ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಕ್ಕೆ ಮಹತ್ವ ಕೊಟ್ಟ ಅಕ್ಕತಂಗಿಯರು: ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮ

Last Updated 20 ಜನವರಿ 2021, 13:45 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಷ್ಯನ್‌ ಮೂಲದಿಂದ ಅನುವಾದಿಸಿದ ‘ಅಕ್ಕತಂಗಿಯರು’ ಕೃತಿಯು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ. ದುಡಿದು ತಿನ್ನಬೇಕು ಎನ್ನುವ ತತ್ವಕ್ಕೆ ಒತ್ತು ಕೊಡುವ ಮೂಲಕ ಈ ಕೃತಿಯಲ್ಲಿ ಬಸವಣ್ಣನವರ ಕಾಯಕ ನಿಷ್ಠೆಗೂ ಮಹತ್ವ ನೀಡಲಾಗಿದೆ’ ಎಂದು ಪತ್ರಕರ್ತ ಶ್ರೀನಿವಾಸ ಸಿರನೂಕರ ಹೇಳಿದರು.

ನಗರದ ಸರಸ್ವತಿ ಗೋದಾಮ ಹತ್ತಿರದ ಸಿದ್ಧಲಿಂಗೇಶ್ವರ ಬುಕ್ ಮಾಲ್‌ನಲ್ಲಿ ಈಚೆಗೆ ಸಿದ್ಧಲಿಂಗೇಶ್ವರ ಬುಕ್‌ ಡಿಪೊ ಮತ್ತು ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನ ಆಶ್ರಯದಲ್ಲಿ ‘ಅಟ್ಟದ ಮೇಲೆ ಬೆಟ್ಟದಂತ ವಿಚಾರ’ ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಷ್ಯನ್ ಭಾಷೆಯಲ್ಲಿದ್ದ ಈ ಕೃತಿ ಇಂಗ್ಲಿಷ್‌ಗೆ ತರ್ಜುಮೆಗೊಂಡು ಕೆ.ವಿ.ಸುಬ್ಬಣ್ಣ ಅವರ ಒತ್ತಾಸೆಯಿಂದ ಇಂಗ್ಲಿಷ್‌ನಿಂದ ಕನ್ನಡಕ್ಕೆ ವೈದೇಹಿ ಅವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಮೂವರು ಅಕ್ಕತಂಗಿಯರು ರಷ್ಯನ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು. ವಾಸ್ತವ ಜಗತ್ತಿಗೆ ಇದೊಂದು ರೀತಿಯ ಪಾಠ. ಜೀವನದ ನೈಜತೆಯನ್ನು ಈ ಕೃತಿಯಲ್ಲಿ ಕಂಡುಕೊಳ್ಳಬಹುದು’ ಎಂದರು.

‘ಮೂವರು ಅಕ್ಕ-ತಂಗಿಯರು ಬದುಕಿನಲ್ಲಿ ಕಂಡ ಸೋಲು, ಅವಮಾನ ಹಾಗೂ ತಿರಸ್ಕಾರಗಳು ಎಂಥವರನ್ನೂ ಕೂಡ ದೃತಿಗೇಡಿಸುತ್ತವೆ. ಇನ್ನು ಕೆಲವರನ್ನು ನಿರಾಶಾವಾದದ ಕಂದಕಕ್ಕೆ ತಳ್ಳಿ ಮೇಲಕ್ಕೇ ಬರದಂತೆ ಮಾಡಿಬಿಡುತ್ತವೆ. ಇನ್ನು ಕೆಲವರಿಗೆ ಗೆಲುವಿನ ಮೆಟ್ಟಿಲುಗಳಾಗಿ ಉತ್ತುಂಗಕ್ಕೇರಲು ನೆರವಾಗುತ್ತವೆ. ತಿರಸ್ಕಾರ ಅವಮಾನಗಳ ನಡುವೆಯೂ ಸಾವಿರಾರು ಮಹಿಳೆಯರಿಗೆ ಮಾದರಿಯಾಗಿರುವುದು ಈ ಕೃತಿಯಲ್ಲಿ ನಾವು ಕಂಡುಕೊಳ್ಳಬಹುದು’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ಈ ಕೃತಿ ವಾಸ್ತವಿಕ ಬದುಕಿಗೆ ತೀರ ಹತ್ತಿರವೆನಿಸುತ್ತಿದೆ. ದುಡಿಯುವ ವರ್ಗಕ್ಕೆ ಅಕ್ಕತಂಗಿಯರು ಮಾದರಿಯಾಗಿದ್ದಾರೆ ಎಂದರು.

ಸಂಚಾಲಕ ಡಾ.ಶಿವರಾಜ ಪಾಟೀಲ ಮಾತನಾಡಿದರು. ಪ್ರಕಾಶಕ ಬಸವರಾಜ ಕೊನೆಕಅಧ್ಯಕ್ಷತೆ ವಹಿಸಿದ್ದರು. ಸುಬ್ಬರಾವ್ ಕುಲಕರ್ಣಿ, ಕಾವ್ಯಶ್ರೀ ಮಹಾಗಾಂಕರ್, ಡಾ.ಚಿ.ಸಿ ನಿಂಗಣ್ಣ ಸಂಧ್ಯಾ ಹೊನಗುಂಟಿಕರ್, ಆನಂದ ಸಿದ್ದಮಣಿ, ಶ್ರೀಶೈಲ ನಾಗರಾಳ, ಬಿ.ಎಚ್. ನಿರಗುಡಿ, ಬಿ.ಎಸ್. ಮಾಲಿಪಾಟೀಲ, ಸಿ.ಎಸ್. ಮಾಲಿಪಾಟೀಲ, ಜಿ.ಎಸ್. ಮಾಲಿಪಾಟೀಲ, ಶಿವಶರಣಪ್ಪ ಮೋಟಕಪಲ್ಲಿ, ಸಿದ್ಧಲಿಂಗ ಕೊನೆಕ, ಶರಣು ಕೊನೆಕ ಇದ್ದರು. ಚಿ.ಸಿ ನಿಂಗಣ್ಣ ಸ್ವಾಗತಿಸಿದರು. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT