ಭಾನುವಾರ, ಏಪ್ರಿಲ್ 2, 2023
31 °C
ಲಸಿಕೆ ಹಾಕಿಸಿಕೊಳ್ಳಲು ವಿದ್ಯಾರ್ಥಿನಿಯರ ಉತ್ಸಾಹ: 6 ದಿನಗಳಲ್ಲಿ 11 ಸಾವಿರ ಮಂದಿಗೆ ಲಸಿಕೆ

ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆಯ ‘ಶ್ರೀರಕ್ಷೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್‌ ಎರಡನೇ ಅಲೆ ಇಳಿಕೆಯಾಗುವ ಹೊತ್ತಿನಲ್ಲಿ ಜಿಲ್ಲೆಯ ಕಾಲೇಜುಗಳಲ್ಲಿ ಲಸಿಕಾ ಅಭಿಯಾನ ಚುರುಕುಗೊಂಡಿದೆ. ಪದವಿ ಕಾಲೇಜುಗಳು ಆರಂಭವಾಗುವ ಮುನ್ನ‌ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಹಾಕಬೇಕು ಎಂದು ಹಾವೇರಿ ಜಿಲ್ಲಾಡಳಿತ ಜೂನ್‌ 28ರಿಂದ ಜಿಲ್ಲೆಯಾದ್ಯಂತ ‘ವಿಶೇಷ ಅಭಿಯಾನ’ ಆರಂಭಿಸಿದೆ.

ಜಿಲ್ಲೆಯಲ್ಲಿರುವ 14 ಸರ್ಕಾರಿ ಪದವಿ ಕಾಲೇಜುಗಳು, 26 ಖಾಸಗಿ ಪದವಿ ಕಾಲೇಜುಗಳು ಹಾಗೂ ಐಟಿಐ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಬೋಧಕ–ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 29,516 ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಹಾಕಿಕೊಳ್ಳಲಾಗಿದೆ. 

‘ಜೂನ್‌ 28ರಿಂದ ಆಯ್ದ ಕಾಲೇಜುಗಳಲ್ಲಿ ಆರಂಭವಾದ ಲಸಿಕಾ ಅಭಿಯಾನದಲ್ಲಿ ಈಗಾಗಲೇ 11,185 (ಶೇ 38 ಗುರಿ ಸಾಧನೆ) ಮಂದಿಗೆ ಯಶಸ್ವಿಯಾಗಿ ಮೊದಲ ಕೋವಿಶೀಲ್ಡ್‌ ಡೋಸ್‌ ಹಾಕಲಾಗಿದೆ. ನಿತ್ಯ 12ರಿಂದ 13 ಕಾಲೇಜುಗಳಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ಆಯಾ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳೇ ಕಾಲೇಜುಗಳಿಗೆ ಲಸಿಕೆ ಹಂಚಿಕೆ ಮಾಡುತ್ತಿದ್ದಾರೆ. ಕಾಲೇಜುಗಳ ಪ್ರಾಂಶುಪಾಲರ ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿ, ಲಸಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜಯಾನಂದ ತಿಳಿಸಿದರು. 

ಸರ್ಕಾರಿ ಕಾಲೇಜುಗಳಲ್ಲಿ ಲಸಿಕೆ ಪ್ರಕ್ರಿಯೆ ಅತ್ಯಂತ ವೇಗವಾಗಿದ್ದರೆ, ಕೆಲವು ಖಾಸಗಿ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣ ಲಸಿಕೆ ಹಾಕಲು ತೊಡಕಾಗಿದೆ. 26 ಕಾಲೇಜುಗಳಲ್ಲಿ 13 ಕಾಲೇಜುಗಳ ಮಾಹಿತಿ ಮಾತ್ರ ಆರೋಗ್ಯ ಇಲಾಖೆಗೆ ಸಿಕ್ಕಿದೆ ಎನ್ನಲಾಗುತ್ತಿದೆ. 

ಜುಲೈ 7ರ ಒಳಗೆ ಲಸಿಕಾಕರಣ ಪೂರ್ಣಗೊಳಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ. ಲಸಿಕಾಕರಣ ಪೂರ್ಣಗೊಂಡ ನಂತರ ಭೌತಿಕ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ಚಿಂತನೆ ನಡೆಸಬಹುದು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾಲೇಜುಗಳಲ್ಲಿ ಲಸಿಕಾಕರಣಕ್ಕೆ ಒತ್ತು ನೀಡಿದ್ದು, ಕೊಠಡಿಗಳ ಸ್ಯಾನಿಟೈಸ್‌ ಮಾಡಲು ಹಾಗೂ ಸ್ವಚ್ಛತಾ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ.  

ಸಿಬ್ಬಂದಿಗೂ ಲಸಿಕೆ

ಹಿರೇಕೆರೂರ: ಪಟ್ಟಣದ ಸರ್ಕಾರಿ ಪದವಿ ಕಾಲೇಜು ಹಾಗೂ ಬಿ.ಆರ್.ತಂಬಾಕದ ಪದವಿ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಉಚಿತ ಲಸಿಕೆ ಅಭಿಯಾನ ನಡೆಯಿತು.

‘ಸರ್ಕಾರಿ ಪದವಿ ಕಾಲೇಜಿನಲ್ಲಿ 3 ದಿನ ನಡೆದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷಗಳಲ್ಲಿ ವ್ಯಾಸಂಗ ಮಾಡುತ್ತಿರುವ 858 ವಿದ್ಯಾರ್ಥಿಗಳ ಪೈಕಿ 620 ವಿದ್ಯಾರ್ಥಿಗಳು (ಶೇ 72) ಲಸಿಕೆ ಹಾಕಿಸಿಕೊಂಡರು’ ಎಂದು ಪ್ರಾಚಾರ್ಯ ಡಾ.ಎಸ್.ಪಿ.ಗೌಡರ ತಿಳಿಸಿದರು.

ಕೊಠಡಿಗಳಿಗೆ ‘ದ್ರಾವಣ ಸಿಂಪಡಣೆ’

ಬ್ಯಾಡಗಿ: ‘ಕೋವಿಡ್ 3ನೇ ಅಲೆ ಬಗ್ಗೆ ಆತಂಕವಿದ್ದು, ಕಾಲೇಜು ಆರಂಭಿಸಲು ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ. ಪ್ರತಿ ಕೊಠಡಿಯನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ’ ಎಂದು ಬಿಇಎಸ್ ವರ್ತಕರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ನಂದರಗಿ ಹೇಳಿದರು.

ತಾಲ್ಲೂಕಿನಲ್ಲಿ 18 ವರ್ಷದ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸುಹೀಲ್ ಹರವಿ ತಿಳಿಸಿದರು.

ಸರ್ಕಾರದ ಕ್ರಮ ಸ್ವಾಗತಾರ್ಹ

ರಟ್ಟೀಹಳ್ಳಿ: ‘ಕೊರೊನಾ ಸೋಂಕು ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದನ್ನು ಮನಗಂಡ ಸರ್ಕಾರ, ಇದೀಗ ಕಾಲೇಜು ಪ್ರಾರಂಭಿಸಬೇಕು ಎನ್ನುವ ನಿಟ್ಟಿನಲ್ಲಿ ಪದವಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಸುತ್ತಿದೆ. ಸರ್ಕಾರದ ಈ ಕ್ರಮ ಸ್ವಾಗತಾರ್ಹ’ ಎಂದು ರಟ್ಟೀಹಳ್ಳಿಯ ಪ್ರಿಯದರ್ಶಿನಿ ಪದವಿ ಕಾಲೇಜು ಪ್ರಾಚಾರ್ಯ ಎ.ಜಿ. ರಾಘವೇಂದ್ರ ತಿಳಿಸಿದರು.

ಕಾಲೇಜುಗಳಲ್ಲಿ ಲಸಿಕಾ ಅಭಿಯಾನದ ವಿವರ

27,486– ಅರ್ಹ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ

1343– ಬೋಧಕ ಸಿಬ್ಬಂದಿ ಸಂಖ್ಯೆ

687–ಬೋಧಕೇತರ ಸಿಬ್ಬಂದಿ ಸಂಖ್ಯೆ

29,516– ಒಟ್ಟು ಅರ್ಹ ಫಲಾನುಭವಿಗಳ ಸಂಖ್ಯೆ 

ದಿನಾಂಕ ನಿಗದಿಯಾಗಿಲ್ಲ

ಶಿಗ್ಗಾವಿ: ತಾಲ್ಲೂಕಿನಲ್ಲಿ ಸುಮಾರು ಮೂರು ಪದವಿ ಕಾಲೇಜು, ಒಂದು ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಪಶು ಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲಸಿಕೆ ಹಾಕಲಾಗುತ್ತಿದೆ. ಬಂಕಾಪುರ ಗುಡ್ಡದಚನ್ನಾಪುರ ಚನ್ನಕೇಶವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ 304 ಮಂದಿಗೆ ಲಸಿಕೆ ಹಾಕಬೇಕಾಗಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. 

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಒಟ್ಟು 873ರಲ್ಲಿ 396 ವಿದ್ಯಾರ್ಥಿಗಳು, 18 ಉಪನ್ಯಾಸಕರು ಲಸಿಕೆ ಪಡೆದಿದ್ದಾರೆ. ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ 869ರಲ್ಲಿ 540 ವಿದ್ಯಾರ್ಥಿಗಳು, 10 ಉಪನ್ಯಾಸಕರು ಮತ್ತು ರಂಭಾಪುರಿ ಪದವಿ ಕಾಲೇಜಿನಲ್ಲಿ 366ರಲ್ಲಿ 110 ವಿದ್ಯಾರ್ಥಿಗಳು ಹಾಗೂ ಎಲ್ಲ ಉಪನ್ಯಾಸಕರು ಲಸಿಕೆ ಪಡೆದಿದ್ದಾರೆ. 

‘ತಾಲ್ಲೂಕು ಕುನ್ನೂರ ಸರ್ಕಾರಿ ಪಶು ಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 18 ವರ್ಷ ಮೇಲ್ಪಟ್ಟಿರುವ 25 ವಿದ್ಯಾರ್ಥಿಗಳಿದ್ದು, ಕಾಲೇಜು ಪ್ರಾರಂಭವಾಗದ ಕಾರಣ ಅವರಿಗೆ ತಮ್ಮ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ತಿಳಿಸಲಾಗಿದೆ’ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಶಂಭುಲಿಂಗಪ್ಪ ಬಡ್ಡಿ ತಿಳಿಸಿದರು.

ಆಮೆಗತಿಯಲ್ಲಿ ಲಸಿಕಾ ಅಭಿಯಾನ

ಹಾನಗಲ್: ತಾಲ್ಲೂಕಿನಲ್ಲಿ 5 ಪ್ರಥಮದರ್ಜೆ ಕಾಲೇಜು ಮತ್ತು ಒಂದು ಸರ್ಕಾರಿ ಡಿಪ್ಲೊಮಾ ಕಾಲೇಜು ಇದೆ. ಪಟ್ಟಣದ ಮಲ್ಲಿಗಾರ ಮತ್ತು ಅಕ್ಕಿಆಲೂರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಇನ್ನುಳಿದ ಕಾಲೇಜುಗಳಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳ ಪಟ್ಟಿ ತಯಾರಿಸುವುದು, ಆರೋಗ್ಯ ಇಲಾಖೆಯೊಂದಿಗೆ ಸಂಪರ್ಕ ಮತ್ತಿತರ ಪ್ರಕ್ರಿಯೆಗಳು ನಡೆಯುತ್ತಿವೆ. 

‘ಎಲ್ಲ ಕಾಲೇಜುಗಳನ್ನು ಸಂಪರ್ಕಿಸಲಾಗಿದೆ. ಅವರ ಬೇಡಿಕೆ ಮೇರೆಗೆ ನಮ್ಮ ಸಿಬ್ಬಂದಿ ಕಾಲೇಜಿಗೆ ತೆರಳಿ ಲಸಿಕೆ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಲಸಿಕೆಯ ಕೊರತೆ ಇಲ್ಲ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ್‌ ತಿಳಿಸಿದ್ದಾರೆ.

ಪರೀಕ್ಷೆ ನಡೆಸಲು ಅನುಕೂಲ 

ರಾಣೆಬೆನ್ನೂರು: ಜುಲೈ 20ರ ನಂತರ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ತಾಲ್ಲೂಕಿನಲ್ಲಿ ಪದವಿ, ಎಂಜಿನಿಯರಿಂಗ್‌, ಬಿ.ಇಡಿ, ಕಾನೂನು, ಡಿಪ್ಲೊಮಾ ಮತ್ತು ಐಟಿಐ ಕಾಲೇಜುಗಳು ಸೇರಿದಂತೆ ಒಟ್ಟು 30 ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟು 8338 ಮಂದಿ ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿದ್ದಾರೆ. 

‘ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳ ಸಂಖ್ಯೆ 1,582 ಇದ್ದು, 318 ವಿದ್ಯಾರ್ಥಿಗಳು ಹಾಗೂ 32 ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಲಸಿಕಾಕರಣದ ನಂತರ ಆಫ್‌ಲೈನ್‌ ತರಗತಿಗಳ ಆರಂಭ ಮತ್ತು ಪರೀಕ್ಷೆ ನಡೆಸಲು ತುಂಬಾ ಅನುಕೂಲವಾಗಲಿದೆ’ ಎಂದು ರಾಣೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಲ್.ವಿ.ಸಂಗಳದ ತಿಳಿಸಿದರು. 

ವಿದ್ಯಾರ್ಥಿಗಳ ದಟ್ಟಣೆ ತಪ್ಪಿಸಲು ಹೆಚ್ಚಿನ ಲಸಿಕಾ ಕೇಂದ್ರಗಳ ಅಗತ್ಯವಿದೆ. ಕೆಲವು ಕೇಂದ್ರಗಳಲ್ಲಿ ಮಧ್ಯಾಹ್ನಕ್ಕೇ ಲಸಿಕೆ ಮುಗಿದಿರುತ್ತದೆ
– ತೇಜಸ್ವಿನಿ, ವಿದ್ಯಾರ್ಥಿನಿ, ಬ್ಯಾಡಗಿ

ನಮ್ಮ ಕಾಲೇಜಿನಲ್ಲಿ ಜೂನ್‌ 28ರಿಂದ ಲಸಿಕೆ ಅಭಿಯಾನ ಆರಂಭಿಸಲಾಗಿದೆ. 419 ವಿದ್ಯಾರ್ಥಿಗಳು ಮತ್ತು 29 ಸಿಬ್ಬಂದಿ ಡೋಸ್‌ ಪಡೆದಿದ್ದಾರೆ
– ಮಹ್ಮದ್‌ ಶರೀಫ್, ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾನಗಲ್‌

ಲಸಿಕಾ ಅಭಿಯಾನ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಂತ– ಹಂತವಾಗಿ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು
–ಡಾ.ಅರುಣಕುಮಾರ ಚಂದನ್, ತಾಲ್ಲೂಕು ನೋಡಲ್ ಅಧಿಕಾರಿ, ರಾಣೆಬೆನ್ನೂರು

ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿಕೊಂಡಿದ್ದೇನೆ. ನನ್ನ ಸಹಪಾಠಿಗಳಿಗೂ ಲಸಿಕೆ ಹಾಕಿಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದೇನೆ
– ಪಲ್ಲವಿ ಸುಣಗಾರ, ಬಿಕಾಂ ವಿದ್ಯಾರ್ಥಿನಿ, ರಾಣೆಬೆನ್ನೂರು

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು