ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ಜನವಸತಿ ಪ್ರದೇಶ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ

ಶೇರಿಭಿಕನಳ್ಳಿಗೆ ಅಧಿಕಾರಿಗಳ ತಂಡ ಭೇಟಿ ಇಂದು
Published 6 ಆಗಸ್ಟ್ 2024, 5:50 IST
Last Updated 6 ಆಗಸ್ಟ್ 2024, 5:50 IST
ಅಕ್ಷರ ಗಾತ್ರ

ಚಿಂಚೋಳಿ: ವನ್ಯಜೀವಿ ಧಾಮದ ಹೃದಯಭಾಗದಲ್ಲಿರುವ ಶೇರಿಭಿಕನಳ್ಳಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಈ ಗ್ರಾಮದ ಸ್ಥಳಾಂತರದ ಭಾಗವಾಗಿ ಮಂಗಳವಾರ ಬೆಳಿಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಭೇಟ ನೀಡಿ ಸ್ಥಳಾಂತರ ಗೊಳ್ಳಬೇಕಿರುವ ಗ್ರಾಮದ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

ಸ್ಥಳೀಯರ ಅಪೇಕ್ಷೆಯಂತೆ ಜಿಲ್ಲಾ ಅರಣ್ಯಾ ಸಂರಕ್ಷಣಾಧಿಕಾರಿ ಸುಮೀತಕುಮಾರ ಪಾಟೀಲರ ಆಸಕ್ತಿಯ ಫಲವಾಗಿ ಸ್ಥಳಾಂತರ ಪ್ರಕ್ರಿಯೆ ತಾರ್ಕಿಕ ಅಂತ್ಯದತ್ತ ಸಾಗಿದೆ. ಶೇರಿಭಿಕನಳ್ಳಿ ಗ್ರಾಮದಲ್ಲಿರುವ ಕುಟುಂಬಗಳು, ಜನಸಂಖ್ಯೆ, 18ಕ್ಕಿಂತ ಹೆಚ್ಚು ವಯಸ್ಸಿನವರ ಸಂಖ್ಯೆ, ಮನೆಗಳು, ಕುಟುಂಬಗಳು, ಸ್ವಂತ ಜಮೀನು ಹೊಂದಿದವರ ಸಂಖ್ಯೆ ಮತ್ತು ಸ್ಥಳಾಂತರಕ್ಕೆ ಅಗತ್ಯವಿರುವ ಜಮೀನು ಮೊದಲಾದ ವಿವರಗಳ ಕುರಿತು ಜನರ ಅನಿಸಿಕೆಗಳೊಂದಿಗೆ ನಡಾವಳಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ಶೇರಿಭಿಕನಳ್ಳಿ ಜನವಸತಿ ಗ್ರಾಮವನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಗೆ ದಶಕ ಕಳೆದಿವೆ. ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದ ಕ್ರಿಕೆಟಿಗ ಅನಿಲ ಕುಂಬ್ಳೆ ಅವರು 2011ರಲ್ಲಿ ತಾಂಡಾಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದಲ್ಲದೇ ಸ್ಥಳಾಂತರಕ್ಕೆ ನೀವು ಸಿದ್ಧರಿದ್ದಿರಾ ಎಂದಾಗ ನಮಗೆ ಸೌಲಭ್ಯ ಕಲ್ಪಿಸಿ ಇಲ್ಲಿಂದ ಸ್ಥಳಾಂತರಿಸಿದರೆ ಬೇರೆ ಕಡೆ ಹೋಗಲು ಸಿದ್ಧ ಎಂದು ಸ್ಥಳೀಯರು ಒಪ್ಪಿದ್ದರು.

ಅಂದಿನಿಂದ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ.  ಈ ಕುರಿತು ಹಿಂದಿನ ಶಾಸಕ ಡಾ ಉಮೇಶ ಜಾಧವ, ಹಾಲಿ ಶಾಸಕ ಅವಿನಾಶ ಜಾಧವ ಅವರು ವಿಧಾನಸಭೆ ಅಧಿವೇಶನದಲ್ಲಿ ಹಲವು ಬಾರಿ ಪ್ರಶ್ನಿಸಿದ್ದರು. ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ನೇತೃತ್ವದಲ್ಲಿ ತಾ.ಪಂ. ಇಒ ಶಂಕರ ರಾಠೋಡ್, ವೆಂಕಟಾಪುರ ಪಿಡಿಒ ರಾಮಕೃಷ್ಣ ಕೊರಡಂಪಳ್ಳಿ, ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ ಸೇರಿದಂತೆ ಹಲವು ಅಧಿಕಾರಿಗಳು ಶೇರಿಭಿಕನಳ್ಳಿಗೆ ಭೇಟಿ ನೀಡಲಿದ್ದಾರೆ.

ಶೇರಿಭಿಕನಳ್ಳಿ ಜನರ ಜೀವನ ಮತ್ತು ಬವಣೆ ಕುರಿತು ಪ್ರಜಾವಾಣಿ ಹಲವು ಬಾರಿ ವರದಿ ಮಾಡಿದೆ.

ಚಿಂಚೋಳಿ ತಾಲ್ಲೂಕು ಶೇರಿಭಿಕನಳ್ಳಿ ತಾಂಡಾ ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು
ಚಿಂಚೋಳಿ ತಾಲ್ಲೂಕು ಶೇರಿಭಿಕನಳ್ಳಿ ತಾಂಡಾ ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್

Quote - ಶೇರಿಭಿಕನಳ್ಳಿಯಿಂದ ಸುತ್ತಲೂ 10 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಲಭ್ಯತೆ ಕುರಿತು ಜಿಲ್ಲಾಧಿಕಾರಿ ವರದಿ ಕೇಳಿದ್ದಾರೆ. ಈ ಕುರಿತು ಪರಿಶೀಲಿಸಿ ವಾಸ್ತವ ವರದಿ ನೀಡುತ್ತೇವೆ ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT