ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ ಕ್ಷೇತ್ರ ಸ್ಥಿತಿ–ಗತಿ| ಗೆದ್ದ ಪಕ್ಷಕ್ಕೆ ಅಧಿಕಾರದ ಗದ್ದುಗೆ; ಪ್ರತೀತಿ

Last Updated 6 ಫೆಬ್ರುವರಿ 2023, 5:47 IST
ಅಕ್ಷರ ಗಾತ್ರ

ಕಲಬುರಗಿ: ಚಿಂಚೋಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಪ್ರತೀತಿ ಇರುವ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇರಲಿದ್ದು, ಜೆಡಿಎಸ್‌ ಕೂಡ ತನ್ನ ಶಕ್ತಿ ಪ್ರದರ್ಶನಕ್ಕೆ ಅಖಾಡಕ್ಕೆ ಇಳಿದಿದೆ.

‘ಈ ಹಿಂದೆ ಚಿಂಚೋಳಿಯಿಂದ ಗೆದ್ದ ವೀರೇಂದ್ರ ಪಾಟೀಲ, ದೇವಿಂದ್ರಪ್ಪ ಗಾಳಪ್ಪ, ವೀರಯ್ಯ ಸ್ವಾಮಿ, ವೈಜನಾಥ ಪಾಟೀಲ, ಸುನೀಲ್‌ ವಲ್ಲ್ಯಾಪುರ, ಡಾ.ಅವಿನಾಶ ಜಾಧವ ಅವರು ಪ್ರತಿನಿಧಿಸಿದ್ದ ಪಕ್ಷಗಳೇ ಅಧಿಕಾರಕ್ಕೆ ಬಂದಿವೆ. ಒಂದು ವೇಳೆ ಕ್ಷೇತ್ರದ ಶಾಸಕೇತರ ಪಕ್ಷವು ಅಧಿಕಾರಕ್ಕೆ ಬಂದರೂ ಪೂರ್ಣಾವಧಿಯ ಸರ್ಕಾರ ನಡೆಸಿಲ್ಲ. ಹೀಗಾಗಿ, ಚಿಂಚೋಳಿ ಕ್ಷೇತ್ರದ ಮೇಲೆ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಕಾಳಜಿ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಕಾಳಗಿ ಮತ್ತು ಚಿಂಚೋಳಿ ತಾಲ್ಲೂಕುಗಳ ನಡುವೆ ಹಂಚಿಕೆಯಾದ ಚಿಂಚೋಳಿ ಕ್ಷೇತ್ರ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾಗಿದೆ. ಅನಿಯಮಿತ ಮಳೆ, ಬರ, ಬಗರ್‌ ಹುಕುಂ ಸಾಗುವಾಳಿದಾರರ ಸಮಸ್ಯೆ, ಮಕ್ಕಳ ಮಾರಾಟದ ಕಳಂಕ ಹಾಗೂ ವಲಸೆಗೂ ಹೆಸರಾಗಿದೆ. ಇದರ ಜತೆಗೆ ಕಾಂಗ್ರೆಸ್‌ನ ಭದ್ರಕೋಟೆಯೂ ಆಗಿದೆ.

1957ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ ಅವರು ಗೆದ್ದು ಕಾಂಗ್ರೆಸ್‌ಗೆ ಭದ್ರ ಅಡಿಪಾಯ ಹಾಕಿಕೊಟ್ಟರು. ಅಲ್ಲಿಂದ ಇಲ್ಲಿವರೆಗೂ ನಡೆದ 15 ಚುನಾವಣೆಗಳಲ್ಲಿ 11ರಲ್ಲಿ ಕಾಂಗ್ರೆಸ್ ಗೆದ್ದಿದ್ದು, 1994ರಲ್ಲಿ ಜನತಾದಳ, 2004ರಲ್ಲಿ ಜೆಡಿಎಸ್, 2008 ಹಾಗೂ ಉಮೇಶ ಜಾಧವ ಅವರ
ರಾಜೀನಾಮೆ ಕಾರಣ 2019ರ ಉಪಚುನಾವಣೆಯಲ್ಲಿ ಬಿಜೆಪಿ ಪಾಲಾಗಿದೆ.

2019ರ ಉಪಚುನಾವಣೆಯಲ್ಲಿ ಬಿಜೆಪಿಯ ಡಾ.ಅವಿನಾಶ ಜಾಧವ ಅವರು ಗೆದ್ದು ಶಾಸಕರಾದರು. ಕ್ಷೇತ್ರ ಉಳಿಸಿಕೊಳ್ಳುವ ಇರಾದೆ ಬಿಜೆಪಿಯಷ್ಟೇ ಸಂಸದ ಡಾ.ಉಮೇಶ ಜಾಧವ ಅವರಿಗೂ ಇದೆ. ಇದಕ್ಕೆ ಕಾರಣ;
ಮಗನ ರಾಜಕೀಯ ಭವಿಷ್ಯ ಹಾಗೂ ಬಂಜಾರ ಸಮುದಾಯದ ಮೇಲಿನ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸುವುದಾಗಿದೆ.

ಆದರೆ, ‘ಅವಿನಾಶ ಅವರು ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ’ ಎಂಬ ಆರೋಪ ಬಿಜೆಪಿಯ ಕಾರ್ಯಕರ್ತರಲ್ಲಿದೆ. ‘ಸ್ವಪಕ್ಷದಲ್ಲಿ ಕಾಣದ ಕೈಗಳು ಕಾರ್ಯಕರ್ತರನ್ನು ನಿಯಂತ್ರಿಸುವ ಕೆಲಸ ಮಾಡಿ, ಶಾಸಕರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂಬ ಆಪಾದನೆಯೂ ಕೇಳಿಬರುತ್ತಿವೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಜೀವನ ಯಾಕಾಪುರ ಅವರಿಗೆ ಜೆಡಿಎಸ್‌ ಟಿಕೆಟ್ ಖಚಿತವಾಗಿದೆ. ಈಗಾಗಲೇ ಪಂಚರತ್ನ ಯಾತ್ರೆ ಮೂಲಕ ಕ್ಷೇತ್ರದ ಗ್ರಾಮಗಳನ್ನು ತಲುಪಿದ್ದು, ಪಕ್ಷದ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ‘ಸಂಭವನೀಯ ಅಭ್ಯರ್ಥಿಗಳಾದ ಅವಿನಾಶ ಜಾಧವ ಚಿಂಚೋಳಿ ಕ್ಷೇತ್ರದ ಬೆಂಡಸೂರ ತಾಂಡಾದವರು ಹಾಗೂ ಸುಭಾಷ ಅವರು ಆಳಂದದವರು. ನಾನು ಇದೇ ಕ್ಷೇತ್ರದ ಸ್ಥಳೀಯ’ ಎಂಬುದು ಯಾಕಾಪುರ ಅವರ ವಾದ.

ಕಾಂಗ್ರೆಸ್‌ಗೆ ಸೇಡು ತೀರಿಸಿಕೊಳ್ಳುವ ಕಾತರ

ಕಮಲ ಪಾಳೆಯದಿಂದ ಕ್ಷೇತ್ರವನ್ನು ವಶಕ್ಕೆ ಪಡೆದು, ಉಪಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಂಜಾರ ಸಮುದಾಯದ ಸುಭಾಷ ರಾಠೋಡ ಅವರನ್ನು ಕಣಕ್ಕಿಳಿಸಿ, ಅವರದೇ ಸಮುದಾಯದ ಮತ ಕಸಿದು ಗೆಲ್ಲುವ ಚಿಂತನೆ ಕಾಂಗ್ರೆಸ್ ನಾಯಕರದ್ದು ಎಂಬ ಮಾತುಗಳು ಕೇಳಿಬರುತ್ತಿವೆ.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ ಅವರ ಬಿಜೆಪಿಯಲ್ಲಿದ್ದು, ಉಮೇಶ ಜಾಧವ ಸೇರ್ಪಡೆ ವಿರೋಧಿಸಿ ಕಾಂಗ್ರೆಸ್‌ ಪಾಳೆಯಕ್ಕೆ ಜಿಗಿದಿದ್ದರು. ಉಪಚುನಾವಣೆಯಲ್ಲಿ ಅವಿನಾಶ ವಿರುದ್ಧ 61,079 ಮತ ಪಡೆದು ಪ್ರಬಲ ಪೈಪೋಟಿ ನೀಡಿದ್ದರು. ಟಿಕೆಟ್‌ಗಾಗಿ ಮತ್ತೆ ಅರ್ಜಿ ಸಲ್ಲಿಸಿದ್ದು, ಇವರೊಂದಿಗೆ ಗೋಪಾಲರಾವ್ ಕಟ್ಟಿಮನಿ, ಶರಣಪ್ಪ ಇತರರು ಆಕಾಂಕ್ಷಿ ಆಗಿದ್ದಾರೆ.

ಆಡಳಿತ ಪಕ್ಷದ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯವನ್ನು ಮುಂದಿಟ್ಟುಕೊಂಡು ಈಗಾಗಲೇ ಚುನಾವಣೆ ಪ್ರಚಾರವನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷೆಗಳು ಆರಂಭಿಸಿದ್ದಾರೆ. ಸಿಪಿಎಂ, ಆಪ್‌, ಎಐಎಂಐಎಂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆ ಇದೆ.

ಲಿಂಗಾಯತ, ಕೋಲಿ ಸಮುದಾಯಗಳ ಮುನಿಸು

‘ನಾಲ್ಕು ಬಾರಿ ಗೆದ್ದು, ಎರಡು ಬಾರಿ ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲ ಅವರನ್ನು ವಯೋಸಹಜ ಅನಾರೋಗ್ಯದ ಕಾರಣಕ್ಕೆ ಸಿ.ಎಂ ಸ್ಥಾನದಿಂದ ಕೆಳಗಿಳಿಸಿದಕ್ಕೆ ಲಿಂಗಾಯತರಲ್ಲಿ ಹಾಗೂ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ದೇವಿಂದ್ರಪ್ಪ ಗಾಳಪ್ಪ ಅವರಿಗೆ 4ನೇ ಬಾರಿ ಟಿಕೆಟ್‌ ನೀಡಿದಕ್ಕೆ ಕೋಲಿ ಸಮುದಾಯದವರಲ್ಲಿ ಕಾಂಗ್ರೆಸ್‌ ಮೇಲೆ ಮುನಿಸಿದೆ’ ಎನ್ನುತ್ತಾರೆ ಸ್ಥಳೀಯರು.

ಪ್ರತಿ ಚುನಾವಣೆಯಲ್ಲಿ ಸಮುದಾಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಯತ್ನಗಳು ನಡೆಯುತ್ತಿವೆ. ಹೀಗಾಗಿ, ಉಭಯ ಸಮುದಾಯಗಳ ಮುಖಂಡರು ಈ ಸಮುದಾಯದ ಮತ ಸೆಳೆಯುವ ಪ್ರಯತ್ನದಲ್ಲಿ ತೊಡಗುವುದು ಸಾಮಾನ್ಯ. ಕ್ಷೇತ್ರದ ಲಿಂಗಾಯತ ಮುಖಂಡರನ್ನು ಗುರುತಿಸಿ ಸ್ಥಾನಮಾನ ನೀಡುತ್ತಿಲ್ಲ ಎಂಬ ಆಪಾದನೆಗೆ ಬಿಜೆಪಿಯೂ ಹೊರತಾಗಿಲ್ಲ.

ಜಾತಿ ಮತಗಳ ಮೇಲೆ ಫಲಿತಾಂಶ!

ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಸಮಬಲದ ಹೋರಾಟ ಕಂಡರೂ ಜಾತಿ ಮತಗಳೇ ಫಲಿತಾಂಶವನ್ನು ನಿರ್ಧರಿಸಲಿದೆ ಎಂಬ ಮಾತುಗಳು ಕೇಳಿಬರುತ್ತದೆ.

2013ರಿಂದ ಬಂಜಾರ ಸಮುದಾಯವು ಜಾಧವ ಪರವಾಗಿ ನಿಂತಿದೆ. ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ‘ನಿಮ್ಮ ಸಮುದಾಯದ ಮಗ ದೆಹಲಿಯಲ್ಲಿದ್ದಾನೆ’ ಎಂಬ ಪ್ರಧಾನಿ ಮೋದಿ ಮಾತುಗಳು ಒಂದಿಷ್ಟು ಮತ ತಂದುಕೊಡಬಹುದು.

ಸುಭಾಷ ರಾಠೋಡ ಬಂಜಾರ ಸಮುದಾಯಕ್ಕೆ ಸೇರಿದ್ದು, ಒಂದಿಷ್ಟು ಮತಗಳು ‘ಕೈ’ಗೆ ಬರಬಹುದು. ಖರ್ಗೆ ಅವರ ಕಾರಣಕ್ಕಾಗಿ ಪರಿಶಿಷ್ಟ ಜಾತಿಯು ಕಾಂಗ್ರೆಸ್ ಅಭ್ಯರ್ಥಿಯ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ. ಕೋಲಿ, ಮುಸ್ಲಿಂ ಮತಗಳೊಂದಿಗೆ ಉಳಿದ ಜಾತಿಗಳ ಮತಗಳನ್ನು ಸೆಳೆದರೆ ಗೆಲ್ಲಬಹುದು ಎಂಬುದ ಕಾಂಗ್ರೆಸ್‌ ಲೆಕ್ಕಾಚಾರ. ಚದುರಿ ಹೋಗಿರುವ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಇತರೆ ಸಮುದಾಯಗಳ ಮತಗಳನ್ನು ಸೆಳೆಯುವಲ್ಲಿ ಸಂಜೀವನ ಯಾಕಾಪುರ ಯಶಸ್ವಿಯಾದರೆ, ‘ಕೈ’ ಅಥವಾ ‘ಕಮಲ’ದ ಮೇಲೆ ನಕರಾತ್ಮ ಪರಿಣಾಮ ಬೀರಬಹುದು.

ಚಿಂಚೋಳಿ ಕ್ಷೇತ್ರದ ಪರಿಚಯ

ಹಾಲಿ ಶಾಸಕ; ಡಾ.ಅವಿನಾಶ ಜಾಧವ

2019ರ ಉಪಚುನಾವಣೆ ಫಲಿತಾಂಶ

ಬಿಜೆಪಿ;69,109

ಕಾಂಗ್ರೆಸ್;61,079

ಬಿಎಸ್‌ಪಿ;1,873

––––––––––

ಹಾಲಿ ಮತದಾರರ ವಿವರ

ಪುರುಷ; 1,01,639

ಮಹಿಳೆ; 97,515

ಒಟ್ಟು; 1,99,154

ಮತಗಟ್ಟೆಗಳು; 242

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT