ಸೇಡಂ: ಬಹಿರ್ದೆಸೆಗೆ ಕಮಲಾವತಿ ನದಿ ಬಳಿಗೆ ತೆರಳಿದ ಬಾಲಕನೊಬ್ಬ ಭಾನುವಾರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.
ಪಟ್ಟಣದ ದೊಡ್ಡ ಅಗಸಿ ಬಡಾವಣೆಯ ಕೋಲಿವಾಡ ನಿವಾಸಿ ರಾಹುಲ್ ನಾಗಪ್ಪ ಎಳ್ಳಿ (17) ನದಿಯಲ್ಲಿ ಕೊಚ್ಚಿ ಹೋದ ಬಾಲಕ.
‘ನಾನು ಮತ್ತು ರಾಹುಲ್ ಕಮಲಾವತಿ ನದಿ ಬಳಿಗೆ ಬಹಿರ್ದೆಸೆಗೆ ತೆರಳಿದ್ದೆವು. ರಾಹುಲ್ ಬಹಿರ್ದೆಸೆಗೆ ಸ್ವಲ್ಪ ದೂರ ತೆರಳಿ ನೀರಿಗಿಳಿದಿದ್ದ. ನದಿ ನೀರಿನ ಪ್ರವಾಹ ಹೆಚ್ಚಿತು. ರಾಹುಲ್ ನೀರಲ್ಲಿ ಮುಳುಗಿದ. ವಿಷಯವನ್ನು ನದಿ ಸಮೀಪದಲ್ಲಿದ್ದವರ ಗಮನಕ್ಕೆ ತಂದಾಗ ಅವರು ಸಹಾಯಕ್ಕೆ ಹಗ್ಗ ಎಸೆದರು. ಆದರೆ ಅಷ್ಟರಲ್ಲಿ ರಾಹುಲ್ ಕಣ್ಮರೆಯಾಗಿದ್ದ ಎಂದು ವಿಕಾಸ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬಾಲಕ ನದಿಯಲ್ಲಿ ಕಣ್ಮರೆ ಆಗುತ್ತಿದ್ದಂತೆಯೇ ಸ್ಥಳೀಯರು ನದಿಯತ್ತ ದೌಡಾಯಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದರು. ಮೀನುಗಾರರು ನದಿಗೆ ಧುಮುಕಿ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್ ತಂಡದವರು ದಿನವಿಡೀ ಕಾರ್ಯಾಚರಣೆ ನಡೆಸಿದರು. ಆದರೆ ರಾಹುಲ್ ಪತ್ತೆಯಾಗಲಿಲ್ಲ. ಸ್ಥಳಕ್ಕೆ ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ಪಿಎಸ್ಐ ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದರು. ಪುರಸಭೆ ಸದಸ್ಯ ಸಂತೋಷಕುಮಾರ ತಳವಾರ, ರಾಘವೇಂದ್ರ ಮೆಕ್ಯಾನಿಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಮಲಾವತಿ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕಲ್ಲು ಸ್ಫೋಟಿಸಲಾಗುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ದೊಡ್ಡ ತಗ್ಗುಗಳು ನಿರ್ಮಾಣವಾಗಿವೆ. ನದಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಸುಳಿಗಳಾಗಿ ಮಾರ್ಪಡುತ್ತಿದ್ದು, ನದಿಯಲ್ಲಿ ತೆರಳಿದವರು ಸುಳಿಗೆ ಸಿಲುಕುವಂತಾಗುತ್ತಿದೆ. ನಿಧಾನಗತಿಯ ಕಾಮಗಾರಿ ಸೂಕ್ತವಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.