ಗುರುವಾರ , ಮಾರ್ಚ್ 23, 2023
28 °C
ರಾಜ್ಯದಲ್ಲೇ ಮೊದಲ ಬಾರಿಗೆ ಆನ್‌ಲೈನ್‌ ಪರೀಕ್ಷೆ ನಡೆಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯ

ಕಲಬುರ್ಗಿ: ಶೇ 75ರಷ್ಟು ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಿಯುಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಆಗಸ್ಟ್‌ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆಗಳನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ನಡೆಸಿದ್ದ ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಶೇ 75ರಷ್ಟು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು, ಉಳಿದವರ ಫಲಿತಾಂಶ ಶೀಘ್ರ ಪ್ರಕಟವಾಗಲಿದೆ.

ಕೋವಿಡ್ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಲು ಶುರುಮಾಡಿದ್ದರಿಂದ ಮಾರ್ಚ್‌ ತಿಂಗಳಲ್ಲಿನ ವಿ.ವಿ.ಯ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಕಳಿಸಲಾಗಿತ್ತು. ಆನ್‌ಲೈನ್‌ ಮೂಲಕ ಪಠ್ಯಕ್ರಮವನ್ನು ಮುಗಿಸಲಾಗಿತ್ತು. ಅಂತಿಮ ವರ್ಷದ ಪರೀಕ್ಷೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸೂಚನೆ ಮೇರೆಗೆ ಆನ್‌ಲೈನ್‌ ಮೂಲಕವೇ ನಡೆಸಲಾಗಿದ್ದು, ವಿ.ವಿ. ಕ್ಯಾಂಪಸ್‌ನಲ್ಲಿರುವ 1900 ವಿದ್ಯಾರ್ಥಿಗಳ ಪೈಕಿ ವಿವಿಧ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ 650 ವಿದ್ಯಾರ್ಥಿಗಳು (ಪದವಿಯ 6ನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್) ಗೂಗಲ್ ಕ್ಲಾಸ್ ಹಾಗೂ ವಾಟ್ಸ್ ಆ್ಯಪ್ ಗ್ರೂಪ್ ಸೇರಿದಂತೆ ಇತರೆ ಅಪ್ಲಿಕೇಶನ್‌ಗಳ ಮೂಲಕ ಪರೀಕ್ಷೆ ಬರೆದಿದ್ದರು.

ಈ ಕುರಿತು ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ, ಪ್ರಾಧ್ಯಾಪಕರು ಆನ್‌ಲೈನ್‌ ಮೂಲಕವೇ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ. ಎಲ್ಲ ಪತ್ರಿಕೆಗಳನ್ನು ಸಂರಕ್ಷಿಸಿ ಇಡಲಾಗುವುದು. ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಕಲು ಮಾಡಿದ್ದನ್ನು ಪತ್ತೆ ಹಚ್ಚಲು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಮೂಲಕ ನಿಗಾ ಇರಿಸಲಾಗಿತ್ತು ಎಂದರು.

ಕೆಲವು ವಿಭಾಗಗಳ ಶೇ 100ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಯಾರಿಗೆ ಆನ್‌ಲೈನ್ ಮೂಲಕ ಪರೀಕ್ಷೆ ಬರೆಯುವುದು ಸಾಧ್ಯವಾಗಿಲ್ಲವೇ ಅವರಿಗೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಆಫ್‌ಲೈನ್ ಮೂಲಕ ಬರೆಯಲು ಅವಕಾಶ ನೀಡಲಾಗುವುದು. ಶೀಘ್ರವೇ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಕನ್ನಡ, ಹಿಂದಿ, ಇಂಗ್ಲಿಷ್, ಭಾಷಾವಿಜ್ಞಾನ, ಸಮಾಜ ಕಾರ್ಯ, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ಕೋರ್ಸ್‌ನ ಫಲಿತಾಂಶವನ್ನು ಶೀಘ್ರ ಪ್ರಕಟಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು