ಜಿಲ್ಲೆಯ ಎಂಟು ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ 238 ವಾರ್ಡ್‍ಗಳ ಪೈಕಿ 90 ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಮುಂದಿನ 44 ವಾರಗಳವರೆಗೆ ಮೇವಿನ ಲಭ್ಯತೆ ಇದೆ. ಹಸಿರು ಮೇವು ಬೆಳೆಯಲು 10,528 ಮೇವಿನ ಬೀಜದ ಕಿಟ್‍ಗಳನ್ನು ವಿತರಿಸಲಾಗಿದೆ. ಡಿಸೆಂಬರ್ 1ರಿಂದ ಈವರೆಗೆ ಕುಡಿಯುವ ನೀರು ಪೂರೈಕೆಗೆ ಖಾಸಗಿ ಕೊಳವೆಬಾವಿಗಳಿಗೆ ₹12,992 ಬಾಡಿಗೆ ಹಣ ಪಾವತಿಸಲಾಗಿದೆ. ಬರ ನಿರ್ವಹಣೆಗೆ ಪ್ರತಿ ತಹಶೀಲ್ದಾರ್‌ಗೆ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ವಿಪತ್ತು ನಿರ್ವಹಣಾ ಖಾತೆಯಲ್ಲಿ ₹8 ಕೋಟಿ ಹಣ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಶಾಸಕ ಪ್ರಕಾಶ ಕೋಳಿವಾಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಇದ್ದರು.

ಸಭೆಯಲ್ಲಿ ಹಾವೇರಿ ನಗರಸಭೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದಾರೆ
ಸಭೆಯಲ್ಲಿ ಹಾವೇರಿ ನಗರಸಭೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದಾರೆ
ಕುಡಿಯುವ ನೀರಿನ ಸಹಾಯವಾಣಿ ಸ್ಥಾಪನೆ ಕಾಟಾಚಾರದ ಕೆಲಸವಾಗಬಾರದು. ಸಮಸ್ಯೆಗಳ ದೂರು ಸ್ವೀಕರಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು
– ರುದ್ರಪ್ಪ ಲಮಾಣಿ ಹಾವೇರಿ ಶಾಸಕ 
ಖಾಸಗಿ ಕೊಳವೆಬಾವಿ ಮಾಲೀಕರು ಬಾಡಿಗೆಗೆ ನೀರು ಕೊಡಲು ಹಿಂದೇಟು ಹಾಕಿದರೆ ವಿಶೇಷ ಅಧಿಕಾರ ಬಳಸಿ ಕೊಳವೆಬಾವಿ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿ ನಿರ್ದೇಶನ ನೀಡಬೇಕು
– ಶ್ರೀನಿವಾಸ ಮಾನೆ ಹಾನಗಲ್ ಶಾಸಕ 

ಅಧಿಕಾರಿಗಳು ಕತ್ತೆ ಕಾಯ್ತಿದ್ರಾ?

‘ದುಂಡಿಬಸವೇಶ್ವರ ಕೆರೆ ದಂಡೆಯ ಮೇಲೆ ಅಕ್ರಮ ಮನೆಗಳ ನಿರ್ಮಾಣ ಮಾಡಿದ್ದರೂ ತಡೆದಿಲ್ಲ. ಮುಲ್ಲಾನ ಕೆರೆಗೆ ಚರಂಡಿ ನೀರು ಹರಿಯುತ್ತಿದ್ದರೂ ತಡೆದಿಲ್ಲ. ಇದನ್ನೂ ನೋಡಿಯೂ ಹಾವೇರಿ ನಗರಸಭೆ ಪೌರಾಯುಕ್ತ ನಗರಸಭೆ ಎಇಇ ಸುಮ್ಮನಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ? ತಾವೇನು ಕತ್ತೆ ಕಾಯ್ತಿದ್ರಾ? ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.  ಮುಲ್ಲಾನ ಕೆರೆಗೆ ಕೊಳಚೆ ನೀರು ಹರಿಯುವುದನ್ನು ತಡೆಯಬೇಕು. ಈ ಕುರಿತಂತೆ ಸಮಗ್ರ ವರದಿಯನ್ನು ನೀಡಬೇಕು. ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿರುವ ಪೌರಾಯುಕ್ತ ಪರಶುರಾಮ ಚಲವಾದಿ ವಿರುದ್ಧ ವರದಿ ನೀಡಬೇಕು. ಇಲ್ಲವಾದರೆ ನಿಮ್ಮನ್ನೇ ಅಮಾನತುಗೊಳಿಸಬೇಕಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ಮಮತಾ ಅವರಿಗೆ ಎಚ್ಚರಿಕೆ ನೀಡಿದರು.

ಹೆಗ್ಗೇರಿ ಕೆರೆ ಏಕೆ ತುಂಬಿಸಲಿಲ್ಲ?

ಹಾವೇರಿ ನಗರದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಾಗುತ್ತದೆ ಎಂಬ ಅರಿವಿದ್ದರೂ ಮಳೆಗಾಲದಲ್ಲಿ ಹೆಗ್ಗೇರಿ ಕೆರೆ ತುಂಬಿಸಲು ಆದ್ಯತೆ ನೀಡದ ತುಂಗಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸವರಾಜು ಅವರನ್ನು ಸಚಿವರು ತೀವ್ರ ತರಾಟೆಗೆ ತೆದುಕೊಂಡರು.  ಹಾವೇರಿ ಜಿಲ್ಲೆಯಲ್ಲಿ ಬ್ಯಾರೇಜ್ ಇಲ್ಲದ ಕಾರಣ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಬ್ಯಾರೇಜ್‌ ನಿರ್ಮಾಣಕ್ಕೆ ಸರ್ಕಾರಕ್ಕೆ ಮೇಲಿಂದ ಮೇಲೆ ಪ್ರಸ್ತಾವ ಸಲ್ಲಿಸಬೇಕಿತ್ತು. ಜಿಲ್ಲೆಯ ಬಗ್ಗೆ ನಿಮಗೆ ಕಳಕಳಿ ಇಲ್ಲವೇ? ಎಂದು ಸಚಿವರು ಪ್ರಶ್ನಿಸಿದರು.  ಪ್ರತಿ ಪ್ರಶ್ನೆಗೂ ಮೊಬೈಲ್‌ ಚೆಕ್ ಮಾಡುವುದನ್ನು ಬಿಟ್ಟು ಸಭೆಗೆ ಬರುವಾಗ ಅಗತ್ಯ ಮಾಹಿತಿಯನ್ನು ಸಿದ್ಧಪಡಿಸಿಕೊಂಡು ಬರಬೇಕು ಎಂದು ಎಂಜಿನಿಯರ್‌ಗೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ ತಾಕೀತು ಮಾಡಿದರು. 

‘ರಸ್ತೆ ಗುಂಡಿ ಮುಚ್ಚುವವರೆಗೂ ಬಿಲ್‌ ಪಾವತಿಸಬೇಡಿ’

ಜಲ ಜೀವನ್ ಮಿಷನ್ ಯೋಜನೆಯ ಪ್ರಗತಿ ಮಾಹಿತಿ ಪಡೆದ ಅವರು ಯೋಜನೆ ಪೂರ್ಣಗೊಂಡ ಕೆಲ ಗ್ರಾಮಗಳಲ್ಲಿ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಪರಿಶೀಲನೆ ನಡೆಸಿ ನಳದ ಪೈಪ್‍ಗಳನ್ನು ಹಾಕುವಾಗ ಸಿಸಿ ರಸ್ತೆಗಳನ್ನು ಅಗೆಯಲಾಗಿದೆ. ಆದರೆ ಗುತ್ತಿಗೆದಾರ ಅವುಗಳನ್ನು ಮುಚ್ಚಿಲ್ಲ. ಗುಂಡಿ ಮುಚ್ಚುವವರೆಗೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು. ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮವಾರು ಮಾಹಿತಿ ಸಂಗ್ರಹಿಸಿ ಆಯಾ ಶಾಸಕರೊಂದಿಗೆ ಚರ್ಚಿಸಿ ಕ್ರಮವಹಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT