ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: 26 ರಿಂದ 31ರವರೆಗೆ ಸಂವಿಧಾನ ಜಾಗೃತಿ ಜಾಥಾ

ಸಿದ್ಧತಾ ಸಭೆ ಸಂವಿಧಾನ ಜಾಗೃತಿಗಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ
Published 24 ಜನವರಿ 2024, 13:02 IST
Last Updated 24 ಜನವರಿ 2024, 13:02 IST
ಅಕ್ಷರ ಗಾತ್ರ

ಚಿತ್ತಾಪುರ: ‘ಜ.26 ರಿಂದ 31ರವರೆಗೆ ತಾಲ್ಲೂಕಿನಾದ್ಯಂತ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಸಂವಿಧಾನ ಕುರಿತು ಶಾಲಾ ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಲು ಸಂವಿಧಾನ ಆಧಾರಿತವಾಗಿ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿದಾನ ಓದು ಕಿರು ಪುಸ್ತಕ ಬಹುಮಾನ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ್ ಹೇಳಿದರು.

ತಾಲ್ಲೂಕಿನಲ್ಲಿ ಆಗಮಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಕುರಿತು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಮಟ್ಟದ ಅಧಿಕಾರಿ ಹಾಗೂ ಸಂಘ ಸಂಸ್ಥೆಗಳ ಮುಖಂಡರ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ಪೀಠಿಕೆ, ಶರಣರ ವಚನಗಳ ಸ್ತಬ್ಧಚಿತ್ರ ಜಾಥಾದಲ್ಲಿ ಇರುತ್ತದೆ. ನಾಲ್ಕು ಗ್ರಾಮ ಪಂಚಾಯಿತಿಗೆ ಒಬ್ಬರಂತೆ ನೋಡಲ್ ಅಧಿಕಾರಿ ನೇಮಿಸಲಾಗುತ್ತಿದೆ. ಜಾಥಾ ತಾಲ್ಲೂಕಿಗೆ ಪ್ರವೇಶ ಮಾಡುವಾಗ ಸ್ಥಳೀಯ ಶಾಸಕರೇ ಸ್ವಾಗತಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಸಂಘ ಸಂಸ್ಥೆಯವರು ಸರ್ಕಾರಿ ಗೌರವದೊಂದಿಗೆ ಸಂವಿಧಾನ ಜಾಗೃತಿ ಜಾಥಾಕ್ಕೆ ಸ್ವಾಗತಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

‘ದಿನದಲ್ಲಿ ಎರಡ್ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಥಾ ಸಂಚರಿಸುವುದು. ಸಾಯಂಕಾಲ ಒಂದು ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಬಹಿರಂಗ ಸಭೆ ನಡೆಯುತ್ತದೆ. ಸಂವಿಧಾನ ಕುರಿತು ಉಪನ್ಯಾಸ ನೀಡುವರು ಜಾಥಾದೊಂದಿಗೆ ಇರುತ್ತಾರೆ. ಜಾಥಾದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತಿ ಪಂಚಾಯಿತಿ ಪಿಡಿಒ ಅವರು ಗ್ರಾಮಗಳಲ್ಲಿ ಡಂಗೂರ ಸಾರಲು ಸೂಚಿಸಲಾಗಿದೆ. ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಥಾ ಸಂಚರಿಸಲಿದ್ದು, ಪ್ರತಿ ಪಂಚಾಯಿತಿಗೆ ಒಂದು ಗಂಟೆಯ ಕಾಲಾವಕಾಶ ಇರುತ್ತದೆ’ ಎಂದು ಅವರು ಹೇಳಿದರು.

ಸಿಡಿಪಿಒ ಮಲ್ಲಣ್ಣ ದೇಸಾಯಿ ಮಾತನಾಡಿ, ‘ಸಂವಿಧಾನ ಜಾಗೃತಿ ಜಾಥಾದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸುವುದು ಕಡ್ಡಾಯ. ಪ್ರತಿ ಮನೆಗೆ ಮಾಹಿತಿ ತಲುಪಿಸಬೇಕು. ಹಾಗೂ ಪ್ರತಿ ಗ್ರಾಮಗಳ ಸ್ತ್ರೀಶಕ್ತಿ ಮಹಿಳಾ ಸಂಘದ ಮಹಿಳೆಯರು ಭಾಗವಹಿಸುವಂತೆ ಅರಿವು ಮೂಡಿಸಬೇಕು. ಯಾರೂ ರಜೆಯ ಮೇಲೆ ಹೋಗುವಂತ್ತಿಲ್ಲ. ಮಹಿಳೆಯರು ಕಳಸದ ಮೂಲಕ ಜಾಥಾಕ್ಕೆ ಸ್ವಾಗತಿಸಿಕೊಂಡು ಹಬ್ಬದಂತೆ ಜಾಥಾ ಮೆರವಣಿಗೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರು, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸಂಘಸಂಸ್ಥೆಗಳ ಮುಖಂಡರಾದ ಉದಯಕುಮಾರ ಸಾಗರ, ಅನಂದ ಕಲ್ಲಕ್, ಜಗದೀಶ ಚವಾಣ್, ಪ್ರಹ್ಲಾದ್ ವಿಶ್ವಕರ್ಮ, ಬಾಬು ಕಾಶಿ, ವಿಜಯ ಚವಾಣ್, ರಾಜಣ್ಣ ಕರದಾಳ ಅವರು ಮಾತನಾಡಿದರು.

ಸಭೆಯಲ್ಲಿ ವಾಡಿ ಪುರಸಭೆ ಮುಖ್ಯಾಧಿಕಾರಿ ಫಕ್ರುದ್ದಿನಸಾಬ್, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರ್, ಪಶುಸಂಗೋಪನಾ ಇಲಾಖೆ ಅಧಿಕಾರಿ ಶಂಕರ ಕಣ್ಣಿ, ಅರಣ್ಯ ಇಲಾಖೆ ಅಧಿಕಾರಿ ವಿಜಯಕುಮಾರ ಬಡಿಗೇರ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT