ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ | ಶಿಕ್ಷಕರ ಕೊರತೆ; ಕಲಿಕೆಗೆ ತೊಡಕು

ಮೂಲಸೌಕರ್ಯ ವಂಚಿತ ಸರ್ಕಾರಿ ಶಾಲೆಗಳು: 250 ಮಕ್ಕಳಿಗೆ ಒಬ್ಬನೇ ಶಿಕ್ಷಕ
Published 24 ಜೂನ್ 2023, 5:03 IST
Last Updated 24 ಜೂನ್ 2023, 5:03 IST
ಅಕ್ಷರ ಗಾತ್ರ

ಎಂ.ವಿ.ಗಾಡದ

ಶಿಗ್ಗಾವಿ: ತಾಲ್ಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಒಂದಲ್ಲಾ ಒಂದು ರೀತಿಯ ಕೊರತೆಗಳಿಂದ ಬಳಲುತ್ತಿವೆ. ಅವ್ಯವಸ್ಥೆ ಮತ್ತು ಸಮಸ್ಯೆಗಳ ನಡುವೆಯೇ ಬಡ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಪರದಾಡುತ್ತಿದ್ದಾರೆ. 

ಶಾಲಾ ಕೊಠಡಿಗಳು ಸರಿಯಾಗಿದ್ದರೆ, ಪಾಠ ಮಾಡಲು ಪೂರ್ಣ ಪ್ರಮಾಣದ ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ಅಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಶಿಕ್ಷಕರು ಮತ್ತು ಮಕ್ಕಳು ಎರಡೂ ಇರುವ ಶಾಲಾ ಕೊಠಡಿಗಳು ಶಿಥಿಲಾವ್ಯವಸ್ಥೆ ಕಂಡಿವೆ. ಸರ್ಕಾರಿ ಶಾಲೆಗಳು ಬೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಂಡರು ಸಹ ಉತ್ತಮ ಆಟದ ಮೈದಾನ, ಶೌಚಾಲಯ, ಕಾಂಪೌಂಡ್‌, ಪಾಠೋಪಕರಣ, ಪೀಠೋಪಕರಣ, ಗ್ರಂಥಾಲಯ ಮುಂತಾದ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. 

ತಾಲ್ಲೂಕಿನಲ್ಲಿ 162 ಸರ್ಕಾರಿ ಪ್ರಾಥಮಿಕ ಶಾಲೆಗಳು, 25 ಸರ್ಕಾರಿ ಪ್ರೌಢಶಾಲೆಗಳಿವೆ. ಒಟ್ಟು 38,476 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಗೆ 290, ಪ್ರೌಢಶಾಲೆಗಳಿಗೆ 56 ಶಿಕ್ಷಕರ ಕೊರತೆ ಕಾಡುತ್ತಿದೆ. ಸರ್ಕಾರ ಪ್ರಸಕ್ತ ವರ್ಷಕ್ಕೆ ಪ್ರಾಥಮಿಕ ಶಾಲೆಗೆ 132, ಪ್ರೌಢಶಾಲೆಗೆ 46 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿದೆ.

168 ಶಿಕ್ಷಕರ ಕೊರತೆ:

ಇನ್ನೂ 168 ಶಿಕ್ಷಕರ ಕೊರತೆ ಕಾಡುತ್ತಿದೆ. ಸರ್ಕಾರ ಪೂರ್ಣ ಪ್ರಮಾಣದ ಅತಿಥಿ ಶಿಕ್ಷಕರನ್ನು ಸಹ ಮಂಜೂರಾತಿ ನೀಡಿಲ್ಲ. ಹೀಗಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ ಎಂದು ಮಕ್ಕಳ ಪಾಲಕ ಪ್ರವೀಣರಾಜ ಕಾಡನಪ್ಪನವರ ಬೇಸರ ವ್ಯಕ್ತಪಡಿಸುತ್ತಾರೆ. 

ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 250 ಮಕ್ಕಳಿದ್ದಾರೆ. ಅಲ್ಲಿ ಪಾಠ ಮಾಡಲು ಒಬ್ಬ ಶಿಕ್ಷಕ ಮತ್ತು ಆಟವಾಡಿಸಲು ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಒಬ್ಬನೇ ಶಿಕ್ಷಕ 1ರಿಂದ 7ನೇ ತರಗತಿವರೆಗೆ ನಿತ್ಯ ಪಾಠ ಮಾಡುವಂತಾಗಿದೆ.

ಏಕೈಕ ಶಿಕ್ಷಕ!

ಕಳೆದ ಎರಡು ವರ್ಷಗಳಿಂದ ಕಲಕಟ್ಟಿ ಶಾಲೆಯಲ್ಲಿ 26 ಮಕ್ಕಳಿದ್ದಾರೆ. ಅಲ್ಲಿ ಪೂರ್ಣ ಪ್ರಮಾಣ ನೇಮಕಾತಿ ಹೊಂದಿದ ಶಿಕ್ಷಕರಿಲ್ಲ. ಪ್ರತಿ ವರ್ಷ ನಿಯೋಜನೆಗೊಂಡ ಒಬ್ಬ ಶಿಕ್ಷಕರು 1ರಿಂದ 5ನೇ ತರಗತಿವರೆಗೆ ಪಾಠ ಮಾಡುವಂತಾಗಿದೆ.

ಮುಗಳಿಕಟ್ಟಿ ಶಾಲೆಯಲ್ಲಿ 110 ವಿದ್ಯಾರ್ಥಿಗಳಿದ್ದಾರೆ. ಅಲ್ಲಿಯೂ ಸಹ ಒಬ್ಬರೇ ಶಿಕ್ಷಕರಿದ್ದಾರೆ. ನೀರಲಕಟ್ಟಿ ಶಾಲೆಯಲ್ಲಿ 90 ಮಕ್ಕಳಿದ್ದಾರೆ. ಅಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಇದರಿಂದ ಪ್ರತಿಯೊಬ್ಬ ಮಕ್ಕಳ ಕಲಿಕೆಯ ಮೇಲೆ ನಿಗಾ ಇಡಲು ಶಿಕ್ಷಕರಿಗೆ ಸಾಧ್ಯವಾಗುವುದಿಲ್ಲ. 

ಮುಗಳಿಕಟ್ಟಿ, ಶಿಡ್ಲಾಪುರ ಪ್ರಾಥಮಿಕ ಶಾಲೆ, ಚಂದಾಪುರದಲ್ಲಿ ಪ್ರೌಢಶಾಲೆ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟು ಶಿಥಿಲಾವಸ್ಥೆ ಕಂಡಿವೆ. ಆದರೂ ಈವರೆಗೆ ಶಾಲೆ ನೂತನ ಕೊಠಡಿಗಳು ನಿರ್ಮಾಣವಾಗಿಲ್ಲ. ನಾರಾಯಣಪುರ, ಹುಣಸಿಕಟ್ಟಿ, ಕಲಕಟ್ಟಿ, ಶಿಗ್ಗಾವಿ ನಂ.2, ಬಂಕಾಪುರ ಹರಿಜನಕೇರಿ ಓಣಿಯಲ್ಲಿನ ಶಾಲೆಗಳಿಗೆ ಅಗತ್ಯ ಕೊಠಡಿಗಳು ನಿರ್ಮಿಸುವುದು ಅವಶ್ಯವಾಗಿದೆ. ಅಲ್ಲದೆ ನಿಡಗುಂದಿ, ಹಿರೇಮಣಕಟ್ಟಿ, ಕಲ್ಯಾಣ ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಮಕ್ಕಳ ಪಾಲಕ ರುದ್ರಗೌಡ ಒತ್ತಾಯಿಸಿದರು. 

ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 250 ಮಕ್ಕಳಿಗೆ ಒಬ್ಬರೇ ಶಿಕ್ಷಕ ಪಾಠ ಮಾಡುತ್ತಿರುವುದು
ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 250 ಮಕ್ಕಳಿಗೆ ಒಬ್ಬರೇ ಶಿಕ್ಷಕ ಪಾಠ ಮಾಡುತ್ತಿರುವುದು

‘ಸಿಎಂ ವಿಶೇಷ ಯೋಜನೆಯಡಿ 102 ಕೊಠಡಿ’

‘ವಿವೇಕ ಯೋಜನೆಯಡಿ 15 ಕೊಠಡಿ ಸಿ.ಎಂ ಅವರ ವಿಶೇಷ ಯೋಜನೆಯಡಿ 102 ಕೊಠಡಿಗಳನ್ನು ಮಂಜೂರು ಮಾಡಿದ್ದು ಅಮೃತ ಶಾಲೆ ಯೋಜನೆಯಡಿ 3 ಶಾಲೆಗಳಿಗೆ ಸ್ಮಾರ್ಟ್‌ ಕ್ಲಾಸ್ ನೀಡಲಾಗಿದೆ. 16 ಶಾಲೆಗಳಿಗೆ ಹೈಟೆಕ್ ಶೌಚಾಲಯಗಳ ನಿರ್ಮಾಣ 182 ಶಾಲೆಗಳಿಗೆ ಡೆಸ್ಕ್‌ಗಳನ್ನು ಶಾಸಕ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಅದರಿಂದಾಗಿ ಕೆಲವು ಶಾಲೆಗಳಿಗೆ ಸೌಲಭ್ಯ ಸಿಕ್ಕಂತಾಗಿದೆ’ ಎಂದು ಬಿಇಒ ಎಂ.ಬಿ. ಅಂಬಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT