ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಅನುದಾನವಿಲ್ಲದೆ ಹಾಳಾಗುತ್ತಿರುವ ನೀರಿನ ಘಟಕಗಳು

40 ಘಟಕಗಳ ದುರಸ್ತಿಗೆ ಇಲ್ಲ ಅನುದಾನ
Published : 24 ಸೆಪ್ಟೆಂಬರ್ 2024, 4:55 IST
Last Updated : 24 ಸೆಪ್ಟೆಂಬರ್ 2024, 4:55 IST
ಫಾಲೋ ಮಾಡಿ
Comments

ಅಫಜಲಪುರ: ತಾಲ್ಲೂಕಿನ ಸುಮಾರು ಹತ್ತು ವರ್ಷಗಳ ಹಿಂದೆ ವಿವಿಧ ಗ್ರಾಮಗಳಲ್ಲಿ ತಲಾ ₹10 ಲಕ್ಷ ವೆಚ್ಚದಲ್ಲಿ ಸ್ಥಾಪನೆ ಮಾಡಿರುವ 65 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೇವಲ 25 ಘಟಕಗಳು ಮಾತ್ರ ಚಾಲ್ತಿಯಲ್ಲಿದ್ದು, 40 ಘಟಕಗಳು ಕೆಟ್ಟು ನಿಂತಿವೆ.

‘ಈ ಬಗ್ಗೆ ಹಲವಾರು ಬಾರಿ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೈದರಾಬಾದ್ ಮೂಲದ ಏಜೆನ್ಸಿಯವರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲು ಟೆಂಡರ್ ನೀಡಲಾಗಿತ್ತು. ಅವರು ಅರೆಬರೆ ಕೆಲಸ ಮಾಡಿ ಬಿಲ್ ಪಡೆದು ಹೋಗಿದ್ದಾರೆ. ಹೀಗಾಗಿ ಅವುಗಳನ್ನ ದುರಸ್ತಿ ಮಾಡಲು ಮಾಡಲು ಪುನಃ ಟೆಂಡರ್ ಕರೆದು ಕೆಲಸ ಪೂರ್ತಿ ಮಾಡಬೇಕಾಗಿದೆ. ಮೇಲಿಂದ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಂಜಿನಿಯರ್‌ಗಳು ವರ್ಗಾವಣೆ ಆಗುತ್ತಿರುವುದರಿಂದ ನಿಗದಿತ ಅವಧಿಯಲ್ಲಿ ಕಾರ್ಯಗಳು ಆಗುತ್ತಿಲ್ಲ. ಆದರೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ ದುರಸ್ತಿಗೆ ಅನುದಾನ ಇಲ್ಲ’ ಎಂದು ಹೇಳುತ್ತಾರೆ.

‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ವಿಭಾಗದ ಎಂಜಿನಿಯರ್‌ಗಳು ದುರಸ್ತಿ ಮಾಡುತ್ತೇವೆ ಎಂದು ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಗಳಲ್ಲಿ ಹೇಳಿ ಪಾರಾಗುತ್ತಾರೆ. ಹೀಗಾಗಿ 10 ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಾಗದೆ ಹಾಳಾಗುತ್ತಿವೆ. ಇನ್ನು ಕೆಲವು ಕಡೆ ಅದರ ಬಿಡಿಭಾಗಗಳು ಕಳುವಾಗಿ ಹೋಗಿವೆ. ಅದನ್ನು ಕೇಳುವವರಿಲ್ಲ. ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮಸ್ಥರು ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿ ಉಪಯೋಗ ಮಾಡಿಕೊಂಡಿದ್ದಾರೆ’ ಎಂದು ಮಾತೋಳಿ, ಬಳ್ಳೂರಗಿ ಹಾಗೂ ಶಿರವಾಳ ಗ್ರಾಮಸ್ಥರು ಹೇಳುತ್ತಾರೆ.

ಮಾಶಾಳ ಗ್ರಾಮ ತಾಲ್ಲೂಕಿನಲ್ಲಿ ದೊಡ್ಡ ಗ್ರಾಮವಾಗಿದ್ದು, ಅದಕ್ಕಾಗಿಯೇ ಆ ಗ್ರಾಮಕ್ಕೆ ತಲಾ ₹19 ಲಕ್ಷದಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ನಿರ್ವಹಣೆ ಇಲ್ಲದೇ ಅವು ಹಾಳಾಗಿ ಹೋಗಿವೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಶುದ್ಧ ನೀರಿನ ಘಟಕಗಳ ಯಂತ್ರಗಳು ಕಳುವಾಗಿವೆ. ಹೀಗಾಗಿ ಅನುದಾನ ಖರ್ಚಾದರೂ ಇಲ್ಲಿಯವರೆಗೆ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಮಾಶಾಳ ಗ್ರಾಮದಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ಪ್ಲೊರೈಡ್ ಅಂಶ ಇರುವದರಿಂದ ಜನರಿಗೆ ಕಿಡ್ನಿ ಸಮಸ್ಯೆ, ಮೊಣಕಾಲು ನೋವು ಸಮಸ್ಯೆ ಬರುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಕುರಿತು ಮಾಶಾಳ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಶಿವು ಪ್ಯಾಟಿ ಮಾಹಿತಿ ನೀಡಿ, ‘ಈ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್ ಅವರನ್ನು ವಿಚಾರಿಸಿದಾಗ ತಾಲ್ಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಗುತ್ತಿಗೆಯನ್ನು ಹೈದರಾಬಾದ್‌ ಮೂಲದ ಕಂಪನಿಗೆ ನೀಡಲಾಗಿತ್ತು. ಅವರು ಅಪೂರ್ಣ ಮಾಡಿ ಹೋಗಿದ್ದಾರೆ. ಇದರ ಬಗ್ಗೆ ಮತ್ತೊಮ್ಮೆ ಟೆಂಡರ್ ಕರೆದು ದುರಸ್ತಿ ಮಾಡಲಾಗುವುದು ಎನ್ನುತ್ತಾರೆ’ ಎಂದು ತಿಳಿಸಿದರು.

ತಾಲ್ಲೂಕಿನ ಬಂದರವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಘಟಕಗಳನ್ನು ಸ್ಥಾಪನೆ ಮಾಡಿದರೂ ಕಳಪೆ ಕಾಮಗಾರಿಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಸರ್ಕಾರ ಈ ಹಿಂದೆ ಕುಡಿಯುವ ನೀರಿಗಾಗಿ ಅನುಷ್ಠಾನ ಮಾಡಿರುವ ಯೋಜನೆಗಳನ್ನು ಪೂರ್ಣಗೊಳಿಸದೇ ಮತ್ತೆ ಜೆಜೆಎಂ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಅದು ಸಹ ಕಳಪೆಯಾಗಿದ್ದರಿಂದ ಜನರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ ಕಳಪೆ ಮಾಡಿದ ಗುತ್ತಿಗೆದಾರರನ್ನು ಕಪ್ಪು ಮಟ್ಟಿಗೆ ಸೇರಿಸಿ ದುರಸ್ತಿ ಮಾಡಲು ಸರ್ಕಾರ ತಕ್ಷಣ ಅನುದಾನ ನೀಡಬೇಕು.
ನಿತಿನ್ ಗುತ್ತೇದಾರ್ ಜಿ.ಪಂ ಮಾಜಿ ಅಧ್ಯಕ್ಷ
ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ವಿಫಲವಾಗಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಕಾರಣ. ಅಧಿಕಾರಿಗಳು ಮುಂದೆ ನಿಂತು ಗುತ್ತಿಗೆದಾರರಿಂದ ಕೆಲಸ ಮಾಡಿಕೊಳ್ಳಬೇಕು
ಶಿವು ಪ್ಯಾಟಿ ಮಾಶಾಳ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT