ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಗ್ರಾಮೀಣ ಕ್ಷೇತ್ರ: ಬೆಳಮಗಿ, ವಿಜಯಕುಮಾರ್ ಮಧ್ಯೆ ಪೈಪೋಟಿ

ಚುನಾವಣೆ: ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿರುಸುಗೊಂಡ ಕಾಂಗ್ರೆಸ್ ಚಟುವಟಿಕೆ
Last Updated 15 ಡಿಸೆಂಬರ್ 2022, 5:24 IST
ಅಕ್ಷರ ಗಾತ್ರ

ಕಲಬುರಗಿ: ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚಿನ ಸ್ಥಾನಗಳನ್ನು ‘ಕೈ’ ವಶ ಮಾಡಿಕೊಳ್ಳಲು ಮುಂದಾಗಿರುವ ಮುಖಂಡರು ಗ್ರಾಮೀಣ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲೆಂದೇ ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರನ್ನು ಪಕ್ಷಕ್ಕೆ ಕರೆತಂದಿದ್ದು ಗುಟ್ಟಾಗಿ ಉಳಿದಿಲ್ಲ. ಇದರಿಂದಾಗಿ ಪಕ್ಷದ ಮತ್ತೊಬ್ಬ ಪ್ರಬಲ ಆಕಾಂಕ್ಷಿ ವಿಜಯಕುಮಾರ್ ಜಿ. ರಾಮಕೃಷ್ಣ ಹಾಗೂ ಬೆಳಮಗಿ ಮಧ್ಯೆ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿಜಯಕುಮಾರ್ ಮತ ಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರೇವು ನಾಯಕ ಬೆಳಮಗಿ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಬೆಳಮಗಿ ಅವರು ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ತವಕದಲ್ಲಿದ್ದಾರೆ. ಹೀಗಾಗಿ, ಹಲವು ತಿಂಗಳ ಪ್ರಯತ್ನದ ಬಳಿಕ ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭ ಹಾಗೂ ಕಲ್ಯಾಣ ಕ್ರಾಂತಿ ಸಮಾವೇಶದ ವೇದಿಕೆಯಲ್ಲಿಯೂ ಮೊದಲನೇ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆ ಮೂಲಕ ಈ ಬಾರಿಯ ಟಿಕೆಟ್ ಅವರಿಗೇ ಸಿಗಬಹುದು ಎಂಬ ನಿರೀಕ್ಷೆಗಳೂ ಅವರ ಬೆಂಬಲಿಗರಲ್ಲಿ ಹೆಚ್ಚಾಗಿವೆ.

‘ಟಿಕೆಟ್‌ ತ್ಯಾಗ’ ಮಾಡಿದರೆ ವಿಜಯಕುಮಾರ್ ರಾಮಕೃಷ್ಣ ಅವರಿಗೆ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗುವುದು ಎಂದು ಮುಖಂಡರು ಭರವಸೆ ನೀಡಿದ್ದಾಗಿ ತಿಳಿದುಬಂದಿದೆ.

ಮತ್ತೊಂದೆಡೆ ಗ್ರಾಮೀಣ ಕ್ಷೇತ್ರದ ಟಿಕೆಟ್ ಬಯಸಿ ಮಾಜಿ ಸಚಿವ ಬಾಬುರಾವ ಚವ್ಹಾಣ, ಮುಖಂಡರಾದ ಶಾಮ ನಾಟೀಕರ್, ರವಿ ಚವ್ಹಾಣ ಸಹ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನಷ್ಟೇ ತೆಗೆದುಕೊಳ್ಳಬೇಕಿದೆ.

ಪಕ್ಷದಲ್ಲಿನ ಹಿರಿತನಕ್ಕಿಂತ ಕಾಂಗ್ರೆಸ್ ಈ ಬಾರಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಅದರ ಭಾಗವಾಗಿಯೇ ರೇವು ನಾಯಕ ಬೆಳಮಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಟಿಕೆಟ್ ನೀಡುವ ಭರವಸೆಯನ್ನೂ ನೀಡಲಾಗಿದೆ. ಅದಕ್ಕಾಗಿಯೇ ಕ್ಷೇತ್ರದಲ್ಲಿ ಬೆಳಮಗಿ ಸಕ್ರಿಯವಾಗಿ ಸಂಚರಿಸುತ್ತಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದರು.

ಲಿಂಗಾಯತ, ಪರಿಶಿಷ್ಟರು ನಿರ್ಣಾಯಕ

ಕಲಬುರಗಿ ಗ್ರಾಮೀಣ ಕ್ಷೇತ್ರವು ಪರಿಶಿಷ್ಟ ಮೀಸಲು ಕ್ಷೇತ್ರವಾಗಿದ್ದರೂ ವೀರಶೈವ–ಲಿಂಗಾಯತ ಸಮುದಾಯದ ಮತಗಳು ಇಲ್ಲಿ
ನಿರ್ಣಾಯಕವಾಗಿವೆ.

2.58 ಲಕ್ಷ ಮತದಾರರ ಪೈಕಿ ಸುಮಾರು 85 ಸಾವಿರ ಲಿಂಗಾಯತ ಮತದಾರರಿದ್ದಾರೆ. ಪರಿಶಿಷ್ಟ ಬಲಗೈ ಪಂಗಡದ 45 ಸಾವಿರ ಮತದಾರರು, ಬಂಜಾರ ಸಮುದಾಯದ 18 ಸಾವಿರ, ಮುಸ್ಲಿಮರು 18 ಸಾವಿರ, 20 ಸಾವಿರ ಕುರುಬರು, 20 ಸಾವಿರ ಕೋಲಿ ಸಮಾಜದವರು, ಮಾದಿಗ, ಭೋವಿ ಸಮುದಾಯದ ಸುಮಾರು 12 ಸಾವಿರ ಮತದಾರರಿದ್ದಾರೆ.

ಬಸವರಾಜ ಮತ್ತಿಮಡು ಅವರ ಸಮುದಾಯವಾದ ಸಮಗಾರ ಹರಳಯ್ಯ ಸಮಾಜದ ಮತಗಳು ಅತ್ಯಂತ ಕಡಿಮೆ ಇದ್ದು, ಬಿಜೆಪಿಯ ಸಂಘಟನಾ ಬಲ ಹಾಗೂ ಲಿಂಗಾಯತ ಸಮುದಾಯ ಆ ಪಕ್ಷದೊಂದಿಗೆ ನಿಂತಿದ್ದರಿಂದ ಆಯ್ಕೆಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಗೆ ಹಿನ್ನಡೆಯಾಗಲಿದೆಯೇ ಬಿರಾದಾರ ಉಚ್ಚಾಟನೆ?
ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ದೀಕ್ಷ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಕಮಲಾಪುರದ ಬಿಜೆಪಿ ಮುಖಂಡ ರವಿ ಬಿರಾದಾರ ಅವರನ್ನು ಉಚ್ಚಾಟನೆ ಮಾಡಿರುವ ವರಿಷ್ಠರ ನಿರ್ಧಾರ ಬಿಜೆಪಿಗೆ ಹಿನ್ನಡೆಯಾಗಲಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.

ಶಾಸಕ ಬಸವರಾಜ ಮತ್ತಿಮಡು ಹಾಗೂ ರವಿ ಬಿರಾದಾರ ಅವರೊಂದಿಗಿನ ಭಿನ್ನಮತ ಒಂದು ವರ್ಷದಿಂದಲೂ ಇತ್ತು. ಮತ್ತಿಮಡು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ರವಿ ಬಿರಾದಾರ ಭಾಗವಹಿಸುತ್ತಿರಲಿಲ್ಲ. ರವಿ ಬಿರಾದಾರ ಜನ್ಮದಿನ ಕಾರ್ಯಕ್ರಮದಲ್ಲಿ ಮತ್ತಿಮಡು ಭಾಗವಹಿಸಿರಲಿಲ್ಲ. ಅಲ್ಲದೇ, ಅದರಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯರೊಬ್ಬರಿಗೆ ಹೋಗದಂತೆ ಶಾಸಕರು ತಡೆಯಲು ಯತ್ನಿಸಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ತಮ್ಮ ಬಗ್ಗೆ ಅವಹೇಳನಕಾರಿಯಾಗಿ ರವಿ ಬಿರಾದಾರ ಮಾತನಾಡಿದ್ದಾರೆ ಎಂದು ಮತ್ತಿಮಡು ಅವರು ಪಕ್ಷದ ಹೈಕಮಾಂಡ್‌ಗೆ ದೂರು ನೀಡಿ ಉಚ್ಚಾಟನೆ ಆದೇಶ ಹೊರಬೀಳುವಂತೆ ನೋಡಿಕೊಂಡಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಒಂದೊಮ್ಮೆ ರವಿ ಬಿರಾದಾರ ಅವರ ಬೆನ್ನಿಗೆ ಲಿಂಗಾಯತ ಸಮುದಾಯ ಅಚಲವಾಗಿ ನಿಂತರೆ ಚುನಾವಣೆ ಎದುರಿಸುವುದು ಪಕ್ಷದ ವರಿಷ್ಠರಿಗೆ ತಲೆನೋವಾಗಲಿದೆ. ಹೀಗಾಗಿ, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಬಿಜೆಪಿಯು ಲಿಂಗಾಯತ ಸಮುದಾಯದ ಮುಖಂಡರಿಗೆ ಶಾಸಕರ ಪರವಾಗಿ ಹೇಳಿಕೆ ಕೊಡಿಸುತ್ತಿದೆ.

ರೇವು ನಾಯಕ ಬೆಳಮಗಿ ಅವರು ಬೇಷರತ್ ಆಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಸಂಘಟನೆಗೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ.

ಈಶ್ವರ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ

ಹೈಕಮಾಂಡ್‌ ಮೇಲೆ ವಿಶ್ವಾಸ ಇದೆ. ಕಳೆದ ಬಾರಿ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾನು ಕಡಿಮೆ ಅಂತರದಿಂದ ಸೋತಿದ್ದೇನೆ. ಸಾಮಾಜಿಕ ನ್ಯಾಯಕ್ಕೆ ಬೆಲೆ ನೀಡಿ ಈಗಲೂ ನನಗೆ ಟಿಕೆಟ್‌ ನೀಡುತ್ತಾರೆ ಎಂಬ ಭರವಸೆ ಇದೆ.

ವಿಜಯಕುಮಾರ್ ಜಿ.ರಾಮಕೃಷ್ಣ

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT