ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ಭಿಕ್ಷುಕರ, ಮಾನಸಿಕ ಅಸ್ವಸ್ಥರ ಸಂಖ್ಯೆ

ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವೃದ್ಧರು, ಮಹಿಳೆಯರಿಂದ ನಿತ್ಯ ಭಿಕ್ಷಾಟನೆ
ಅಕ್ಷರ ಗಾತ್ರ

ಎಲ್‌.ಮಂಜುನಾಥ

ಕಲಬುರ್ಗಿ: ನಗರದಲ್ಲಿ ಭಿಕ್ಷಾಟನೆ ಮಾಡುವವರ ಹಾಗೂ ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ನಿತ್ಯ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.

ಇಲ್ಲಿನರೈಲ್ವೆ ನಿಲ್ದಾಣ, ಕೇಂದ್ರ ಬಸ್‌ನಿಲ್ದಾಣ, ಎಸ್‌ವಿಪಿ ಸರ್ಕಲ್‌, ಜಗತ್‌ ಸರ್ಕಲ್‌, ಸೂಪರ್‌ ಮಾರ್ಕೆಟ್‌, ಸಿಟಿ ಬಸ್‌ ನಿಲ್ದಾಣ, ಶರಣ ಬಸವೇಶ್ವರ ದೇಗುಲ, ಮಾಂಗರವಾಡಿ, ಇಂದಿರಾನಗರ ಸೇರಿದಂತೆ ನಗರದ ಜನದಟ್ಟಣೆಯ ಪ್ರದೇಶಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ತುಸು ಹೆಚ್ಚೇ ಇದೆ.

ಇಲ್ಲಿನ ಬಸ್‌ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಕ್ಕಳನ್ನು ಕಂಕುಳದಲ್ಲಿ ಎತ್ತಿಕೊಂಡು ಭಿಕ್ಷಾಟನೆ ಮಾಡುವ ನಿರಾಶ್ರಿತ ಮಹಿಳೆಯರು ಹೆಚ್ಚು ಕಾಣುತ್ತಾರೆ. ಇವರು ಸಾರ್ವಜನಿಕರು ಹಣ ಕೊಡುವವರಿಗೂ ಬಿಡದೇ ಬೆನ್ನತ್ತಿ ಪೀಡಿಸುತ್ತಾ ಹಣ ಕೇಳುತ್ತಾರೆ.

ಇನ್ನ ಬಸ್‌ ನಿಲ್ದಾಣದಲ್ಲಿ ಇವರ ಕಾಟ ಹೇಳತೀರದು. ಬಸ್‌ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬೆನ್ನತ್ತುವ ಭಿಕ್ಷುಕರು, ಹಣ ನೀಡುವವರಿಗೂ ಬಿಡುವುದಿಲ್ಲ. ಕಾಡಿ ಬೇಡಿ, ಅತ್ತು ಕರೆದು ಹಣ ಪಡೆಯುತ್ತಾರೆ. ಅವರನ್ನು ನೋಡಿದರೆ, ವ್ಯಸನಕ್ಕೆ ದಾಸರಾಗಿರುವಂತೆ ಕಾಣುತ್ತದೆ. ಕೆಲವೊಮ್ಮೆ ಹಣ ಕೊಡದಿದ್ದರೆ ಜನರಿಗೆ ಅವಾಚ್ಯ ಶಬ್ದಗಳಿಂದಲೂ ಇವರು ನಿಂಧಿಸುತ್ತಾರೆ.

ಇಲ್ಲಿನ ಎಸ್‌ವಿಪಿ ಸರ್ಕಲ್‌, ಜಗತ್‌ವೃತ್ತಗಳಲ್ಲಿಯೂ ಭಿಕ್ಷಕರು ನಿಂತಿರುತ್ತಾರೆ. ಸಿಗ್ನಲ್‌ ಬೀಳುತ್ತಿದ್ದಂತೆ ವಾಹನಗಳಿಗೆ ಅಡ್ಡ ಬಂದು ನಿಂತು ಸವಾರರ ಬಳಿ ಕೈ ಹೊಡ್ಡುತ್ತಾರೆ. ಹಣ ಕೊಟ್ಟರೆ ತಕ್ಷಣ ಬೇರೆಯವರ ಬಳಿ ಹೋಗುತ್ತಾರೆ. ಇಲ್ಲದಿದ್ದರೆ ಕೊಡುವ ತನಕ ಅವರ ಬಳಿಯೇ ನಿಲ್ಲುತ್ತಾರೆ. ಈ ಅವಧಿಯಲ್ಲಿ ಸಿಗ್ನಲ್‌ ತೆರೆದರೆ ವಾಹನ ಸವಾರರಿಗೆ ತುಂಬಾ ಕಷ್ಟ. ಭಿಕ್ಷಕರು ವಾಹನಗಳ ಮಧ್ಯೆಯೇ ನಿಂತಿರುತ್ತಾರೆ. ಅವರು ರಸ್ತೆ ಬದಿಗೆ ಹೋಗುವ ತನಕ ವಾಹನಗಳು ಮಧ್ಯ ರಸ್ತೆಯಲ್ಲಿಯೇ ನಿಲ್ಲಬೇಕು. ಮೇಲಾಗಿ ಇವರು ಮಾಸ್ಕ್‌ ಹಾಕಿಕೊಂಡಿಲ್ಲ ಎಂಬ ಭಯವೂ ಚಾಲಕರನ್ನು ಕಾಡುತ್ತಿರುತ್ತದೆ.

ಭಿಕ್ಷಾಟನೆ ಅಪರಾಧ: ‘ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯ್ದೆ 1975 ಪ್ರಕಾರ ಭಿಕ್ಷಾಟನೆ ಮಾಡುವುದು ಹಾಗೂ ಭಿಕ್ಷೆ ಕೊಡುವುದು ಎರಡೂ ಅಪರಾಧ. ಆದರೆ, ಈ ಕಾಯ್ದೆಯನ್ನು ಯಾರೂ ಪಾಲನೆ ಮಾಡುತ್ತಿಲ್ಲ‘ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್‌.ಅಲ್ಲಬಕಷ್ ಬೇಸರ ವ್ಯಕ್ತಪಡಿಸುತ್ತಾರೆ.

‘ಭಿಕ್ಷಾಟನೆ ತಡೆಯುವ ಜವಾಬ್ದಾರಿ ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲಿದೆ ಎಂದು ಸಾರ್ವಜನಿಕರು ನಮ್ಮ ಕಡೆ ಕೈತೋರಿಸುತ್ತಾರೆ. ಆದರೆ, ಜನರ ಸಹಕಾರವೂ ನಮಗೆ ತುಂಬಾ ಮುಖ್ಯ. ಅವರದೂ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಭಿಕ್ಷೆ ಬೇಡಲು ಬರುವವರಿಗೆ ತಿಳಿವಳಿಕೆ ಹೇಳಿ, ಅವರಿಗೆ ಹಣ ಕೊಡದೇ ಕಳುಹಿಸಬೇಕು. ಆಗ ಮಾತ್ರ ಈ ಪಿಡುಗನ್ನು ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ ಅವರು.

‘ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಕರೆತಂದು ನಗರದ ಪುನರ್ವಸತಿ ಕೇಂದ್ರದಲ್ಲಿಟ್ಟು ಊಚಿತವಾಗಿ ಉಪಾಹಾರ, ಊಟವನ್ನು ನೀಡಿ, ಭಿಕ್ಷಾಟನೆ ಮಾಡುವುದು ಅಪರಾಧ ಎಂಬ ತಿಳಿವಳಿಕೆ ನೀಡಿ, ನಿಗದಿ ಪಡಿಸಿದ ಅವಧಿಯ ನಂತರ ಬಿಡುತ್ತೇವೆ. ಆದರೆ, ಅವರು ಮತ್ತೆ ಭಿಕ್ಷಾಟನೆಯ ಹಾದಿ ತುಳಿಯುತ್ತಾರೆ. ಇದಕ್ಕೆ ಜನರೇ ಕಡಿವಾಣ ಹಾಕಬೇಕಿದೆ. ಅಲ್ಲದೇ ಪದೇ ಪದೇ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ನಿಯಂತ್ರಿಸುವಲ್ಲಿ ಜಿಲ್ಲೆಯಲ್ಲಿ ಕೆಲ ಸ್ವಯಂ ಸೇವಾ ಸಂಸ್ಥೆಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಅವುಗಳ ಹೆಚ್ಚು ಚಟುವಟಿಯಿಂದ ಕಾರ್ಯ ನಿರ್ವಹಿಸುತ್ತಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಅವರು.

ಪಡಿತರ ಕಾರ್ಡ್‌ದಾರರೇ ಭಿಕ್ಷಾಟನೆಯಲ್ಲಿ...

‘ನಗರದಲ್ಲಿ ಕೆಲವೆಡೆ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚು ಇದೆ. ಇವರಲ್ಲಿ ಬಹುತೇಕರು ಸ್ವಂತ ಸೂರು, ಪಡಿತರ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನೂ ಹೊಂದಿರುತ್ತಾರೆ. ಹೀಗಿದ್ದರೂ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಬೆಳಿಗ್ಗೆಯಿಂದ ಸಂಜೆಯ ತನಕ ಜನದಟ್ಟಣೆಯ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಕೆಲವರು ಮಕ್ಕಳನ್ನು ಪ್ರತ್ಯೇಕ ಜಾಗಗಳಲ್ಲಿ ಭಿಕ್ಷೆಗೆ ಬಿಟ್ಟು, ತಾವು ಬೇರೆಡೆಗೆ ಭಿಕ್ಷಾಟನೆಗೆ ಇಳಿಯುತ್ತಿದ್ದಾರೆ. ಇಂತವರನ್ನು ಗುರುತಿಸಿ ಹಿಡಿದು ಇಲಾಖೆಯ ವಾಹನಗಳಲ್ಲಿ ಕರೆತಂದು ತಹಶೀಲ್ದಾರ್‌ ಬಳಿ ಹಾಜರುಪಡಿಸಿ ಅವರ ಸೂಚನೆ ಮೇರೆಗೆ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿ, ನಿಗದಿ ಪಡಿಸಿದ ಅವಧಿಯ ತನಕ ಅವರಿಗೆ ಉಚಿತವಾಗಿ ಊಟ ನೀಡುತ್ತೇವೆ. ಅವಧಿಯ ಮುಗಿದ ನಂತರ ತಹಶೀಲ್ದಾರ್‌ ಗಮನಕ್ಕೆ ತಂದು ಅವರನ್ನು ಬಿಡುಗಡೆ ಮಾಡುತ್ತೇವೆ. 18 ವರ್ಷದೊಳಗಿನ ಮಕ್ಕಳು ಇದ್ದರೆ ಅವರನ್ನು ಬಾಲ ಮಂದಿರಕ್ಕೆ ಕಳುಹಿಸುತ್ತೇವೆ‘ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್‌.ಅಲ್ಲಬಕಷ್‌.

ಸಾಕಷ್ಟು ದೂರು ಬಂದಿವೆ

‘ಕೋವಿಡ್‌ ವೈರಸ್‌ ತೀವ್ರವಾಗಿದ್ದಾಗ ಭಿಕ್ಷಕರು, ನಿರಾಶ್ರಿತರು ಹಾಗೂ ಮಾನಸಿಕ ಅಸ್ವಸ್ಥರು ಇರುವ ಸ್ಥಳಕ್ಕೆ ತೆರಳಿ ಅವರಿಗೆ ಉಚಿತವಾಗಿ ಊಟ ನೀಡಿದ್ದೇವೆ. ಇದೀಗ ಮತ್ತೆ ನಗರದಲ್ಲಿ ಇವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಂದ ಹಾಗೂ ಭಿಕ್ಷುಕರಿಂದ ಕಿರಿ ಕಿರಿ ಅನುಭವಿಸಿದವರಿಂದ ಸಾಕಷ್ಟು ದೂರುಗಳು ಸಹ ಬಂದಿವೆ. ಅಂತವರನ್ನು ಕರೆತಂದು ಪುನರ್ವಸತಿ ಕೇಂದ್ರದಲ್ಲಿಡಲು ಅನುಮತಿ ಕೋರಿ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಪತ್ರ ಬರೆಯಲಾಗಿದೆ. ಅವರು ಅನುಮತಿ ನೀಡಿದ ತಕ್ಷಣ ಇಲಾಖೆಯ ವಾಹನದ ಮೂಲಕ ಅವರನ್ನು ಕರೆತರುತ್ತೇವೆ‘ ಎನ್ನುತ್ತಾರೆ ಕಲಬುರ್ಗಿಯ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಸಂಗಮನಾಥ ಮೋದಿ.

ಕೇಂದ್ರದಲ್ಲಿ ಪ್ರಸ್ತುತ 60 ಮಂದಿ

‘ಭಿಕ್ಷಾಟನೆ ನಿಯಂತ್ರಿಸಲು ಸರ್ಕಾರದಿಂದಲೇ ಆಯಾ ಜಿಲ್ಲೆಗಳಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಂತೆಯೇ ನಗರದ ಹೈಕೋರ್ಟ್‌ ಬಳಿಯ ಬಿದ್ದಾಪುರ ಕಾಲೊನಿಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವಿದೆ. ವಿವಿಧೆಡೆ ಭಿಕ್ಷಾಟನೆ ಮಾಡುವವರನ್ನು ಹಾಗೂ ನಿರಾಶ್ರಿತರನ್ನು ಕರೆತಂದು ಕೇಂದ್ರದಲ್ಲಿ ಇಡಲಾಗಿದೆ. ಪ್ರಸ್ತುತ 60 ಜನರು ಕೇಂದ್ರದಲ್ಲಿದ್ದಾರೆ. ಇವರೆಲ್ಲರಿಗೂ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತೆ. ಕನಿಷ್ಠ 15 ದಿನಗಳಿಂದ ಗರಿಷ್ಠ 60 ದಿನಗಳ ತನಕ ಇವರನ್ನು ಈ ಕೇಂದ್ರದಲ್ಲಿ ಇರಿಸಿಕೊಳ್ಳಲಾಗುತ್ತೆ. 60 ದಿನಗಳ ನಂತರ ಮತ್ತೆ ಭಿಕ್ಷಾಟನೆ ಮಾಡದಂತೆ ಅವರಿಗೆ ತಿಳಿಸಿ ತಹಶೀಲ್ದಾರ್ ಅನುಮತಿ ಮೇರೆಗೆ ಅವರನ್ನು ಬಿಡಲಾಗುತ್ತದೆ‘ ಎಂದು ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಸಂಗಮನಾಥ ಮೋದಿ ಮಾಹಿತಿ ನೀಡಿದರು.

ಮಕ್ಕಳ ರಕ್ಷಣೆಗೆ 4 ತೆರೆದ ತಂಗುದಾಣ

‘ಜಿಲ್ಲೆ ಸೇರಿದಂತೆ ನಗರದಲ್ಲಿ ಚಿಂದಿ ಆಯುವ, ನಿರಾಶ್ರಿತ ಹಾಗೂ ಭಿಕ್ಷೆ ಬೇಡುವ ಮಕ್ಕಳನ್ನು ರಕ್ಷಿಸಿ, ಇಲ್ಲಿನ ಬಾಲ ಮಂದಿರ ಹಾಗೂ ತೆರೆದ ತಂಗುದಾಣಗಳಲ್ಲಿ ದಾಖಲಿಸಲಾಗುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲಿ 4 ತೆರೆದ ತಂಗುದಾಣಗಳಿವೆ.

ಚಿಂಚೋಳಿಯ ಸಿಡಿಪಿಒ ಕಚೇರಿಯ ಬಳಿ ಒಂದು, ಕಲಬುರ್ಗಿಯ ಘಾಟಗೆ ಲೇಔಟ್‌ನ ಸಿದ್ಧಾರ್ಥ ನಗರದಲ್ಲಿ, ಶಹಬಾದ್‌ ರಿಂಗ್‌ ರಸ್ತೆಯ ಬಳಿ ಹಾಗೂ ಬಿದ್ದಾಪುರ ಕಾಲೊನಿ ಸೇರಿದಂತೆ ಒಟ್ಟು ನಾಲ್ಕು ತೆರೆದ ತಂಗುದಾಣಗಳಿವೆ. ಅಲ್ಲಿ ಇಂತಹ ಮಕ್ಕಳನ್ನು ದಾಖಲಿಸಿ, ಊಟ ನೀಡಲಾಗುತ್ತದೆ. 6 ತಿಂಗಳ ಪೋಷಣೆಯ ನಂತರ ಮಕ್ಕಳ ವಾರಸುದಾರರನ್ನು ಪತ್ತೆಹಚ್ಚಿ ಅವರಿಗೆ ಅವರನ್ನು ಒಪ್ಪಿಸಲಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಡಿಸಿಪಿಒ) ಶರಣ ಬಸಪ್ಪ ಮಾಹಿತಿ ನೀಡಿದರು.

ಹೆಲ್ಪ್‌ಲೈನ್‌ ಸಂಖ್ಯೆಗೆ ಕರೆ ಮಾಡಿ

ಜಿಲ್ಲೆಯಲ್ಲಿ ಭಿಕ್ಷಾಟನೆ ಮಾಡುವ ಹಾಗೂ ನಿರಾಶ್ರಿತ ವ್ಯಕ್ತಿಗಳು ಕಂಡು ಬಂದಲ್ಲಿ ಹೆಲ್ಪ್‌ಲೈನ್‌ ಸಂಖ್ಯೆ:10581 / 1098 (ಮಕ್ಕಳು ಭೀಕ್ಷಾಟನೆಯಲ್ಲಿದ್ದರೆ) ಅಥವಾ 080 23481580/ 080 29551580/ 08472 251369 ಸಂಖ್ಯೆಗಳಿಗೆ ಸಾರ್ವaಜನಿಕರು ಕರೆ ಮಾಡಿ ತಿಳಿಸಿದರೆ, ಇಲಾಖೆಯ ಸಿಬ್ಬಂದಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಡಿಸಿಪಿಒ) ಅವರು ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿ, ಪುನರ್ವಸತಿ ಕೇಂದ್ರ, ಬಾಲಮಂದಿರಕ್ಕೆ ಕರೆದೊಯ್ಯುತ್ತಾರೆ.

ಬೆಗ್ಗರ್‌ ಸೆಸ್‌ ಸಂಗ್ರಹ ₹ 50 ಲಕ್ಷ

‘ಸಮಾಜದಲ್ಲಿ ಭಿಕ್ಷಾಟನೆ ನಿಯಂತ್ರಿಸಿ, ಆರೋಗ್ಯ ಸಮಾಜ ನಿರ್ಮಾಣಕ್ಕಾಗಿ ಸರ್ಕಾರದ ಸೂಚನೆಯಂತೆ ‘ಬೆಗ್ಗರ್‌ ಸೆಸ್‌‘ ಅಡಿಯಲ್ಲಿ ಸಾರ್ವಜನಿಕರಿಂದ ವಾರ್ಷಿಕವಾಗಿ ಪಾಲಿಕೆಯಿಂದ ತೆರಿಗೆ ಸಂಗ್ರಹಿಸಲಾಗುತ್ತದೆ. ವಾರ್ಷಿಕವಾಗಿ ಅಂದಾಜು ₹ 50 ಲಕ್ಷ ಈ ರೀತಿಯ ತೆರಿಗೆ ಸಂಗ್ರಹವಾಗುತ್ತದೆ. ಇದನ್ನು ಯಾವುದಕ್ಕೆ ಖರ್ಚು ಮಾಡಬೇಕು ಎಂಬ ಮಾರ್ಗದರ್ಶನ ನೀಡಿಲ್ಲ. ಹೀಗಾಗಿ ಈ ಹಣವನ್ನು ರಾಜ್ಯ ಸರ್ಕಾರದ ಖಜಾನೆಗೆ ಜಮಾ ಮಾಡಲಾಗುತ್ತದೆ. ಆದರೆ, ನಿರಾಶ್ರಿತರಿಗಾಗಿಯೇ ಕೇಂದ್ರ ಸರ್ಕಾರದ ಡೇ– ನಲ್ಮಾ ಯೋಜನೆಯಡಿಯಲ್ಲಿ ನಗರದಲ್ಲಿ ಮೂರು ಕಡೆ ’ನೈಟ್‌ ಶೆಲ್ಟರ್‌‘ನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿಗೆ ನಿರಾಶ್ರಿತರನ್ನು ಕರೆ ತಂದು ಬಿಡುತ್ತೇವೆ‘ ಎಂದು ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ‌ ಮಾಹಿತಿ ನೀಡಿದರು.

ದೇಗಲು ಆವರಣದಲ್ಲಿ ದೊಡ್ಡ ಸಂಖ್ಯೆ

ಅಫಜಲಪುರ ಪಟ್ಟಣದಲ್ಲಿ ಮಹಿಳೆಯರು ಮಕ್ಕಳೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿರುತ್ತಾರೆ. ಪ್ರತಿ ಸೋಮವಾರ ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿ ನಡೆಯುವ ವಾರದ ಸಂತೆಯಲ್ಲಿ ಇವರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ತಟ್ಟೆಯಲ್ಲಿ ದೇವರ ಮೂರ್ತಿಯ ಫೋಟೊ ಇಟ್ಟುಕೊಂಡು ಭಿಕ್ಷಾಟನೆ ಮಾಡುತ್ತಾರೆ.

ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇಗುಲ ಹಾಗೂ ಘತ್ತರಗಿಯ ಭಾಗ್ಯವಂತಿ ದೇಗುಲದ ಆವರಣದಲ್ಲಿ ನಿತ್ಯ ಹಲವು ಮಂದಿ ಭಿಕ್ಷಾಟನೆಯಲ್ಲಿ ತೊಡಗಿರುತ್ತಾರೆ. ದೇಗುಲಕ್ಕೆ ಬರುವ ಭಕ್ತರನ್ನು ಬೆನ್ನತ್ತಿ ಹಣ ಕೇಳುತ್ತಾರೆ. ಹಣ ಕೊಡುವ ತನಕವೂ ಬಿಡುವುದಿಲ್ಲ. ಇವರಿಂದ ಭಕ್ತರು ಕಿರಿಕಿರಿ ಅನುಭವಿಸುತ್ತಾರೆ.

ಚಿಂಚೋಳಿ ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಯಲ್ಲಿಯೂ ಭಿಕ್ಷುಕರ ಕಾಟ ಹೇಳತೀರದು. ಪ್ರತಿ ಕಿರಣಿ ಅಂಗಡಿಯಿಂದ ಕನಿಷ್ಠ ₹ 2 ಕೇಳಿ ಪಡೆಯುತ್ತಾರೆ. ಕಿರಣಿ ಅಂಗಡಿಯವರು ಇವರಿಗಾಗಿಯೇ ಕನಿಷ್ಠ ₹ 100 ಮೀಸಲಿಡುತ್ತಾರೆ. ಸೇಡಂನ ಬಸ್‌ನಿಲ್ದಾಣ ಹಾಗೂ ದೇವಸ್ಥಾನಗಳಲ್ಲಿಯೂ ವೃದ್ಧರು, ಮಹಿಳೆಯರು ನಿತ್ಯ ಭಿಕ್ಷಾಟನೆಯಲ್ಲಿ ತೊಡಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT