ಕಲಬುರಗಿ: ರಾಜ್ಯ ಗಮನ ಸೆಳೆದಿರುವ ‘ಚಿತ್ತಾಪುರ ಪಥಸಂಚಲನ’ ಪ್ರಕರಣ ಗುರುವಾರ ಹೊಸ ತಿರುವು ಪಡೆದಿದೆ.

‘ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಸಂಬಂಧ ನ.5ರಂದು ಮತ್ತೊಮ್ಮೆ ಶಾಂತಿ ಸಭೆ ನಡೆಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಗುರುವಾರ ನಿರ್ದೇಶನ ನೀಡಿದೆ. ಚಿತ್ತಾಪುರದಲ್ಲಿ ನ.2ರಂದು ಗಣವೇಷಧಾರಿಗಳ ‘ಪಥಸಂಚಲನ’ಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಆರ್ಎಸ್ಎಸ್ಗೆ ಇದರಿಂದ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ. ಜೊತೆಗೆ ‘ಚಿತ್ತಾಪುರ ಪಥಸಂಚಲನ’ ವಿವಾದ ಇನ್ನೂ ಪರಿಹಾರ ಕಾಣದೇ ಕಗ್ಗಂಟಾಗಿಯೇ ಉಳಿದಿದೆ.

ಸಾರ್ವಜನಿಕರ ಚಿತ್ತ ಇದೀಗ ಬೆಂಗಳೂರಿನಲ್ಲಿ ನ.5ರಂದು ನಡೆಯಲಿರುವ ‘ಶಾಂತಿ ಸಭೆ’ಯತ್ತ ಹೊರಳಿದೆ. 2ನೇ ಸುತ್ತಿನ ‘ಶಾಂತಿ ಸಭೆ’ಯಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಬಹುದು ಎಂಬ ಕುತೂಹಲ ಉಳಿಸಿಕೊಂಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಯನ್ನು ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಸಚಿವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ವಿಜಯದಶಮಿ ಹಾಗೂ ಆರ್ಎಸ್ಎಸ್ ಶತಾಬ್ದಿ ಅಂಗವಾಗಿ ಅ.19ರಂದು ಗಣವೇಷಧಾರಿಗಳ ಪಥಸಂಚಲನವನ್ನು ಅದ್ದೂರಿಯಾಗಿ ನಡೆಸಲು ಆರ್ಎಸ್ಎಸ್ ಸಿದ್ಧತೆ ಮಾಡಿಕೊಂಡಿತ್ತು. ಪಥಸಂಚಲನಕ್ಕಾಗಿ ಅನುಮತಿ ಕೋರಿ ತಾಲ್ಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿತ್ತು. ‘ಆರ್ಎಸ್ಎಸ್ ಅಲ್ಲದೇ ಮತ್ತೆರಡು ಸಂಘಟನೆಗಳು ಅದೇ ದಿನ, ಅದೇ ಸಮಯಕ್ಕೆ ಮೆರವಣಿಗೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು. ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದು’ ಎಂಬ ಕಾರಣಕ್ಕೆ ಚಿತ್ತಾಪುರದ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು.

ಇದನ್ನು ಪ್ರಶ್ನಿಸಿ ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್ನ ಕಲಬುರಗಿ ಪೀಠವು ‘ನ.2ರಂದು ಪಥಸಂಚಲನ ನಡೆಸಲು ಸಾಧ್ಯವೇ’ ಎಂದು ಕೇಳಿತ್ತು. ಬಳಿಕ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆರ್ಎಸ್ಎಸ್ಗೆ ಸೂಚಿಸಿ, ವಿಚಾರಣೆಯನ್ನು ಅ.24ಕ್ಕೆ ಮುಂದೂಡಿತ್ತು. ನ.2ರಂದು ತಮಗೂ ಅನುಮತಿ ನೀಡುವಂತೆ ಮತ್ತಷ್ಟು ಸಂಘಟನೆಗಳು ಪೈಪೋಟಿ ಬಿದ್ದಂತೆ ಅರ್ಜಿ ಸಲ್ಲಿಸಿದ್ದವು.

ಪುನಃ ನ.24ರಂದು ಅರ್ಜಿ ವಿಚಾರಣೆ ಮುಂದುವರಿಸಿದ್ದ ಹೈಕೋರ್ಟ್, ಅರ್ಜಿದಾರರೊಂದಿಗೆ ‘ಶಾಂತಿ ಸಭೆ’ ನಡೆಸುವಂತೆ ನಿರ್ದೇಶನ ನೀಡಿ, ವಿಚಾರಣೆಯನ್ನು ಅ.30ಕ್ಕೆ ಮುಂದೂಡಿತ್ತು.

ನ್ಯಾಯಾಲಯದ ಆದೇಶದಂತೆ ಆರ್ಎಸ್ಎಸ್, ಭೀಮ್ ಆರ್ಮಿ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸೇರಿದಂತೆ ಅರ್ಜಿದಾರ ಸಂಘಟನೆಗಳೊಂದಿಗೆ ಜಿಲ್ಲಾಡಳಿತಕ್ಕೆ ಅ.28ರಂದು ‘ಶಾಂತಿ ಸಭೆ’ ನಡೆಸಿತ್ತು. ಸಭೆಯಲ್ಲಿ ಅರ್ಜಿದಾರ ಸಂಘಟನೆಗಳು ತಮ್ಮ ನಿಲುವು ವ್ಯಕ್ತಪಡಿಸಿದ್ದವು. ಸಭೆಯ ಕೊನೆಯಲ್ಲಿ ‘ವಾದ–ಪ್ರತಿವಾದ’ ತಾರಕಕ್ಕೇರಿ ‘ಸಂಘರ್ಷಮಯ’ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು.

‘ನ್ಯಾಯಾಲಯದ ಆದೇಶಕ್ಕೆ ಬದ್ಧ’

‘ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿದ್ದೇವೆ. ಕೋರ್ಟ್ ಸೂಚನೆಯಂತೆ ನ.2ರಂದು ಪಥಸಂಚಲನಕ್ಕೆ ಸಿದ್ಧತೆ ನಡೆದಿತ್ತು. ಇದೀಗ ಅದು ಮುಂದೆ ಹೋಗಿದೆ. ಸದ್ಯ ನ.5ರಂದು ಶಾಂತಿ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ನ.7ರಂದು ನ್ಯಾಯಾಲಯ ಏನು ಹೇಳುತ್ತೋ ಅದರಂತೆ ನಡೆಯುತ್ತೇವೆ’ ಎಂದು ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.