ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಶ್ಯಾಡೋ ಸಿಎಂ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Last Updated 4 ಆಗಸ್ಟ್ 2021, 5:12 IST
ಅಕ್ಷರ ಗಾತ್ರ

ಚಿತ್ತಾಪುರ: ಅಧಿಕಾರದ ಕುರ್ಚಿಗಾಗಿ ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವೆಯೇ ಪೈಪೋಟಿ ನಡೆಯುತ್ತಿದ್ದು, ಮುಖ್ಯಮಂತ್ರಿ ಬರಸವರಾಜ ಬೊಮ್ಮಾಯಿ ಅವರ ಈಗಿನ ಸ್ಥಿತಿ ‘ಹಾಳೂರಿಗೆ ಉಳಿದವನೆ ಗೌಡ' ಎಂಬ ಮಾತಿನಂತೆ ಇದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ತಾಲ್ಲೂಕಿನ ದಿಗ್ಗಾಂವ ಗ್ರಾಮದಲ್ಲಿ ಕನಕ ಹಾಗೂ ಅಂಬಿಗರ ಚೌಡಯ್ಯ ಭವನಗಳ ಭೂಮಿಪೂಜೆ ಮತ್ತು ಸರ್ಕಾರಿ ಪ್ರೌಢ ಶಾಲೆಯ ನೂತನ ಕೋಣೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ಕೊರೊನಾ ವೇಳೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಮರ್ಪಕವಾಗಿ ಕೆಲಸ ಮಾಡಿದೆ. ಸಂಕಷ್ಟದಲ್ಲಿದ್ದ ಜನರು, ರೋಗಿಗಳು ಹಾಗೂ ಸಂತ್ರಸ್ತರಿಗೆ ನೆರವಾಗಿದೆ. ಸರ್ಕಾರವನ್ನು ಅತಂತ್ರಗೊಳಿಸುವ ಕೆಲಸ ಕಾಂಗ್ರೆಸ್‌ ಮಾಡುತ್ತಿಲ್ಲ. ಅಧಿಕಾರಕ್ಕಾಗಿ ಬಿಜೆಪಿಯ ಮುಖಂಡರ ನಡುವೆಯೇ ಸ್ಪರ್ಧೆ ನಡೆಯುತ್ತಿದೆ. ಕೆಲವರು ಸರ್ಕಾರ ಬೀಳಿಸುವಲ್ಲಿ ನಿರತರಾಗಿದ್ದಾರೆ‘ ಎಂದು ದೂರಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಆಗಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಶ್ಯಾಡೋ ಸಿಎಂ ಆಗಿದ್ದಾರೆ. ಸೇವಾ ತೆರಿಗೆ ನೀಡದಿದ್ದರೆ ಸರ್ಕಾರದಲ್ಲಿ ಯಾವ ಕೆಲಸವು ಆಗುವುದಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಮಾತನಾಡಿದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಶಕ್ತಿ ಕಿಟ್, ಕಾರ್ಮಿಕರ ಇಲಾಖೆಯಿಂದ ಜನರಿಗೆ ಆಹಾರ ಕಿಟ್ ವಿತರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಿಯಾನಾ ಬೇಗಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವರುದ್ರ ಭೀಣಿ, ರಮೇಶ ಮರಗೋಳ, ಶಂಭುಲಿಂಗ ಗುಂಡಗುರ್ತಿ, ಮುಖಂಡರಾದ ಜಯಪ್ರಕಾಶ ಕಮಕನೂರ, ಸುನೀಲ್ ದೊಡ್ಡಮನಿ, ಶ್ರೀಮಂತ ಗುತ್ತೆದಾರ, ಆರ್.ಡಿ.ಸಿದ್ದಣಗೌಡ, ಹಣಮಂತ ಸಂಕನೂರ, ನಿಂಗಣ್ಣ ಹೆಗಲೇರಿ, ಶರಣು ಡೋಣಗಾಂವ, ಮಲ್ಲಿನಾಥ ಅವಂಟಿ, ಹರಳಯ್ಯ ಬಡಿಗೇರ ಇದ್ದರು.

‘ವೈಜ್ಞಾನಿಕ ಮನೋಭಾವ ಇಲ್ಲ’

ಚಿತ್ತಾಪುರ: ‘ಬಿಜೆಪಿ ಸರ್ಕಾರದ ವೈಜ್ಞಾನಿಕ ಮನೋಭಾವದ ಕೊರತೆಯಿಂದಾಗಿ ಕೊರೊನಾ ನಿರ್ವಹಣೆ ವಿಫಲವಾಗಿ, ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ‘ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಅಪೌಷ್ಟಿಕತೆಯಿಂದ ಬಳಲುತ್ತಿರುವ 526 ಮಕ್ಕಳಿಗೆ ಶಕ್ತಿ ಕಿಟ್ ವಿತರಿಸಿ ಮಾತನಾಡಿದರು.

ಪ್ರಧಾನಿ ಮೋದಿ ಅವರು ಆರಂಭಿಕ ಹಂತದಲ್ಲಿ ಕೊರೊನಾವನ್ನು ಲಘುವಾಗಿ ಪರಿಗಣಿಸಿದ್ದರಿಂದ ಬಹುದೊಡ್ಡ ದುರಂತ ಸಂಭವಿಸಿತ್ತು. ವೈಜ್ಞಾನಿಕ ಮನೋಭಾವ ಇಲ್ಲದ ಬಿಜೆಪಿ ಸರ್ಕಾರಗಳಿಂದ ಲಕ್ಷಾಂತರ ಜನರು ಸೋಂಕಿಗೆ ಬಲಿಯಾದರು. ವಿದೇಶಗಳು ಲಾಕ್‌ಡೌನ್ ಮಾಡುತ್ತಿರುವಾಗ ದೇಶವಾಸಿಗರಿಗೆ ತಪ್ಪು ಮಾಹತಿ ನೀಡಲಾಯಿತು‘ ಎಂದು ದೂರಿದರು.

ಲಾಕ್‌ಡೌನ್ ಜಾರಿಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೀಡಿದ್ದ ಸಲಹೆಯನ್ನು ಸರ್ಕಾರ ಕಡೆಗಣಿಸಿತ್ತು. ಈ ಬಳಿಕ ಮೃತರ ಪ್ರಮಾಣ ವ್ಯಾಪಕವಾಗಿ ಹೆಚ್ಚಿತ್ತು. ಸಂಭವನೀಯ 3ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆಯ ವರದಿ ನೀಡಿದ್ದಾರೆ. ಆದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರದಿಂದ ನಿರೀಕ್ಷೆ ಮಾಡುವುದು ವ್ಯರ್ಥ‘ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT