ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೊಂದಿಗೆ ನಾವಿದ್ದೇವೆ: ನವೀನ ಗ್ಯಾನಗೌಡರ್‌ ಪೋಷಕರಿಗೆ ಮೋದಿ ಸಾಂತ್ವನ

ಪ್ರಧಾನಿ ಭೇಟಿ ಮಾಡಿದ ನವೀನ ಗ್ಯಾನಗೌಡರ್‌ ಪೋಷಕರು
Last Updated 20 ಜೂನ್ 2022, 19:03 IST
ಅಕ್ಷರ ಗಾತ್ರ

ಹಾವೇರಿ: ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಮೃತಪಟ್ಟಿದ್ದ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ ಗ್ಯಾನಗೌಡರ್‌ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು.

‘ನಿಮ್ಮ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದೀರಿ. ನಿಮ್ಮೊಂದಿಗೆ ನಾವು ಇರುತ್ತೇವೆ. ಮಗನ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದೀರಿ’ ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗಿದ್ದರು.

‘ಉಕ್ರೇನ್‌ನಿಂದ ಭಾರತಕ್ಕೆ ಹಿಂದಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ನೆರವಾಗಬೇಕು’ ಎಂದು ಈ ವೇಳೆ ಶೇಖರಪ್ಪ ಗ್ಯಾನಗೌಡರ ಮನವಿ ಮಾಡಿದರು.

‘ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಯುದ್ಧದ ವಾತಾವರಣ ಸಂಪೂರ್ಣವಾಗಿ ನಿಲ್ಲುವವರೆಗೂ ಉಕ್ರೇನ್‌ಗೆ ವಿದ್ಯಾರ್ಥಿಗಳನ್ನು ಕಳುಹಿಸುವುದು ಕಷ್ಟ. ಆದ್ದರಿಂದ ಅಕ್ಕಪಕ್ಕದ ದೇಶಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲ ಕಲ್ಪಿಸಲು ಯೋಜಿಸಲಾಗುತ್ತಿದೆ’ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು ಎಂದು ಶೇಖರಪ್ಪ ಮಾಹಿತಿ ನೀಡಿದರು.

ಉಕ್ರೇನ್‌ನ ಕಾರ್ಕೀವ್‌ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ನವೀನ್ ವೈದ್ಯಕೀಯ ಶಿಕ್ಷಣ ಮಾಡುತ್ತಿದ್ದರು. ಕಳೆದ ಮಾರ್ಚ್‌ 1ರಂದು ಉಕ್ರೇನ್‌ನಲ್ಲಿ ರಷ್ಯಾ ದಾಳಿಯಿಂದ ನವೀನ್ ಮೃತಪಟ್ಟಿದ್ದರು. ಅದೇ ದಿನ ನವೀನ್ ಪೋಷಕರಿಗೆ ಪ್ರಧಾನಿ ಮೋದಿ ಅವರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದನ್ನು ಸ್ಮರಿಸಬಹುದು. ಅಲ್ಲದೇ ಯುದ್ಧ ಪೀಡಿತ ಉಕ್ರೇನ್‌ನಿಂದ ನವೀನ್ ಮೃತದೇಹವನ್ನು ತಾಯ್ನಾಡಿಗೆ ತರಲು ವಿಶೇಷ ಪ್ರಯತ್ನ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT