ಮಂಗಳವಾರ, ಜನವರಿ 25, 2022
24 °C
ರಾಜ್ಯ ಅಭಿವೃದ್ಧಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿಕೆ

ಬೀದರ್ ಭೇಟಿಗೆ ಇಸ್ರೇಲ್ ಮಾಧ್ಯಮ ಸಲಹೆಗಾರ್ತಿ ಉತ್ಸುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಸ್ರೇಲ್ ಪ್ರಧಾನಿ ಅವರ ಮಾಧ್ಯಮ ಸಲಹೆಗಾರ್ತಿ ಅವಿಶಾಗ್ ಅವಿನೋಮ್ ಅವರು ಬೀದರ್ ಭೇಟಿಗೆ ಉತ್ಸುಕತೆ ತೋರಿದ್ದಾರೆ ಎಂದು ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದ್ದಾರೆ.

ಭಾರತ ಪ್ರವಾಸದಲ್ಲಿ ಇರುವ ಅವರಿಗೆ ನವದೆಹಲಿಯಲ್ಲಿ ಬಿದ್ರಿ ಕಲೆಯ ಸ್ಮರಣಿಕೆ ನೀಡಿ ಸ್ವಾಗತಿಸಿ, ಐತಿಹಾಸಿಕ ಬೀದರ್ ಜಿಲ್ಲೆಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದ್ದಾರೆ.

ಅವಿಶಾಗ್ ಅವಿನೋಮ್ ಅವರು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿ, ಪಟ್ಟದಕಲ್ಲು, ಐಹೊಳೆಗೆ ಭೇಟಿ ಕೊಡಲಿದ್ದಾರೆ. ಅವರಿಗೆ ವಾಸ್ತುಶಿಲ್ಪ ವೈಭವಕ್ಕೆ ಹೆಸರಾದ ಜಲಸಂಗಿಯ ಮಹಾದೇವ ಮಂದಿರ ಸೇರಿದಂತೆ ಬೀದರ್‍ನಲ್ಲಿ ಇರುವ ಪೌರಾಣಿಕ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳ ಮಾಹಿತಿ ನೀಡಲಾಗಿದೆ. ವಿಶ್ವ ಪ್ರಸಿದ್ಧ ಬಿದ್ರಿ ಕಲೆಯನ್ನೂ ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೀದರ್ ತಾಣಗಳ ವೀಕ್ಷಣೆ ಬಯಕೆ ವ್ಯಕ್ತಪಡಿಸಿದ್ದಾರೆ. ಅವರ ಭೇಟಿಯಿಂದ ಇಸ್ರೇಲ್-ಭಾರತ ಸಂಬಂಧ ವೃದ್ಧಿ, ಪ್ರವಾಸೋದ್ಯಮ, ಬಿದ್ರಿ ಕಲೆ ಬೆಳವಣಿಗೆಗೆ ನೆರವಾಗಲಿದೆ. ಇಲ್ಲಿಗೆ ಭೇಟಿ ನೀಡುವ ಇಸ್ರೇಲ್ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಬಿದ್ರಿ ಕಲೆಗೆ ಅಲ್ಲಿ ಮಾರುಕಟ್ಟೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆ ಮಾಜಿ ಸದಸ್ಯರೂ ಆದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷ ತರುಣ ವಿಜಯ್ ಅವರೂ ಬೀದರ್ ಭೇಟಿಯ ತಮ್ಮ ಆಮಂತ್ರಣಕ್ಕೆ ಸಮ್ಮತಿಸಿದ್ದಾರೆ. ಐತಿಹಾಸಿಕ ಮಹತ್ವ ಹೊಂದಿರುವ ಬೀದರ್ ಕೋಟೆ, ಬಸವಕಲ್ಯಾಣದ ಅನುಭವ ಮಂಟಪ ಸೇರಿದಂತೆ ಜಿಲ್ಲೆಯಲ್ಲಿರುವ ವಿವಿಧ ತಾಣಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳ ಬಗ್ಗೆ ಅವರ ಗಮನ ಸೆಳೆಯಲಾಗಿದೆ ಎಂದು ಹೇಳಿದ್ದಾರೆ.

ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಸದ್ಯ ಬೆಂಗಳೂರಿನಿಂದ ಹಂಪಿವರೆಗೆ ಇರುವ ಗೋಲ್ಡನ್ ಚಾರಿಯಟ್ ಪ್ರವಾಸಿ ರೈಲನ್ನು ಬೀದರ್‌ವರೆಗೂ ವಿಸ್ತರಿಸಲು ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಕೃಷಿ ಮತ್ತು ಪರಿಸರ ಖಾತೆ ರಾಜ್ಯ ಸಚಿವರ ಮಾಧ್ಯಮ ಸಲಹೆಗಾರ ಪಂಕಜ್ ಮಿಶ್ರಾ, ಪ್ರಮುಖರಾದ ದಿಕ್ಷಾ ಕೌಶಿಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.