ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪೂರ–ಮಹಿಬೂಬನಗರ ಹೆದ್ದಾರಿಗೆ ಕೇಂದ್ರ ಅಸ್ತು: ಮೈದಳೆಯಲಿದೆ ಚತುಷ್ಪಥ ರಸ್ತೆ

Published 14 ಅಕ್ಟೋಬರ್ 2023, 23:30 IST
Last Updated 14 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿಗೆ ಕೇಂದ್ರ ಭೂಸಾರಿಗೆ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಕೊಡುಗೆ ನೀಡಿದೆ.

ರಾಜ್ಯದಿಂದ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರದ ಭೂಸಾರಿಗೆ ಸಚಿವಾಲಯದ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಕ್ರಿಯಾಯೋಜನೆಗೆ ಮಂಜೂರಾತಿ ಸಿಕ್ಕಿದ್ದರಿಂದ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈಗಾಗಲೇ ವಿಸ್ತೃತ ಯೋಜನಾ ವರದಿ ತಯಾರಿ ಕೆಲಸವನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದು, ಸ್ಥಳ ಪರಿಶೀಲನೆ ನಡೆದು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.

ಒಟ್ಟು 32 ಕಿ.ಮೀ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನಲ್ಲಿ ಹಾದು ಹೋಗಲಿದೆ. ಇದರಲ್ಲಿ ಈಗಾಗಲೇ 16 ಕಿ.ಮೀ ರಸ್ತೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ 4 ವರ್ಷಗಳ ಹಿಂದೆಯೇ ಅಭಿವೃದ್ಧಿ ಪಡಿಸಿದೆ. ಖಾಸಗಿಯವರೊಂದಿಗಿನ ಒಪ್ಪಂದದ ಅವಧಿ ಮುಗಿಯುವವರೆಗೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲು ತೊಡಕಾಗಿದೆ. ಹೀಗಾಗಿ ಇದರ ಮುಂದಿನ ಭಾಗದಲ್ಲಿ ಬರುವ ಚಿಂಚೋಳಿಯಿಂದ ಮಿರಿಯಾಣ(ತೆಲಂಗಾಣ) ಗಡಿವರೆಗೆ 15.8 ಕಿ.ಮೀ ಚತುಷ್ಪಥದ ಹೆದ್ದಾರಿ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.

ಇದರಲ್ಲಿ 9.8 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಚಿಂಚೋಳಿ ಹೊರ ವಲಯದಿಂದ ಹೆದ್ದಾರಿ ವಿಭಜಿಸಿ ಚಿಂಚೋಳಿ ಚಂದಾಪುರ ಅವಳಿ ಪಟ್ಟಣದ ಹೊರಗಿನಿಂದ ಪೋಲಕಪಳ್ಳಿ ಬಳಿ ಸಂಧಿಸುವಂತೆ ಸುಮಾರು 6.7 ಕಿ.ಮೀ ಹಾಗೂ ಮಿರಿಯಾಣ ಬಳಿ ಕೆರೆಯ ಬಂಡ್ ಕೆಳಗಿನಿಂದ ಸುಮಾರು 3.1 ಕಿ.ಮೀ ರಸ್ತೆ, ಹೀಗೆ ಎರಡು ಬೈಪಾಸ್ ರಸ್ತೆ ನಿರ್ಮಾಣಗೊಳ್ಳಲಿವೆ.

ಈ ಚತುಷ್ಪಥದ ಹೆದ್ದಾರಿ ನಿರ್ಮಾಣಕ್ಕೆ ಪ್ರಾಥಮಿಕ ಅಂದಾಜಿನಂತೆ ₹400 ಕೋಟಿ ವೆಚ್ಚವಾಗಲಿದ್ದು ಇದರಲ್ಲಿ ₹60 ಕೋಟಿ ಭೂಸ್ವಾಧೀನಕ್ಕೆ ಖರ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಹುಮನಾಬಾದ ಉಪ ವಿಭಾಗಕ್ಕೆ ಹಸ್ತಾಂತರ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗೋರಕನಾಥ ಚನಶೆಟ್ಟಿ ತಿಳಿಸಿದ್ದಾರೆ.

ಕಳೆದ ಜೂನ್ 7ರಂದು ‘ಘೋಷಣೆಗೆ ಸೀಮೀತವಾದ ರಾಷ್ಟ್ರೀಯ ಹೆದ್ದಾರಿ‘ ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಚಿಂಚೋಳಿ ತಾಲ್ಲೂಕಿಗೆ ಇದು ಮಹತ್ವದ ಕೊಡುಗೆಯಾಗಿದೆ. ತಾಲ್ಲೂಕಿಗೆ 32 ಕಿ.ಮೀ ಹೆದ್ದಾರಿ ನೀಡಲಾಗಿದೆ. ವಿಸ್ತೃತ ಯೋಜನಾ ವರದಿ ಆದ್ಯತೆ ಮೇಲೆ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ
ಭಗವಂತ ಖೂಬಾ ಕೇಂದ್ರ ಸಚಿವ
ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದ್ದರಿಂದ ಈ ಭಾಗದಲ್ಲಿ ಸಿಮೆಂಟ್ ಎಥೆನಾಲ್ ಕೈಗಾರಿಕೆಗಳಿಗೆ ಹಾಗೂ ವಾಣಿಜ್ಯೋದ್ಯಮ ಚಟುವಟಿಕೆ ವೃದ್ಧಿಗೆ ಸಹಕಾರಿಯಾಗಲಿದೆ
ಡಾ.ಉಮೇಶ ಜಾಧವ ಕಲಬುರಗಿ ಸಂಸದ

ಬೈಪಾಸ್ ರಸ್ತೆ ನನಸಾಗುವ ಕಾಲ ಸನ್ನಿಹಿತ

ಬಾಪೂರನಿಂದ ಚಿಂಚೋಳಿವರೆಗಿನ ರಸ್ತೆ ರಾಯಚೂರು ವನ್ಮಾರಪಳ್ಳಿ ರಾಜ್ಯ ಹೆದ್ದಾರಿ 15ರ ವ್ಯಾಪ್ತಿಗೆ ಬರುತ್ತಿತ್ತು. ಇದು ಚಿಂಚೋಳಿ ಪಟ್ಟಣದಿಂದ ಹಾದು ಹೋಗಿದ್ದು ರಸ್ತೆ ಇಕ್ಕಟ್ಟಾಗಿತ್ತು. ಅಕ್ಕಪಕ್ಕದಲ್ಲಿ ಕಟ್ಟಡಗಳಿದ್ದವು.

ಚಿಂಚೋಳಿ– ಚಂದಾಪುರದಲ್ಲಿರುವ ಅಂಗಡಿಗಳಿಗೆ ಹಾನಿಯಾಗದಂತೆ ಬೈಪಾಸ್‌ ರಸ್ತೆ ನಿರ್ಮಿಸಬೇಕೆಂಬ ಕೂಗು ಹೆಚ್ಚಾಗಿತ್ತು. ಜನರ ಆಶಯದಂತೆ 9.8 ಕಿ.ಮೀ ಉದ್ದದಲ್ಲಿ ಎರಡು ಬೈಪಾಸ್ ರಸ್ತೆಯೂ ಮಂಜೂರಾಗಿವೆ. ಈ ಮೂಲಕ ಬೈಪಾಸ್‌ ರಸ್ತೆ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT