ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೈನುಗಾರರ ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹ: ಬಿಜೆಪಿ ಮುಖಂಡರ ಪ್ರತಿಭಟನೆ

Published 6 ಫೆಬ್ರುವರಿ 2024, 16:18 IST
Last Updated 6 ಫೆಬ್ರುವರಿ 2024, 16:18 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹೈನುಗಾರರ ₹ 716 ಕೋಟಿ ಪ್ರೋತ್ಸಾಹಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಮುಖಂಡರು, ಪ್ರತಿಭಟನಕಾರರು ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಡಿಸಿಎಂ ವಿರುದ್ಧ ಘೋಷಣೆ ಕೂಗಿದರು. ‘ರೈತರಿಗೆ ಬರೆಹಾಕಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಭ್ರಷ್ಟ ಕಾಂಗ್ರೆಸ್ ಸರ್ಕಾರ’, ‘₹7 ಹೆಚ್ಚಿಸುವ ಕೊಟ್ಟ ಮಾತು ಈಡೇರಿಕೆ ಯಾವಾಗ? ಲೂಟಿಕೋರ ಸರ್ಕಾರ’, ‘ಅನ್ನದಾತರಿಗೆ ಟೋಪಿ ಹಾಕಿದ ರೈತ ವಿರೋಧಿ ಸರ್ಕಾರ’, ‘ಹಾಲು ಉತ್ಪಾದಕರಿಗೆ ವಂಚಿಸಿ ನಂದಿನಿಯನ್ನು ಮುಳುಗಿಸುತ್ತಿರುವ ಸರ್ಕಾರ’ ಎಂಬ ನಾಮಫಲಕಗಳನ್ನು ಹಿಡಿದು ಆಕ್ರೋಶ ಹೊರಹಾಕಿದರು.

ಬರ ಸಂಕಷ್ಟದಲ್ಲಿ ರೈತರ ಬದುಕಿನ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ, ಹೈನುಗಾರರ ₹716 ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ದೇಶದ ವಿಭಜನೆಯ ಮಾತುಗಳನ್ನು ಆಡುವ ಸರ್ಕಾರದಿಂದ ಅಭಿವೃದ್ಧಿಯ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಭ್ರಷ್ಟ ಮತ್ತು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.

ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜನರಿಗೆ ತೊಂದರೆ ಕೊಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಎರಡ್ಮೂರು ತಿಂಗಳ ಹಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿ ಬೆಳೆ ಹಾನಿ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ನೀರಾವರಿ ಕಾಲುವೆಗಳಿಗೆ ತಡವಾಗಿ ನೀರು ಹರಿಸಿದ್ದರಿಂದ ಬಹಳಷ್ಟು ಬೆಳೆಗಳು ಒಣಗಿದವು. ಈಗ ಬರಗಾಲದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹೈನುಗಾರರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡದೇ ಮೋಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ನ ನಡೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ರೈತರ ಪರವಾದ ಹೋರಾಟ ನಿರಂತರವಾಗಿ ನಡೆಯಲಿದೆ. ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸದೆ ಇದ್ದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ‘ನುಡಿದಂತೆ ನಡೆದಿದ್ದೇವೆ ಎಂದು ಬೊಗಳೆ ಬಿಡುತ್ತಿರುವ ರಾಜ್ಯ ಸರ್ಕಾರ, ಚುನಾವಣೆಗೂ ಮುನ್ನ ಹೈನುಗಾರರ ಪ್ರೋತ್ಸಾಹ ಧನವನ್ನು ₹7ಕ್ಕೆ ಏರಿಸುವ ಭರವಸೆ ಕೊಟ್ಟಿತ್ತು. ಈಗ ಪ್ರೋತ್ಸಾಹಧನವನ್ನು ₹5ಕ್ಕೆ ಇಳಿಸಿ, ₹716 ಕೋಟಿ ಸಬ್ಸಿಡಿ ಬಾಕಿ ಉಳಿಸಿಕೊಂಡಿದೆ. ಇದು ರೈತ ವಿರೋಧಿ ಧೋರಣೆಯಾಗಿದೆ’ ಎಂದರು.

ಪ್ರತಿಭಟನೆಯಲ್ಲಿ ಉಪಮೇಯರ್ ಶಿವಾನಂದ ಪಿಸ್ತಿ, ಮುಖಂಡರಾದ ಉಮೇಶ ಪಾಟೀಲ, ಶಿವಯೋಗಿ ನಾಗನಳ್ಳಿ, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT