ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಲಾಕ್‌ಡೌನ್‌ ಪರಿಣಾಮದಿಂದ ಸಂಕಷ್ಟದಲ್ಲಿ ಹಮಾಲಿಗಳು

Last Updated 1 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕಲಬುರ್ಗಿ: ‘ದಿನಪೂರ್ತಿ ಮೂಟೆಗಳನ್ನು ಹೊತ್ತು ದುಡಿದು ಒಂದಿಷ್ಟು ಕೂಲಿ ಗಳಿಸಿದರೆ ಮಾತ್ರ ನಮಗೆ ರಾತ್ರಿ ಊಟ. ಇಲ್ಲದಿದ್ದರೆ, ಖಾಲಿ ಹೊಟ್ಟೆಯಲ್ಲಿ ಮಲಗಬೇಕು. ಕಳೆದೊಂದು ವಾರದಿಂದ ನಾವು ಅತಂತ್ರರಾಗಿದ್ದೇವೆ. ಲಾಕ್‌ಡೌನ್‌ ನಮ್ಮನ್ನು ಇನ್ನಷ್ಟು ಹಣ್ಣಾಗಿಸಿದೆ’.

ಹೀಗೆ ನೋವು ಹೇಳಿಕೊಂಡವರು ಉಸ್ಮಾನ್‌ಸಾಬ್. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವ
ರಣದಲ್ಲಿ ಮೂಟೆಗಳನ್ನು ಹೊರುವ ದಿನಗೂಲಿ ಹಮಾಲಿ ಕಾರ್ಮಿಕರಾದ ಅವರಿಗೆ ಸಂಜೆ ವೇಳೆ ದುಡಿಮೆ ರೂಪದಲ್ಲಿ ಒಂದಿಷ್ಟು ಹಣ ಬಂದರೆ ಕೊಂಚ ನಗುಮೊಗದಲ್ಲಿ ಮನೆಗೆ ಹೋಗುತ್ತಾರೆ. ಇಲ್ಲವಾದರೆ, ನಿರಾಸೆ ಆವರಿಸಿರುತ್ತದೆ.

ಹೀಗೆ ಅವರೊಬ್ಬರೇ ಅಲ್ಲ, ಎಪಿಎಂಸಿ ಆವರಣದಲ್ಲಿ ದುಡಿಯುವ ಸಾವಿರಕ್ಕೂ ಹೆಚ್ಚು ಕಾರ್ಮಿಕರದ್ದು ಇಂಥದ್ದೇ ಸ್ಥಿತಿಯಿದೆ. ಆಯಾ ದಿನದ ದುಡಿಮೆಯನ್ನೇ ನಂಬಿ ಅವರು ಬದುಕುತ್ತಾರೆ. ಆದರೆ, ‘ಲಾಕ್‌ಡೌನ್‌’ ಜಾರಿಯಾದಾಗಿನಿಂದ ಅವರು ಮತ್ತು ಕುಟುಂಬ ಸದಸ್ಯರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ದಿಕ್ಕುಗಾಣದ ಸ್ಥಿತಿಯಲ್ಲಿದ್ದಾರೆ.

‘ಲಾಕ್‌ಡೌನ್‌ ನಡುವೆಯೂ ಎರಡು ದಿನದಿಂದ ಎಪಿಎಂಸಿಯಲ್ಲಿ ವಹಿವಾಟು ನಡೆಯುತ್ತಿದೆ. ಕೆಲ ಅಂಗಡಿಗಳು ತೆರೆದಿದ್ದರೆ, ಕೆಲವು ಮುಚ್ಚಿವೆ. ಅಂಗಡಿಗಳು ತೆರೆದಿರುವ ಕಡೆ ನಾವೇ ಹುಡುಕಿ ಹೋಗಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದೇವೆ. ಆದರೆ, ಮತ್ತೆ ಎಪಿಎಂಸಿ ಬಂದ್‌ ಆದಲ್ಲಿ, ತುಂಬಾ ಸಮಸ್ಯೆಯಾಗುತ್ತದೆ’ ಎಂದು ಕಾರ್ಮಿಕ ಹಣಮಂತ ತಿಳಿಸಿದರು.

‘ಎಪಿಎಂಸಿ ಆವರಣದಲ್ಲಿ 1600ಕ್ಕೂ ಹೆಚ್ಚು ಮಂದಿ ಕೂಲಿಕಾರ್ಮಿಕರಿದ್ದು, 300 ಮಂದಿಗೆ ಮಾತ್ರ ಪರವಾನಗಿ ಇದೆ. ಉಳಿದವರಿಗೆ ಯಾವುದೇ ತರಹದ ಸೌಲಭ್ಯಗಳಿಲ್ಲ. ತಾಜಸುಲ್ತಾನಪುರ, ಔರಾದ್, ಚಿಂಚೋಳಿ ಮುಂತಾದ ಕಡೆಯಿಂದ ಕಾರ್ಮಿಕರು ಬರುತ್ತಾರೆ’ ಎಂದು ಹಮಾಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಪ್ಪರಾವ ಪೂಜಾರಿ ತಿಳಿಸಿದರು.

‘ಕೂಲಿಕಾರ್ಮಿಕರು ಅಸಂಘಟಿತರಾಗಿದ್ದು, ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದಾರೆ. ಮೂಟೆಗಳನ್ನು ಹೊರುವುದು ಬಿಟ್ಟರೆ ಬೇರೆ ಕೆಲಸ ಅವರಿಗೆ ಗೊತ್ತಿಲ್ಲ. ಲಾಕ್‌ಡೌನ್‌ ಪರಿಣಾಮದಿಂದ ಜನಜೀವನ ಸಂಪೂರ್ಣ ಸ್ತಬ್ಧವಾಗಿದೆ. ಇನ್ನೂ ಎರಡು ವಾರ ಲಾಕ್‌ಡೌನ್ ಮುಂದುವರೆಯುವ ಕಾರಣ ಅವರ ಪರಿಸ್ಥಿತಿ ಗಂಭೀರವಾಗಲಿದೆ’ ಎಂದು ತಿಳಿಸಿದರು.

‘ಹಮಾಲಿ ಕಾರ್ಮಿಕರಿಗೆ ಕೆಲಸವಿಲ್ಲದ ಕಾರಣ ಅವರ ಬ್ಯಾಂಕ್‌ ಖಾತೆಗೆ ಕೂಡಲೇ ₹ 5 ಸಾವಿರ ಜಮೆ ಮಾಡಬೇಕು. ಅಕ್ಕಿ, ಗೋಧಿ ಅಲ್ಲದೇ ಜೀವನಾವಶ್ಯಕ ಬೆಳೆ, ಎಣ್ಣೆ ಸೇರಿ 16 ಸಾಮಗ್ರಿಗಳನ್ನು ಎರಡು ತಿಂಗಳಿಗೆ ಆಗುವಷ್ಟು ಕೊಡಬೇಕು. ನೀರಿನ ಬಿಲ್, ವಿದ್ಯುತ್ ಬಿಲ್‌, ಮನೆ ಬಾಡಿಗೆ ಸೇರಿ ಸಾಲಗಳ ಕಂತು ತುಂಬುವುದು ಮುಂದೂಡಲು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ’ ಎಂದು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಕೆ.ಮಹಾಂತೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT