ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲೂ ಭ್ರಷ್ಟಾಚಾರ ಎಸಗಿದ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ

ಅಭ್ಯರ್ಥಿ ಅಮರನಾಥ ಪಾಟೀಲ ಪರ ಮತಯಾಚನೆ: ಬಸವರಾಜ ಬೊಮ್ಮಾಯಿ
Published 22 ಮೇ 2024, 4:57 IST
Last Updated 22 ಮೇ 2024, 4:57 IST
ಅಕ್ಷರ ಗಾತ್ರ

ಕಲಬುರಗಿ: ‘ವೈಚಾರಿಕತೆ ಬಿತ್ತಿ, ಜ್ಞಾನ ಸಂಪಾದನೆಯ ಹಾದಿ ತೋರಿಸುವ ಶಿಕ್ಷಣದಲ್ಲಿಯೂ ಭ್ರಷ್ಟಾಚಾರ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವವರು ಕಾಂಗ್ರೆಸ್ಸಿಗರು ಮಾತ್ರ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಆಪಾದಿಸಿದರು.

ಹಿಂಗುಲಾಂಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಮಂಗಳವಾರ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಮತಯಾಚಿಸಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರದಲ್ಲಿನ ಆರ್ಥಿಕ, ವೈಚಾರಿಕ, ಸೈದ್ಧಾಂತಿಕ ಮತ್ತು ಜ್ಞಾನದಲ್ಲಿಯೂ ಕಾಂಗ್ರೆಸ್ ಭ್ರಷ್ಟಾಚಾರ ಎಸಗಿದೆ. ಇನ್ನು ಮುಂದೆ ಶಾಲಾ ಪಠ್ಯಗಳನ್ನು ಪರಿಣಿತರು ಸಿದ್ಧಪಡಿಸುವುದಿಲ್ಲ. ಬದಲಿಗೆ ರಾಜಕೀಯ ನಾಯಕರು ತಯಾರಿಸುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣದ ಗುಣಮಟ್ಟ ಕೆಳಮಟ್ಟಕ್ಕೆ ಹೋಗುತ್ತದೆ. ಪಿಯುಸಿ, ಬಿ.ಇಡಿ ಅಂತಹ ಯಾವುದೇ ಪ್ರಶ್ನೆ ಪತ್ರಿಕಗಳು ಇರಲಿ. ಅವುಗಳ ಸೋರಿಕೆ ತಪ್ಪುವುದಿಲ್ಲ’ ಎಂದು ಆರೋಪಿಸಿದರು.

‘ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡಿದ್ದಾಗಿ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ಸಿರು 20–30 ವರ್ಷಗಳ ಹಿಂದೆಯೇ ಶಿಕ್ಷಣದ ಬಗ್ಗೆ ಚಿಂತನೆ ಮಾಡಿದ್ದರೆ ಇವತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಿರಲಿಲ್ಲ. ಖಾಸಗಿ ಸಂಸ್ಥೆಗಳು, ಮಠ ಮಾನ್ಯಗಳು ಶಾಲೆಗಳು ತೆರೆದಿದ್ದರಿಂದ ಒಂದಿಷ್ಟು ಅನುಕೂಲವಾಗಿದೆ’ ಎಂದರು.

‘2016–17ರಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಒಪ್ಪಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗ ರಾಜಕೀಯಕ್ಕಾಗಿ ಎನ್‌ಇಪಿಯನ್ನು ವಿರೋಧಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ಜೊತೆಗೆ ಚಲ್ಲಾಟ ಆಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿಯೂ ಪ್ರಚಾರ ಸಭೆ ನಡೆಸಿ ಮಾತನಾಡಿದ ಬೊಮ್ಮಾಯಿ, ‘2014ಕ್ಕೂ ಮುನ್ನ ದೇಶದಲ್ಲಿ 367 ವೈದ್ಯಕೀಯ ಕಾಲೇಜುಗಳಿದ್ದವು. ಕಳೆದ 10 ವರ್ಷಗಳಲ್ಲಿ ಅವುಗಳ ಸಂಖ್ಯೆ 740ಕ್ಕೆ ತಲುಪಿದೆ. ಶಿಕ್ಷಣದ ಬಗೆಗೆ ಬಿಜೆಪಿ ಹೊಂದಿರುವ ಕಾಳಜಿಯನ್ನು ಇದು ತೋರಿಸುತ್ತದೆ’ ಎಂದರು.

‘ರಾಜ್ಯ ಸರ್ಕಾರ ಶಿಕ್ಷಣದಲ್ಲಿ ಗೊಂದಲ ತಂದು ಮಕ್ಕಳ ಕಲಿಕೆಗೆ ಅಡ್ಡಿಪಡಿಸುತ್ತಿದೆ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮೂರು ಬಾರಿ ಪರೀಕ್ಷೆಗಳು ನಡೆಸಿದರೆ ಪಾವಿತ್ರ್ಯತೆ ಉಳಿಯುತ್ತಾ? ಕೃಪಾಂಕ ಕೊಟ್ಟು ಪಾಸ್ ಮಾಡುವುದಾದರೆ ಪರೀಕ್ಷೆ ನಡೆಸುವುದಾದರೂ ಏಕೆ? ಇಂತಹ ದ್ವಂದ್ವ ನೀತಿಗಳಿಂದ ರಾಜ್ಯದ ಶಿಕ್ಷಣವನ್ನು ಶೂನ್ಯದತ್ತ ಕರೆದೊಯ್ಯುತ್ತಿದ್ದಾರೆ’ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ಮಾತನಾಡಿ, ‘ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿ ಮತವು ಅಮೂಲ್ಯವಾದದ್ದು. ಕೆಲ ವಿದ್ಯಾಂತರು ಎಸಗುವ ಲೋಪದಿಂದಾಗಿ ಶೇ 6ರಷ್ಟು ಮತಗಳು ತಿರಸ್ಕೃತವಾಗುತ್ತವೆ. ಹೀಗಾಗಿ, ಪ್ರಾಶ್ಯಸ್ತದ ಮತವನ್ನು ಮೊದಲು ಬಿಜೆಪಿ ಅಭ್ಯರ್ಥಿಗೆ ನೀಡಬೇಕು’ ಎಂದು ಕೋರಿದರು.

ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಸುನಿಲ್ ವಲ್ಯಾಪುರೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮುಖಂಡರಾದ ಚಂದು ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಶಿವರಾಜ ಪಾಟೀಲ ರದ್ದೇವಾಡಗಿ, ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ನರಿಬೋಳ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಉಪಸ್ಥಿತರಿದ್ದರು.

ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಸದ ಡಾ.ಉಮೇಶ ಜಾಧವ ಶಾಸಕ ಬಸವರಾಜ ಬೊಮ್ಮಾಯಿ ಬಸವರಾಜ ದೇಶಮುಖ ಶಾಸಕರಾದ ಬಿ.ಜಿ.ಪಾಟೀಲ ಸುನಿಲ್ ವಲ್ಲಾಪುರೆ ಬಸವರಾಜ ಮತ್ತಿಮಡು ಡಾ. ಅವಿನಾಶ ಜಾಧವ ಪಾಲ್ಗೊಂಡಿದ್ದರು            –ಪ್ರಜಾವಾಣಿ ಚಿತ್ರ
ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಸದ ಡಾ.ಉಮೇಶ ಜಾಧವ ಶಾಸಕ ಬಸವರಾಜ ಬೊಮ್ಮಾಯಿ ಬಸವರಾಜ ದೇಶಮುಖ ಶಾಸಕರಾದ ಬಿ.ಜಿ.ಪಾಟೀಲ ಸುನಿಲ್ ವಲ್ಲಾಪುರೆ ಬಸವರಾಜ ಮತ್ತಿಮಡು ಡಾ. ಅವಿನಾಶ ಜಾಧವ ಪಾಲ್ಗೊಂಡಿದ್ದರು            –ಪ್ರಜಾವಾಣಿ ಚಿತ್ರ

‘ಸಿದ್ದರಾಮಯ್ಯಗೆ ಖರ್ಗೆ ಪ್ರಧಾನಿಯಾಗಿ ನೋಡಲು ಇಷ್ಟವಿಲ್ಲ’

‘ಕರ್ನಾಟಕದಿಂದ ಯಾರೂ ಪ್ರಧಾನಿ ಆಗುವುದಿಲ್ಲ’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ‘ಬಹುಶಃ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯಾಗಿ ನೋಡುವ ಇಚ್ಛೆ ಇಲ್ಲದಿರುವಂತೆ ಕಂಡುಬರುತ್ತದೆ’ ಎಂದರು. ‘ರಾಜ್ಯದಲ್ಲಿನ ಮತದಾನ ಮುಗಿದ ಬಳಿಕ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ಕೊಟ್ಟಿದ್ದಾರೆ ಅನಿಸುತ್ತಿದೆ. ‘ಇಂಡಿಯಾ’ ಮೈತ್ರಿಕೂಟದ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಖರ್ಗೆ ಹೆಸರು ಪ್ರಸ್ತಾಪಿಸಿದ್ದರು. ಅದಕ್ಕೆ ಕಾಂಗ್ರೆಸ್ಸಿಗರು ಒಪ್ಪಿಗೆ ನೀಡಲಿಲ್ಲ. ಇದು ಅವರೊಳಗಿನ ನಾಯಕತ್ವದ ಬಿಕ್ಕಟ್ಟು ತೋರಿಸುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT