ಗುರುವಾರ , ಜುಲೈ 7, 2022
22 °C
ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಅಭಿಮತ

ಶ್ರದ್ಧೆ ಇಲ್ಲದಿದ್ದರೆ ಬುದ್ಧ ಅರ್ಥವಾಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ನಮ್ಮ ಜನರಲ್ಲಿ ಶ್ರದ್ಧೆ ಎಂಬುದೇ ಇಲ್ಲ. ಹೀಗಾಗಿ ನಾವು ಬುದ್ಧನ ಬದ್ಧತೆ ಹಾಗೂ ಅಂಬೇಡ್ಕರ್‌ ತ್ಯಾಗಗಳನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಇಲ್ಲಿನ ಬುದ್ಧ ವಿಹಾರದಲ್ಲಿ ಸೋಮವಾರ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಇನ್ನೊಬ್ಬರನ್ನು ಮೆಚ್ಚಿಸುವುದಕ್ಕೋ, ತೋರಿಕೆಗೋ ಮಾಡುವ ಯಾವುದೇ ಆಚರಣೆಗೆ ಸಾರ್ಥಕವಾಗುವುದಿಲ್ಲ. ಬುದ್ಧನ ಸನ್ನಿಧಿಗೆ ಬರುವವರು ಬೌದ್ಧ ಧರ್ಮದಲ್ಲಿ ನಂಬಿಕೆ, ಶ್ರದ್ಧೆ ಇಟ್ಟಿಕೊಳ್ಳಬೇಕು. ಒಬ್ಬ ರಾಜನಿಗೆ ವೈರಾಗ್ಯ ಬಂತು ಎಂಬ ಕಾರಣಕ್ಕೆ ಹುಟ್ಟಿದ ಧರ್ಮ ಇದಲ್ಲ. ವಿಶ್ವದ ಮನುಕುಲದ ದುಃಖಕ್ಕೆ ಕಾರಣವೇನು? ಅದರ ಪರಿಹಾರವೇನು ಎಂದು ಕಂಡಿಕೊಳ್ಳಲು ಹುಟ್ಟಿದೆ’ ಎಂದರು.

‘ಯಾವ ದೇಶದ ಜನ ಎಷ್ಟು ಸುಖವಾಗಿದ್ದಾರೆ ಎಂಬುದನ್ನು ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆಯು ಅಂಕಿ–ಸಂಖ್ಯೆಗಳನ್ನು ಸಂಗ್ರಹಿಸುತ್ತಿದೆ. ಇದನ್ನು ‘ವಿಶ್ವ ಸಂತೋಷ ಸೂಚ್ಯಂಕ’ ಎನ್ನುತ್ತಾರೆ. ಸುಖ, ನೆಮ್ಮದಿಯ ಮಾರ್ಗ ಬೌದ್ಧ ಧರ್ಮದಲ್ಲಿ ಬಹಳ ಸುಲಭವಾಗಿದೆ. ಹೀಗಾಗಿ, ವಿಶ್ವದ ಸಂತೋಷಕ್ಕೆ ಬೌದ್ಧ ಧರ್ಮವೇ ಜೀವಕಣವಾಗಿದೆ’ ಎಂದರು.

‘ನಮ್ಮಲ್ಲಿ ಜಾತಿ ತಾರತಮ್ಯದ ಕಾರಣ ಸಾಕಷ್ಟು ಸಂಕಷ್ಟ ಎದುರಿಸಬೇಕಾಗಿದೆ. ಇನ್ನು ಮುಂದೆಯೂ ತಾರತಮ್ಯ ಹೆಚ್ಚಾಗಲಿದೆ. ಆದರೆ, ಯಾವುದಕ್ಕೂ ಅಂಜದೇ ನಾವು ಧೈರ್ಯವಾಗಿ ಬದುಕಬೇಕು. ಶಿಕ್ಷಣ, ಜ್ಞಾನ ‍ಪಡೆಯಬೇಕು. ಆಗ ಮಾತ್ರ ಸುಖ– ಸಮೃದ್ಧಿ ಸಾಧ್ಯ’ ಎಂದು ಕಿವಿಮಾತು ಹೇಳಿದರು.

‘ಮೂರ್ತಿ ಪೂಜೆ ತಿರಸ್ಕರಿಸಿದ ಬುದ್ಧ ಹಾಗೂ ಬಸವರನ್ನೇ ನಾವು ಮೂರ್ತಿ ಮಾಡಿದ್ದೇವೆ. ಅವರ ಮೂರ್ತಿ ನೋಡಿದಾಗ ತತ್ವಗಳು ನಮ್ಮ ಮನಸ್ಸಿನಲ್ಲಿ ಮೂಡಬೇಕು ಎಂಬ ಕಾರಣದಿಂದ ಬುದ್ಧ ವಿಹಾರದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ. ಆದರೆ, ಬರೀ ಪೂಜೆಯಿಂದ ಮಂತ್ರದಿಂದ ಏನೂ ಸಿಗುವುದಿಲ್ಲ. ಏನನ್ನಾದರೂ ಪಡೆಯಬೇಕೆಂದರೆ ಕೆಲಸ ಮಾಡಬೇಕು’ ಎಂದರು.

ಉಪನ್ಯಾಸ ನೀಡಿದ ಕವಿ ಸುಬ್ಬು ಹೊಲೆಯಾರ್‌, ‘ನಾವು ಉಸಿರಾಡುವ ಗಾಳಿ ಎಷ್ಟು ಮುಖ್ಯವೋ ಬುದ್ಧ ತತ್ವಗಳೂ ಅಷ್ವೇ ಮುಖ್ಯ. ಇಂದಿನ ಸಮಾಜದ ತಲ್ಲಣಗಳಿಗೆ ಇವು ಉತ್ತರವಾಗಿವೆ’ ಎಂದರು.

ಶಾಸಕ ಎಂ.ವೈ.ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಮುಖಂಡರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ನೀಲಕಂಠರಾವ್‌ ಮೂಲಗೆ, ಡಾ.ಎಸ್.ಬಿ.ಕಾಮರೆಡ್ಡಿ, ಬುದ್ಧ ವಿಹಾರ ವಿಶ್ವಸ್ಥ ಮಂಡಳಿಯ ಮುಖಂಡ ಶಾಂತಪ್ಪ ಸೂರನ್, ಆಡಳಿತಾಧಿಕಾರಿ ಆರ್.ಕೆ.ಬೇಗಾರ, ಕವಿತಾ ಸುಬ್ಬಯ್ಯ ಇದ್ದರು.

ಪ್ರೊ.ಈಶ್ವರ ಇಂಗನ್ ಅವರ ‘ಬೌದ್ಧಶ್ರೇಷ್ಠ ಮಹಿಳೆಯರು’ ಹಾಗೂ ‘ಡಾ.ಬಾಬಾಸಾಹೇಬ್‌ ಭೀಮರಾವ್ ಅಂಬೇಡ್ಕರ್– ಎರಡು ನಾಟಕಗಳು’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಸ್ವಾಗತಿಸಿದರು. ಮಾಪಣ್ಣ ಗಂಜಗಿರಿ ಅತಿಥಿಗಳನ್ನು ಸನ್ಮಾನಿಸಿದರು. ಚಂದ್ರಶೇಖರ ದೊಡ್ಡಮನಿ ನಿರೂಪಿಸಿದರು. ಪ್ರೊ.ಈಶ್ವರ ಇಂಗನ್ ವಂದಿಸಿದರು.

*

ಸಾಮೂಹಿಕ ಬುದ್ಧ ವಂದನೆ
ಬುದ್ಧ ಪೂರ್ಣಿಮೆ ಅಂಗವಾಗಿ ಇಲ್ಲಿನ ಬೌದ್ಧ ವಿಹಾರದಲ್ಲಿ ಸೋಮವಾರ ಭಂತೆ ಸಂಗಾನಂದ ಅವರ ನೇತೃತ್ವದಲ್ಲಿ ಸಾಮೂಹಿಕ ಬುದ್ಧವಂದನೆ ನೆರವೇರಿತು. ಬೇರೆಬೇರೆ ಕಡೆಯಿಂದ ಬಂದಿದ್ದ ಬೌದ್ಧ ಬಿಕ್ಕುಗಳು ಕೂಡ ಇದರಲ್ಲಿ ಪಾಲ್ಗೊಂಡರು.

ವಿಹಾರದಲ್ಲಿರುವ ಬುದ್ಧನ ಪೀಠ ಹಾಗೂ ಮೂರ್ತಿಗೆ ಬಣ್ಣಬಣ್ಣದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ನೆಲಮಹಡಿಯ ಪ್ರಾರ್ಥನಾ ಸಭಾಂಗಣದಲ್ಲಿ ಹಲವರು ಧ್ಯಾನ ಮಾಡಿದರು. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಇಡೀ ದಿನ ವಿಹಾರದ ಆವರಣದಲ್ಲಿ ಕಳೆದರು. ಸಂಜೆ ಬಯಲು ರಂಗಮಂದಿರದಲ್ಲಿ ‘ಪಟಾಚಾರ’ ನಾಟಕ ಪ್ರದರ್ಶನ, ಧಮ್ಮಗೀತೆಗಳ ಸಾಮೂಹಿಕ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು