ಶನಿವಾರ, ಜುಲೈ 2, 2022
22 °C
ಗರ್ಭಕೋಶಕ್ಕೆ ಕತ್ತರಿ

ಸಾಯ್ತೀರಿ ಅಂತ ಹೆದ್ರಿಸಿ, ಬದುಕಿಗೇ ಕೊಳ್ಳಿ ಇಟ್ಟ: ಪ್ಯಾಕೇಜ್‌ ಘೋಷಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಹೊಟ್ಟೆ ನೋವು ಅಂತ ಹೋದ ಮಹಿಳೆಯರಿಗೆಲ್ಲ, ಸ್ಕ್ಯಾನಿಂಗ್‌ ಮಾಡಿಸಿ ನಿಮ್ಮ ಗರ್ಭಚೀಲ ಕೊಳೆಯುತ್ತಿದೆ, ಅದನ್ನು ತೆಗೆದು ಹಾಕಲು ಕೂಡಲೇ ಆಪರೇಷನ್‌ ಮಾಡಬೇಕು. ಇಲ್ಲದಿದ್ದರೆ ನೀವು ಸಾಯ್ತೀರಿ ಅಂತ ಜೀವಭಯ ಹುಟ್ಟಿಸಿ, ನೂರಾರು ಬಡ ಮಹಿಳೆಯರ ಬದುಕಿಗೇ ಕೊಳ್ಳಿ ಇಟ್ಟ’ ಎಂದು ಯರೇಕುಪ್ಪಿ ಗ್ರಾಮದ ಗಂಗವ್ವ ಅಜ್ಜೇರ ಅವರು ಸರ್ಜನ್‌ ಡಾ.ಶಾಂತ ಪಿ. ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಕಣ್ಣೀರಾದರು. 

1522 ಬಡ ಮಹಿಳೆಯರ ಗರ್ಭಕೋಶವನ್ನು ಅನಧಿಕೃತವಾಗಿ ತೆಗೆದು ಹಾಕಿರುವ ಪ್ರಕರಣದಲ್ಲಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ರಾಣೆಬೆನ್ನೂರಿನಿಂದ ಶಿಗ್ಗಾವಿಯ ಮುಖ್ಯಮಂತ್ರಿ ಮನೆವರೆಗೆ ನೂರಾರು ಮಹಿಳೆಯರು ಕೈಗೊಂಡಿದ್ದ ಪಾದಯಾತ್ರೆ ಮಂಗಳವಾರ ಹಾವೇರಿ ತಾಲ್ಲೂಕಿನ ನೆಲೋಗಲ್ಲ ಹೊರವಲಯವನ್ನು ತಲುಪಿತು. ಅಲ್ಲಿ ನೊಂದ ಮಹಿಳೆಯರು ತಮ್ಮ ದುಃಖವನ್ನು ತೋಡಿಕೊಂಡರು. 

‘ಎಂಟು ದಿನಕ್ಕೊಮ್ಮೆ ಹೊಟ್ಟೆ ನೋವು ಬರುತ್ತಿದೆ ಎಂದು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯ ಡಾ.ಶಾಂತ ಬಳಿ ಹೋದೆವು. ಸ್ಕ್ಯಾನಿಂಗ್‌ ಮಾಡಿಸಿ, ನಿಮ್ಮ ಹೊಟ್ಟೆಯಲ್ಲಿ ಗಂಟು ಬೆಳೆದಿದೆ. ಹಾಗೆಯೇ ಬಿಟ್ಟರೆ ಕ್ಯಾನ್ಸರ್‌ಗೆ ತಿರುಗುತ್ತದೆ. ಕೂಡಲೇ ಅಪರೇಷನ್‌ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಆಸ್ಪತ್ರೆ ಎದುರಿನ ಮೆಡಿಕಲ್‌ ಸ್ಟೋರ್‌ನಲ್ಲಿ ₹10 ಸಾವಿರ ಕಟ್ಟಿ, ಮೆಡಿಕಲ್‌ ಕಿಟ್‌ ತಂದು ವೈದ್ಯರಿಗೆ ಕೊಟ್ಟೆವು. ನನಗೆ ಮಾತ್ರವಲ್ಲ, ನನ್ನ ತಾಯಿಗೂ ಗರ್ಭಾಶಯ ಕತ್ತರಿಸಿ ತೆಗೆದಿದ್ದಾರೆ’ ಎಂದು ಬ್ಯಾಡಗಿ ತಾಲ್ಲೂಕಿನ ಕಲ್ಲೇದೇವರ ಗ್ರಾಮದ ಲಲಿತಾ ಲಮಾಣಿ ಕಣ್ಣೀರು ಸುರಿಸಿದರು.  

‘ನನ್ನ ಪತ್ನಿ ಗೀತಾಗೆ ಹೊಟ್ಟೆ ನುಲಿ ಬರುತ್ತದೆ ಎಂದು ತೋರಿಸಲು ಹೋದಾಗ, ಆಪರೇಷನ್‌ ಮಾಡಿ ಗರ್ಭಾಶಯ ತೆಗೆದ್ರು. ಮೆಡಿಕಲ್‌ ಸ್ಟೋರ್‌ನಲ್ಲಿ ₹30 ಸಾವಿರ ಹಣ ಕಟ್ಟಿ ಕಿಟ್‌ ತಂದುಕೊಟ್ಟಿದ್ದೆವು. ಹೊಟ್ಟೆ ನೋವು ಕಡಿಮೆಯಾಗಲಿಲ್ಲ. ಹೊಟ್ಟೆ ಬಾವು ಬಂದಿತು. ಮಂಗಳೂರು ಆಸ್ಪತ್ರೆಗೆ ಕರೆದೊಯ್ದರೂ ನನ್ನ ಪತ್ನಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗರ್ಭಾಶಯ ತೆಗೆದ ಎಂಟೇ ತಿಂಗಳಲ್ಲೇ ತೀರಿ ಹೋದಳು’ ಎಂದು ಪ್ರಕಾಶ ಬೆನ್ನೂರು ಪತ್ನಿಯ ಫೋಟೊ ತೋರಿಸುತ್ತಾ ಸಂಕಟ ತೋಡಿಕೊಂಡರು. 

ಹೀಗೆ ಅಲ್ಲಿಗೆ ಬಂದಿದ್ದ ಪ್ರತಿಯೊಬ್ಬ ಮಹಿಳೆಯರು ತಮ್ಮ ಕಣ್ಣೀರ ಕತೆಯನ್ನು ತೋಡಿಕೊಂಡರು. ಗರ್ಭಕೋಶ ತೆಗೆದಿರುವ ಸರ್ಜನ್‌ ಡಾ.ಶಾಂತ ಪಿ. ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ‘ವಿಶೇಷ ಆರ್ಥಿಕ ಪ್ಯಾಕೇಜ್‌’ ಘೋಷಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. 

ಮನವೊಲಿಕೆ ಪ್ರಯತ್ನ ವಿಫಲ: ಧರಣಿ ಕುಳಿತ ವಿಷಯ ತಿಳಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿತು. ಮುಖಂಡರನ್ನು ಮನವೊಲಿಸಲು ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಯಿತು. ನಂತರ ಪ್ರತಿಭಟನಾಕಾರರನ್ನು ಬಂಧಿಸುವುದಾಗಿ ಪೊಲೀಸ್‌ ಅಧಿಕಾರಿಗಳು ನೀಡಿದ ಎಚ್ಚರಿಕೆಗೂ ಮಹಿಳೆಯರು ಜಗ್ಗಲಿಲ್ಲ. ಪ್ರತಿಭಟನಾಕಾರರು ಮತ್ತು ಅಧಿಕಾರಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. 

‘ಭರವಸೆ ಬೇಡ, ಈಗಲೇ ಪರಿಹಾರ ಘೋಷಿಸಿ’
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲು ಆಯ್ದ ಮುಖಂಡರು ಮತ್ತು ಮಹಿಳೆಯರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸ್‌ ವಾಹನದಲ್ಲಿ ಕರೆದೊಯ್ಯಲಾಯಿತು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಮುಖಂಡರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್‌ ಶಿವರಾಮ ಹೆಬ್ಬಾರ್‌ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ‘ಕೇವಲ ಭರವಸೆ ನೀಡಿದರೆ ಸಾಲದು, ಈಗಲೇ ನಿರ್ಧಾರ ಪ್ರಕಟಿಸಬೇಕು’ ಎಂದು ಮುಖಂಡರು ಪಟ್ಟು ಹಿಡಿದರು. ಹೀಗಾಗಿ ಸಂಧಾನ ಸಭೆ ಕೂಡ ಫಲಪ್ರದವಾಗಲಿಲ್ಲ. 

ಜಿಲ್ಲಾಧಿಕಾರಿ ಕಚೇರಿಯಿಂದ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಮುಖಂಡರು ಮತ್ತೆ ಧರಣಿ ಕುಳಿತರು. ಸಂಜೆ 6.30ರವರೆಗೂ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಹಗ್ಗ ಜಗ್ಗಾಟ ಮುಂದುವರಿಯಿತು. ನಂತರ ಶಿಗ್ಗಾವಿಯಲ್ಲಿ ಏಪ್ರಿಲ್‌ 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸುತ್ತೇವೆ ಎಂದು ಪೊಲೀಸ್‌ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದರು. 

ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ, ಶಿವಪುತ್ರಪ್ಪ ಮಲ್ಲಾಡದ, ವಕೀಲ ಎಸ್.ಡಿ. ಹಿರೇಮಠ, ಹನುಮಂತಪ್ಪ ಕಬ್ಬಾರ, ಜಗದೀಶ ಕೆರೂರ ಹಾಗೂ ನೂರಾರು ಮಹಿಳೆಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು