ಗುರುವಾರ , ಮೇ 6, 2021
31 °C

ಕಲಬುರ್ಗಿಯಲ್ಲಿ ಜ್ಯುವೆಲ್ಲರಿ ಪಾರ್ಕ್‌ ನಿರ್ಮಾಣ: ಉಸ್ತುವಾರಿ ಸಚಿವ ಮುರುಗೇಶ್ ಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಬುರ್ಗಿಯಲ್ಲಿ ಆಭರಣ ತಯಾರಿಕೆ ಘಟಕ (ಜ್ಯುವೆಲ್ಲರಿ ಪಾರ್ಕ್‌) ಆರಂಭಿಸಲು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ನಿರ್ಧರಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬೆನ್ನಲ್ಲೇ ನಿರಾಣಿ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಬೀದರ್ ಅಥವಾ ಕಲಬುರ್ಗಿಯಲ್ಲಿ ಜ್ಯುವೆಲ್ಲರಿ ಪಾರ್ಕ್‌ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ಈ ಹಿಂದೆ ಹೇಳಿದ್ದರು.

ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಉದ್ದೇಶದಿಂದ ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 50ರಿಂದ 75 ಎಕರೆ ಜಮೀನಿನಲ್ಲಿ ಜ್ಯುವೆಲರಿ ಪಾರ್ಕ್ ನಿರ್ಮಿಸಲು ಅವರು ಮುಂದಾಗಿದ್ದಾರೆ.

ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಈ ಪಾರ್ಕ್ ಆರಂಭವಾಗಲಿದ್ದು, ಅಭರಣಗಳ‌ ತಯಾರಿಕೆ, ಗ್ರಾಹಕರು ಒಂದೇ ಸೂರಿನಡಿ ಖರೀದಿಗೆ ಅವಕಾಶ ಮಾಡಿಕೊಡುವ ಜೊತೆಗೆ, ದೇಶ- ವಿದೇಶಕ್ಕೆ ಇಲ್ಲಿಂದಲೇ ಪೂರೈಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂದುಳಿದ ಕಲ್ಯಾಣ ಕನಾ೯ಟಕದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುವ ಸಂವಿಧಾನದ 371ನೇ (ಜೆ)ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ಅವಕಾಶ ಆಗಲಿದೆ ಎಂದೂ ಅವರು ಹೇಳಿದ್ದಾರೆ.

ತಮ್ಮ ಮೇಲೆ ವಿಶ್ವಾಸವಿಟ್ಡು ಕಲಬುರ್ಗಿ ಜಿಲ್ಲೆಯ ‌ಉಸ್ತುವಾರಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಪಕ್ಷದ ಪ್ರಮುಖ ನಾಯಕರಿಗೆ ನಿರಾಣಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಭಾಗದ ಶಾಸಕರು, ಸಂಸದರು ಸೇರಿದಂತೆ ಪಕ್ಷಾತೀತವಾಗಿ‌ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ‌ಅಭಿವೃದ್ದಿಗೆ ಶ್ರಮಿಸುತ್ತೇನೆ. ಶೀಘ್ರದಲ್ಲಿ ಜಿಲ್ಲೆಯ ಅಧಿಕಾರಿಗಳ ಸಭೆ ಕರೆದು ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ನಿರಾಣಿ ಹೇಳಿದ್ದಾರೆ.

‘ಇಂಥದ್ದೇ ಜಿಲ್ಲೆಯ ಉಸ್ತುವಾರಿ ಕೊಡಬೇಕೆಂದು ಮುಖ್ಯಮಂತ್ರಿ ಬಳಿ ಬೇಡಿಕೆ ಇಟ್ಡಿರಲಿಲ್ಲ. ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಾಗ ಹಾಗೂ ಖಾತೆ ಹಂಚಿಕೆ ಮಾಡವಾಗಲೂ ಯಾವುದೇ ರೀತಿಯ ಒತ್ತಡ ಹಾಕಿರಲಿಲ್ಲ. ಮೊದಲಿನಿಂದಲೂ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ’ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು