ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕೂಡಿಟ್ಟ ಹಣ ಶಾಲೆಗೆ ಧಾರೆ ಎರೆದ ಶಿಕ್ಷಕ

ಸಿದ್ದರಾಜ ಎಸ್. ಮಲ್ಕಂಡಿ
Published 19 ಜನವರಿ 2024, 8:31 IST
Last Updated 19 ಜನವರಿ 2024, 8:31 IST
ಅಕ್ಷರ ಗಾತ್ರ

ವಾಡಿ(ಕಲಬುರಗಿ ಜಿಲ್ಲೆ): ಶಹಾಬಾದ್‌ ತಾಲ್ಲೂಕಿನ ತೋನಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಾದ ನಿಜಾಮ ಬಜಾರ್‌ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಜೀರ್ ಅಹ್ಮದ್ ಅವರು ಸರ್ಕಾರದ ಅನುದಾನದ ಹಿಂದೆ ಬೀಳದೆ ಸುಮಾರು ₹ 1.6 ಲಕ್ಷ ಸ್ವಂತ ಹಣವನ್ನು ವೆಚ್ಚ ಮಾಡಿ ಕಲಿಕೆಯನ್ನು ರಚನಾತ್ಮಕವಾಗಿಸಿ, ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಯಿಪಾಠದ ಸಾಂಪ್ರದಾಯಿಕ ವಿಧಾನಗಳ ಬದಲು ರಚನಾತ್ಮಕವಾಗಿ ತರಗತಿಗಳನ್ನು‌ ನಡೆಸುವ ಮೂಲಕ ಕಲಿಕೆಯನ್ನು ಹಬ್ಬವಾಗಿಸುವ ಮೂಲಕ ಮಕ್ಕಳ ದಾಖಲಾತಿಯನ್ನೂ ಹೆಚ್ಚಿಸಿದ್ದಾರೆ.

ತಿಪ್ಪೆಗುಂಡಿ ಸೇರಬೇಕಾಗಿದ್ದ ಕಸವನ್ನು ರಸವನ್ನಾಗಿ ಪರಿವರ್ತಿಸಿ ವರ್ಣರಂಜಿತ ಪಟಗಳು ಹಾಗೂ ಕಲಿಕಾ ಪರಿಕರ ರಚಿಸಿ ಮಕ್ಕಳ ಕಲಿಕೆಯನ್ನು ಸರಳಗೊಳಿಸಿದ್ದಾರೆ.

ತರಕಾರಿಗಳ ಚಿತ್ರ, ಹೆಸರು, ಗಡಿಯಾರ, ಕನ್ನಡ ಹಾಗೂ ಇಂಗ್ಲಿಷ್ ವರ್ಣಾಕ್ಷರ, ಪಾಠಕ್ಕೆ ಸಂಬಂಧಿಸಿದ ಚಿತ್ರ, ಭಾರತ ಸಂವಿಧಾನ ಪೀಠಿಕೆ, ಬಳಸಿ ಬಿಸಾಕುವ ತಟ್ಟೆಗಳಿಗೆ ವರ್ಣ ಲೇಪಿಸಿ ವರ್ಣಾಕ್ಷರ ತಯಾರಿ ಮಾಡಿ, ಕಲಿಕಾ ಸಾಮಗ್ರಿ ಸಿದ್ಧಪಡಿಸಿದ್ದಾರೆ. ಮದುವೆಯ ಹಳೆಯ ಆಮಂತ್ರಣ ಪತ್ರಿಕೆಗಳಿಂದ ಕನ್ನಡ ಹಾಗೂ ಇಂಗ್ಲಿಷ್ ಅಂಕಿ–ಸಂಖ್ಯೆಗಳ ಪ್ರತಿ, ರದ್ದಿ ಕಾಗದದಿಂದ ಹೂರಣ ಕಲ್ಲು ಮಾದರಿ, ಮಡಿಕೆ ತಯಾರಿ, ಹಳೆಯ ಕ್ಯಾಲೆಂಡರ್‌ ಗಳಿಂದ ಪ್ರಾಣಿ–ಪಕ್ಷಿಗಳ ಚಿತ್ರಗಳು, ಬೀಸುವ ಕಲ್ಲು, ಅಳತೆ ಸಲಕರಣೆ, ತೆಂಗು, ಕಬ್ಬು, ಬಾಳೆ, ಪಪ್ಪಾಯ ಮರ, ಗುದ್ದಲಿ, ಸಲಿಕೆ ತಯಾರಿಸಿ ಮಕ್ಕಳ ಕಲಿಕೆಗೆ ಒದಗಿಸಿದ್ದಾರೆ.

5ನೇ ತರಗತಿವರೆಗಿರುವ ಈ ಶಾಲೆಯಲ್ಲಿ 2020ರಲ್ಲಿ 8 ಮಕ್ಕಳಿದ್ದರು. ರಚನಾತ್ಮಕ ಕಲಿಕಾ ಪದ್ಧತಿ ಅಳವಡಿಕೆಯಿಂದಾಗಿ ಇದೀಗ ಮಕ್ಕಳ ಸಂಖ್ಯೆ 20ಕ್ಕೆ ಏರಿದೆ.

‘ಶಾಲೆಯನ್ನು ಮಕ್ಕಳ ಸ್ನೇಹಿಯಾಗಿಸು ವಲ್ಲಿ ಎಸ್‌ಡಿಎಂಸಿ, ಪೋಷಕರು ಹಾಗೂ ಸ್ಥಳೀಯರ ಸಹಕಾರ ಚೆನ್ನಾಗಿ ಸಿಗುತ್ತಿದೆ. ಮಕ್ಕಳಿಂದಲೇ ಶಿಕ್ಷಕರ ಜೀವನ ನಡೆಯುತ್ತಿದ್ದು, ಜೀವನ ಕೊಟ್ಟವರಿಗೆ ಬದುಕು ಮೀಸಲಿಡಬೇಕು’ ಎನ್ನುತ್ತಾರೆ ಶಿಕ್ಷಕ ನಜೀರ್ ಅಹ್ಮದ್.

‘ಪರಿಕರಗಳಿಂದ ಕಲಿಕೆ ಸುಲಭ ’

‘ವಸ್ತುವಿನ ಸ್ಪರ್ಶದಿಂದ ಕಲಿಕೆ ಸರಳವಾಗುವುದರ ಜೊತೆಗೆ ಮನಸ್ಸಿನ ಆಳಕ್ಕೆ ಹೋಗುತ್ತದೆ. ದಿನನಿತ್ಯ ನೋಡುವುದರಿಂದ ವಿಷಯ ಮನಸಿನಲ್ಲಿ ಉಳಿಯುತ್ತದೆ. 450ಕ್ಕೂ ಅಧಿಕ ಪರಿಕರನ್ನು ತಯಾರಿಸಿ ಇಟ್ಟಿದ್ದೇನೆ. ನಾಳೆ ಮಕ್ಕಳಿಗೆ ಹೊಸದನ್ನೇನು ಹೇಳಿಕೊಡಬೇಕು ಎಂದು ಯೋಚಿಸುತ್ತೇನೆ. ನಮ್ಮ ಪುಟ್ಟ ಶಾಲೆಯಿಂದ ಮಕ್ಕಳು ನವೋದಯ ಶಾಲೆಗೆ ನಿರಂತರ ಆಯ್ಕೆಯಾಗುತ್ತಿರುವುದು ಸಂತಸ ತಂದಿದೆ’ ಎಂದು ಶಿಕ್ಷಕ ನಜೀರ್ ಪ್ರತಿಕ್ರಿಯಿಸಿದರು.

ಶಿಕ್ಷಕ ನಜೀರ್ ಅಹ್ಮದ್ ಅವರ ಕಾರ್ಯವೈಖರಿಯಿಂದ ಮಕ್ಕಳ ಕಲಿಕೆ ಉತ್ತಮವಾಗಿದೆ. ಶಾಲೆ ಕಾಂಪೌಂಡ್, ಶೌಚಾಲಯ ದುರಸ್ತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಗ್ರಾ.ಪಂ.ಗೆ ಮನವಿ ಮಾಡುತ್ತೇವೆ
ಸಂತೋಷ ಸಾಗರ, ಎಸ್‌ಡಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT