ಭಾನುವಾರ, ಮೇ 22, 2022
22 °C
ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ತನಿಖೆ ನಡೆಸಲು ಖಂಡ್ರೆ ಒತ್ತಾಯ

ಈಶ್ವರಪ್ಪ ಬಂಧಿಸುವವರೆಗೂ ಪಟ್ಟು ಬಿಡುವುದಿಲ್ಲ- ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಕೆ.ಎಸ್‌. ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಪ್ರಕರಣ ದಾಖಲಿಸಬೇಕು ಮತ್ತು ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಪಕ್ಷವು ರಾಜ್ಯದಾದ್ಯಂತ ಹತ್ತು ತಂಡಗಳಲ್ಲಿ ಪ್ರತಿಭಟನೆ ನಡೆಸಲಿದೆ. ಆರೋಪಿಗೆ ಶಿಕ್ಷೆ ಆಗುವವರೆಗೂ ನಾವು ಪಟ್ಟು ಬಿಡುವುದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

‘ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಅವರ ಆತ್ಮಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆ ನಡೆದರೆ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ. ಸದ್ಯ ಈಶ್ವರಪ್ಪ ಅವರು ಒತ್ತಡಕ್ಕೆ ಮಣಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಇದಕ್ಕಷ್ಟೇ ಜನ ಸುಮ್ಮನಾಗಬಾರದು. ಇಂಥ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಹೊರಗಡೆ ಇರುವುದು ಅಪಾಯಕಾರಿ. ಸಾಕ್ಷ್ಯಗಳನ್ನು ನಾಶಮಾಡುವುದು, ದೂರು ನೀಡಿದವರ ಮೇಲೆ ಒತ್ತಡ ಹೇರುವಂಥ ಕೆಲಸ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ 13 ಮತ್ತು 7ಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕು’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ
ಆಗ್ರಹಿಸಿದರು.

‘ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟೀಲ ಸ್ವತಃ ಬಿಜೆಪಿ ಕಾರ್ಯಕರ್ತ. ಕೆ.ಎಸ್‌.ಈಶ್ವರಪ್ಪ ಅವರು ಕಾಮಗಾರಿಯ ಬಿಲ್‌ ಮಂಜೂರಾತಿಗೆ ಶೇ 40ರಷ್ಟು ಲಂಚ ಕೇಳಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಬಿಲ್‌ ಮಾಡಿಸಿಕೊಳ್ಳಲು ಅವರು ಉಡುಪಿಗೆ ಹೋಗಿದ್ದರು. ಅದು ಸಾಧ್ಯವಾಗದೇ ಇದ್ದಾಗ ಅಸಾಯಕರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಮುಖ್ಯಮಂತ್ರಿ ಅವರಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದಾರೆ. ತಮ್ಮ ಸಾವಿಗೆ ಕೆ.ಎಸ್‌.ಈಶ್ವರಪ್ಪ ಅವರೇ ಕಾರಣ, ಅವರಿಗೆ ಶಿಕ್ಷೆ ಆಗಬೇಕು ಎಂದೂ ತಿಳಿಸಿದ್ದಾರೆ’ ಎಂದು ದೂರಿದರು.

‘ಈಶ್ವರಪ್ಪ ಉದಾಹರಣೆ ಮಾತ್ರ; ಇಡೀ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಮಗಾರಿಗೆ ಟೆಂಡರ್‌ ನೀಡುವಲ್ಲಿ ಭ್ರಷ್ಟಾಚಾರ, ಕಾಮಗಾರಿ ಭೂಮಿ ಪೂಜೆಗೆ ಹೋಗುವುದಕ್ಕೂ ಲಂಚ ಕೊಡಬೇಕು. ಮುಗಿದ ಮೇಲೆ ಬಿಲ್‌ ನೀಡುವುದಕ್ಕೂ ಪರ್ಸಂಟೇಜ್‌ ಕೊಡಬೇಕು. ಗುತ್ತಿಗೆದಾರರೇ ಸ್ವತಃ ಲಂಚ ನೀಡಿದ್ದಾಗಿ ಮುಂದೆ ಬಂದು ಹೇಳಿದ್ದಾರೆ. ಈ ಸರ್ಕಾರಕ್ಕೆ ಯಾವ ನೈತಿಕತೆ ಉಳಿದಿದೆ?’ ಎಂದೂ ಪ್ರಶ್ನಿಸಿದರು.

*

ಕಾಂಗ್ರೆಸ್‌ ಪಾದಯಾತ್ರೆ, ಧರಣಿ

ಸಂತೋಷ್ ಪಾಟೀಲ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ಕೆ.ಎಸ್‌. ಈಶ್ವರಪ‍್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿ ಭಾನುವಾರ ಪಾದಯಾತ್ರೆ ನಡೆಯಿತು. ಕಾಂಗ್ರೆಸ್‌ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಜಗತ್‌ ವೃತ್ತದವರೆಗೆ ನಡೆಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಧಾನ ಕಾರ್ಯದರ್ಶಿ ಗೀತಾ ಛಿದ್ರಿ, ಉಪಾಧ್ಯಕ್ಷರಾದ ಡಾ.ಶರಣಪ್ರಕಾಶ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ,  ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಎಂ.ವೈ.ಪಾಟೀಲ, ಮುಖಂಡರಾದ ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ, ಸುಭಾಷ ರಾಠೋಡ, ಶರಣಪ್ಪ ಮಟ್ಟೂರ, ನೀಲಕಂಠರಾವ ಮೂಲಗೆ, ಡಾ.ಕಿರಣ ದೇಶಮುಖ, ಡಾ.ಭೀಮಾಶಂಕರ ಬಿಲಗುಂದಿ, ವಿಜಯಕುಮಾರ ಜಿ. ರಾಮಕೃಷ್ಣ, ಮಹಿಳಾ ಮುಖಂಡರಾದ ಚಂದ್ರಿಕಾ ಪರಮೇಶ್ವರ, ಲತಾ ಬನ್ಸಿದಾರ ರಾಠೋಡ, ಜಗದೇವಿ ಚವಾಣ, ವಾಣಿಶ್ರೀ ಸಗರಕರ್, ಗೀತಾ ಮುದಗಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು