ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟನಾಶಕ ಸಿಂಪಡಣೆಗೆ ಮುನ್ನೆಚ್ಚರಿಕೆ ವಹಿಸಿ: ಸಹಾಯಕ ಕೃಷಿ ನಿರ್ದೇಶಕ

Published 10 ಅಕ್ಟೋಬರ್ 2023, 4:27 IST
Last Updated 10 ಅಕ್ಟೋಬರ್ 2023, 4:27 IST
ಅಕ್ಷರ ಗಾತ್ರ

ವಾಡಿ: ‘ಕೀಟನಾಶಕ ಮೈಗೆ ತಗುಲಿ ಹಲವೆಡೆ ಅನಾಹುತಗಳು ಜರುಗುತ್ತಿದ್ದು ರೈತರು ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು’ ಎಂದು ಚಿತ್ತಾಪುರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ ರೈತರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ‘ಅವಧಿ ಮೀರಿದ ಕೀಟನಾಶಕಗಳನ್ನು ಬಳಸಬಾರದು. ಖರೀದಿಸುವಾಗ ಪಾವತಿಯನ್ನು ಅಗತ್ಯವಾಗಿ ಪಡೆಯಬೇಕು. ಸಿಂಪಡಣಾ ನಾಝಲ್ ರಂಧ್ರ ಕಟ್ಟಿದಾಗ ಬಾಯಿಯಿಂದ ಊದಬಾರದು. ವಿಷದ ಡಬ್ಬಿಯನ್ನು ಜಾಗರೂಕತೆಯಿಂದ, ಅಲುಗಾಡಿಸದೇ ಅದರಿಂದ ವಿಷ ಚೆಲ್ಲದಂತೆ ಎಚ್ಚರವಹಿಸಿ ತೆಗೆಯಬೇಕು.

‘ಅಂಗಳ ಅಥವಾ ಗಾಳಿಯಾಡುವ ಪ್ರದೇಶದಲ್ಲಿ ರಾಸಾಯನಿಕಗಳನ್ನು ಮಿಶ್ರಣ ಮಾಡಬೇಕು. ಜೋರಾದ ಗಾಳಿ ಇರುವಾಗ ಮಿಶ್ರಣ ಮಾಡುವುದಾಗಲಿ ಅಥವಾ ಯಂತ್ರದಲ್ಲಿ ತುಂಬುವುದಾಗಲಿ ಮಾಡಬಾರದು. ನೇರವಾಗಿ ಕೈಯಿಂದ ಪೀಡೆನಾಶಕಗಳನ್ನು ಮಿಶ್ರಣ ಮಾಡದೇ ಕೋಲು ಉಪಯೋಗಿಸಬೇಕು. ಕೃಷಿ ರಾಸಾಯನಿಕಗಳನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸಬೇಕು. ಸಿಂಪಡಣೆ ಸಮಯದಲ್ಲಿ ತಿನ್ನುವುದಾಗಲಿ, ಕುಡಿಯುವುದಾಗಲಿ ಅಥವಾ ಧೂಮಪಾನ ಮಾಡಕೂಡದು. ಮೋಡ ಹಾಗೂ ಅತಿಯಾದ ತೇವಾಂಶವಿದ್ದಲ್ಲಿ ಕೀಟನಾಶಕ ಬಳಸುವುದನ್ನು ಮುಂದೂಡಬೇಕು. ಕೀಟನಾಶಕವನ್ನು ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ ಉಪಯೋಗಿಸಬೇಕು’.

‘ದವಸಧಾನ್ಯಗಳು ಹಾಳಾದ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಕೀಟನಾಶಕ ಸಿಂಪಡಿಸಿ ಜಾನುವಾರುಗಳಿಗೆ ಹಾಕಬಾರದು. ಮೈಮೇಲೆ ಹುಣ್ಣು ಅಥವಾ ಗಾಯಗಳಿದ್ದಲ್ಲಿ ಕೀಟನಾಶಕಗಳನ್ನು ಬಳಸಬಾರದು. ಕೀಟನಾಶಕಗಳ ಸಿಂಪಡಣೆ ಅಥವಾ ಧೂಳಿಕರಣ ಮಾಡುವ ಸಮಯದಲ್ಲಿ ಒಂದು ವೇಳೆ ವಿಷಕಾರದ ದುಷ್ಪರಿಣಾಮಗಳು ವ್ಯಕ್ತಿಯಲ್ಲಿ ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಬೇಕು. ರೈತರು ಕಡ್ಡಾಯವಾಗಿ ಮಾಸ್ಕ್ ಹಾಗು ಕೈಗವಸು ಹಾಕಿಕೊಂಡೆ ಸಿಂಪಡಣೆ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT