ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗಿನಿಂದ ಬರುವವರತ್ತ ಎಚ್ಚರ ವಹಿಸಿ: ಕಲಬುರ್ಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಜಿಲ್ಲೆಯ ಕೋವಿಡ್‌–19 ಸ್ಥಿತಿಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್‌ ಮೋಹನ್
Last Updated 1 ಮೇ 2020, 15:43 IST
ಅಕ್ಷರ ಗಾತ್ರ

ಕಲಬುರ್ಗಿ: ‘ತೆಲಂಗಾಣದಲ್ಲಿ ಸಿಕ್ಕಿಕೊಂಡಿದ್ದ ಜಿಲ್ಲೆಯ ವಲಸೆ ಕಾರ್ಮಿಕರಿಗೆ ಅಲ್ಲಿನ ಸರ್ಕಾರ ಪಾಸ್‌ ಕೊಟ್ಟು ವಾಪಸ್‌ ಕಳುಹಿಸುತ್ತಿದೆ. ಇವರೆಲ್ಲರನ್ನೂ ಗಡಿಯಲ್ಲೇ ಅತ್ಯಂತ ಎಚ್ಚರಿಕೆಯಿಂದ ತಪಾಸಣೆ ಮಾಡಿಸಿ, ಜಿಲ್ಲೆಯೊಳಗೆ ಕರೆದುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್‌ ಮೋಹನ್ ಸೂಚಿಸಿದರು.

ಕೋವಿಡ್‌–19 ಸ್ಥಿತಿಗತಿ ಹಾಗೂ ಲಾಕ್‌ಡೌನ್‌ ಪರಿಸ್ಥಿತಿಯ ಬಗ್ಗೆ ಶುಕ್ರವಾರ ಇಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬರುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಗಡಿಗಳಲ್ಲಿ ತಪಾಸಣಾ ಶಿಬಿರ ತೆರೆದು, ಜ್ವರ ಸೇರಿದಂತೆ ಸೋಂಕಿನ ಲಕ್ಷಣಗಳ ಕುರಿತು ಪರೀಕ್ಷಿಸಬೇಕು. ಬಳಿಕ ಅವರನ್ನು 28 ದಿನಗಳ ಕಾಲ ಕ್ವಾರಾಂಟೈನ್‍ನಲ್ಲಿಟ್ಟು ನಿಗಾವಹಿಸಬೇಕು’ ಎಂದರು.

‘ನೆರೆರಾಜ್ಯ ಮತ್ತು ವಿವಿಧ ಜಿಲ್ಲೆಗಳಿಂದ ಜಿಲ್ಲೆಗೆ ಬಂದಿರುವ ಜನರನ್ನು ಹೋಂ ಕ್ವಾರಾಂಟೈನ್‍ನಲ್ಲಿ ಇಡಲಾಗಿತ್ತು. ಹೊರಗಡೆಯಿಂದ ಬಂದ 5 ಸಾವಿರ ಮಂದಿಗೆ ಅಜೀಂ ಪ್ರೇಮ್‍ಜಿ ಫೌಂಡೇಷನ್ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪಿ. ರಾಜಾ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್‌ ಮೋಹನ್‌, ‘ಜಿಲ್ಲಾಡಳಿತದ ವತಿಯಿಂದ ಕೂಡ ಇಂತಹ ಜನರಿಗೆ ತಾಲ್ಲೂಕುವಾರು ತಲಾ 5 ಕೆ.ಜಿ.ಯ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ನೀಡಲು ಕ್ರಮವಹಿಸಬೇಕು’ ಎಂದು ಸೂಚಿಸಿದರು.

‘ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಸಹಾಯಕ ಸಿಬ್ಬಂದಿ, ನರ್ಸ್ ಹಾಗೂ ದಾಖಲಾಗಿರುವ ರೋಗಿಗಳಿಗೆ ಮುಂತಾದವರಿಗೆ ಪೌಷ್ಟಿಕ ಆಹಾರ ನೀಡಬೇಕು. ಊಟ ಮತ್ತು ಉಪಾಹಾರದ ವಿವರಗಳನ್ನು ಪ್ರತಿದಿನ ಬೋರ್ಡ್ ಮೇಲೆ ಪ್ರದರ್ಶಿಸಬೇಕು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ. ಜಬ್ಬಾರ್, ‘ಈಗಾಗಲೇ ಗುಣಮಟ್ಟದ ಆಹಾರ ನೀಡುವುದಕ್ಕೆ ಕ್ರಮಕೈಗೊಳ್ಳಲಾಗಿದೆ. ಸ್ವತಃ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದ್ದಾರೆ' ಎಂದು ವಿವರಿಸಿದರು.

ಮನೆ ಸರ್ವೆ: ‘ನಗರದಲ್ಲಿ ಗುರುವಾರ (ಏ. 30)ದಿಂದ ಮನೆಗಳ ಕೋವಿಡ್ ಆರೋಗ್ಯ ಸರ್ವೆ ಆರಂಭಿಸಲಾಗಿದೆ.ಶ್ವಾಸಕೋಶ ತೊಂದರೆ, ಉಬ್ಬಸ– ಎಸ್‍ಎಆರ್‌ಐ, ಜ್ವರ, ಕೆಮ್ಮು, ನೆಗಡಿ-ಐಎಲ್‍ಐ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಿಡ್ನಿ– ಕೊಮೊರ್ಬಿಡಿಟಿ ಮುಂತಾದ ಸಮಸ್ಯೆ ಇರುವ ರೋಗಿಗಳ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್‌ ಡಾ.ಎ.ಎಸ್‌. ರುದ್ರವಾಡಿ ಮಾಹಿತಿ ನೀಡಿದರು.

ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ, ಐಎಎಸ್ ಪ್ರೊಬೇಷನರಿ ಅಧಿಕಾರಿ ಗೋಪಾಲ ಕೃಷ್ಣ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

‌‌ಕಂಟೇನ್ಮೆಂಟ್‌ ವಲಯಗಳಿಗೆ ಭೇಟಿ

ಕೊರೊನಾ ಕಂಟೇನ್ಮೆಂಟ್ ಝೋನ್‍ಗಳಿಗೆ ಕಪಿಲ್ ಮೋಹನ್ ಅವರು ಭೇಟಿ ನೀಡಿ, ಸ್ಥಳೀಯ ಜನತೆಯ ಯೋಗಕ್ಷೇಮ ವಿಚಾರಿಸಿದರು.

ಮೋಮಿನ್‍ಪುರ ಸ್ಥಳೀಯ ಜನರೊಂದಿಗೆ ಮಾತನಾಡಿದ ಅವರು, ‘ಕೊರೊನಾ ವೈರಸ್ ಕುರಿತು ಆತಂಕಕ್ಕೆ ಒಳಗಾಗಬಾರದು. ಯಾವುದೇ ಊಹಾಪೋಹಗಳಿಗೆ ಆಸ್ಪದ ಕೊಡಬಾರದು. ಆದರೆ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ನಿವಾಸಿಗಳಿಗೆ ತಿಳಿಹೇಳಿದರು.

‘ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಆರೋಗ್ಯದ ದೃಷ್ಟಿಯಿಂದ ಕ್ವಾರಂಟೈನ್ ಮಾಡಲಾಗುತ್ತದೆ. ಇದಕ್ಕೆ ಯಾರೂ ಹೆದರಬಾರದು. ನಿಮ್ಮೆಲರ ಸಹಕಾರ ಅಗತ್ಯವಿದೆ. ಕ್ವಾರಾಂಟೈನಲ್ಲಿರುವವರ ಆರೋಗ್ಯಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಂಡಿದೆ’ ಎಂದು ಹೇಳಿದರು.

ಮನೆಯ ಊಟ ಕೊಡಬಹುದು

‘ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್–19 ಸೋಂಕಿತರಿಗೆ ಮನೆಯಿಂದ ಊಟ– ಉಪಾಹಾರ ನೀಡಬಹುದು’ ಎಂದು ಕಪಿಲ್‌ ಮೋಹನ್‌ ತಿಳಿಸಿದರು.

‘ಇದಕ್ಕಾಗಿ ಸುರಕ್ಷಿತ ಮಾರ್ಗ ಮಾಡಲಾಗಿದ್ದು, ಜಿಮ್ಸ್‌ ಹಾಗೂ ಇಎಸ್‌ಐಸಿ ಆಸ್ಪತ್ರೆಯ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಸೋಂಕಿತರಿಗೆ ಮನೆಯ ಆಹಾರ ನೀಡಲು ಅವಕಾಶ ಮಾಡಲಾಗಿದೆ’ ಎಂದು ನಾಗರಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.‌

ಶಾಸಕಿ ಖನೀಜ್ ಫಾತಿಮಾ, ಪೊಲೀಸ್ ಆಯುಕ್ತ ಸತೀಶ್‌ಕುಮಾರ್, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಸಿಪಿ ಕಿಶೋರ್‌ಬಾಬು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸೇರಿ ‘ಸುರಕ್ಷಿತ ಅಂತರ’ ಕಾಯ್ದುಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ಅವರು ಪ್ರಾತ್ಯಕ್ಷಿಕೆ ನೀಡಿದರು.‌

ಆಸ್ಪತ್ರೆಗೆ ನುಗ್ಗಿದವರ ಬಂಧನಕ್ಕೆ ತಾಕೀತು

‘ಇಲ್ಲಿನಜಿಮ್ಸ್ ಆಸ್ಪತ್ರೆಯಲ್ಲಿರುವ ಕೋವಿಡ್‌–19 ಸೋಂಕಿತರ ವಾರ್ಡ್, ಐಸೋಲೇಷನ್ ವಾರ್ಡ್, ಕ್ವಾರಂಟೈನ್ ಕೇಂದ್ರಗಳಿಗೆ ಹೊರಗಿನ ವ್ಯಕ್ತಿಗಳು ಹೋಗಿ, ವಿಡಿಯೊ ಮಾಡುವುದು, ಫೋಟೊ ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅಂಥವರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಿ ಕ್ವಾರಾಂಟೈನ್ ಮಾಡಬೇಕು. ಜೊತೆಗೆ ಅವರ ವಿರುದ್ಧ ರಾಷ್ಟ್ರೀಯ ವಿಕೋಪ ನಿರ್ವಹಣೆ (ಎನ್‍ಡಿಎಂ) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ಕಪಿಲ್‌ ಮೋಹನ್‌ ಖಡಕ್‌ ನಿರ್ದೇಶನ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸತೀಶ್‌ಕುಮಾರ್, ‘ಈಗಾಗಲೇ ವ್ಯಕ್ತಿಯೊಬ್ಬರ ಮಾಹಿತಿ ಪಡೆದಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಅಕ್ರಮವಾಗಿ ಪ್ರವೇಶಿಸಿದವರ ಬಗ್ಗೆ ಆಸ್ಪತ್ರೆ ನಿರ್ದೇಶಕರು ಮಾಹಿತಿ ನೀಡಿದಲ್ಲಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಜಿಮ್ಸ್ ಮತ್ತು ಇಎಸ್‍ಐಸಿ ಆಸ್ಪತ್ರೆಯ ಪ್ರವೇಶದ್ವಾರದ ಬಳಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಆಸ್ಪತ್ರೆಯೊಳಗೆ ಬರುವವರ ಮತ್ತು ಹೋಗುವವರ ಮೊಬೈಲ್ ನಂಬರ್ ಸಹಿತ ಸಂಪೂರ್ಣ ಮಾಹಿತಿ ದಾಖಲಿಸಿಕೊಳ್ಳಬೇಕು’ ಎಂದೂಸೂಚಿಸಿದರು.

ಅಂಕಿ ಅಂಶ

19,540: ನಗರದಲ್ಲಿ ಸರ್ವೆ ಮಾಡಿದ ಮನೆಗಳ ಸಂಖ್ಯೆ

6,03,251:‌ನಗರದಲ್ಲಿ ಇರುವ ಒಟ್ಟು ಜನಸಂಖ್ಯೆ

1,50,000: ಈವರೆಗೆ ತಪಾಸಣೆ ಮಾಡಲಾದ ಜನರ ಸಂಖ್ಯೆ‌

981: ಈವರೆಗೆ ಗುರುತಿಸಿದ ಉಸಿರಾಟದ ತೊಂದರೆ ಇರುವವರು

247: ಜಿಲ್ಲೆಯಲ್ಲಿರುವ ಹೊರರಾಜ್ಯದ ವಲಸೆ ಕಾರ್ಮಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT