ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ಕೃತಿಗಳ ಡಿಜಿಟಲೀಕರಣ: ಡಾ.ಮನು ಬಳಿಗಾರ್

Last Updated 11 ಅಕ್ಟೋಬರ್ 2018, 9:55 IST
ಅಕ್ಷರ ಗಾತ್ರ

ಕಲಬುರ್ಗಿ: ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಮಹತ್ವದ 400 ಕೃತಿಗಳನ್ನು ಡಿಜಿಟಲೈಸೇಷನ್ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.

ನಗರದಲ್ಲಿ ₹17 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಘಟಕದ ಕನ್ನಡ ಸಭಾ ಭವನವನ್ನು ಗುರುವಾರ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಕೆಲಸಕ್ಕೆ ₹75 ಲಕ್ಷ ಮೀಸಲಿರಿಸಲಾಗಿತ್ತು. ಆದರೆ, ಅದನ್ನು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ‘ಭಾರತ ವಾಣಿ’ ಮೂಲಕ ಉಚಿತವಾಗಿ ಮಾಡಿಕೊಡುತ್ತಿದೆ ಎಂದು ಹೇಳಿದರು.

ಈಗಾಗಲೇ ನಿಘಂಟುಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಸಂಕ್ಷಿಪ್ತ ಕನ್ನಡ ನಿಘಂಟುವಿನ ಕೆಲಸ ನಡೆಯುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಎಲ್ಲ ಕೃತಿಗಳ ಡಿಜಿಟಲೀಕರಣ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಇಂದಿನ ಯುವಕರು ಪುಸ್ತಕ ಓದುವುದು ಕಡಿಮೆ ಆಗಿದೆ. ಎಲ್ಲರ ಬಳಿ ಸ್ಮಾರ್ಟ್ ಫೋನ್, ಕಂಪ್ಯೂಟರ್ ಇವೆ. ಅವರಲ್ಲಿ ಓದುವ ಅಭಿರುಚಿ ಬೆಳೆಸಲು ಈ ಯೋಜನೆ ರೂಪಿಸಲಾಗಿದೆ ಎಂದರು.

ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನದ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ತರಲಾಗುವುದು. ಅದೇ ರೀತಿ ರಾಯಚೂರು, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಮತ್ತು ಉಪನ್ಯಾಸಗಳಿಗೆ ಪುಸ್ತಕ ರೂಪ ನೀಡಲಾಗುವುದು ಎಂದು ತಿಳಿಸಿದರು.

ನೇಪಾಳದ ಸಾಂಸ್ಕೃತಿಕ ಸಂಘಟನೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕರ್ನಾಟಕ ಮತ್ತು ನೇಪಾಳದ 50 ಕವಿಗಳ ಕವನಗಳನ್ನು ಎರಡೂ ಭಾಷೆಗಳಿಗೆ ಅನುವಾದ ಮಾಡಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕಸಾಪ 3.20 ಲಕ್ಷ ಸದಸ್ಯರಿರುವ ಜಗತ್ತಿನ ದೊಡ್ಡ ಸಾಹಿತ್ಯಿಕ ಸಂಸ್ಥೆ. ನಾವು ಜವಾಬ್ದಾರಿ ವಹಿಸಿಕೊಂಡ 19 ತಿಂಗಳಲ್ಲಿ ₹5 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲಾಗಿದೆ ಎಂದರು.

ಭಾರತೀಯ ಭಾಷಾ ಸಂಸ್ಥಾನ ಜತೆ ಒಪ್ಪಂದ ಮಾಡಿಕೊಂಡು ಪ್ರತಿ ಜಿಲ್ಲೆಯಲ್ಲಿ ತಲಾ 50 ಶಿಕ್ಷಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 14 ಜಿಲ್ಲೆಗಳಲ್ಲಿ ಹಳೆಗನ್ನಡ, ಶಾಸನದ ಮಹತ್ವ, ಕೃತಿಗಳ ಕುರಿತು ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಪ್ರತಿ ತಿಂಗಳು ಮಹಿಳಾ ಸಾಧಕಿಯರೊಂದಿಗೆ ಸಂವಾದ ಏರ್ಪಡಿಸಲಾಗುತ್ತಿದೆ. ಸಹಕಾರ ಮಹಾಮಂಡಳದ ಸಹಕಾರದಲ್ಲಿ ಕೃಷಿ ಹಾಗೂ ಸಹಕಾರ ಸಾಹಿತ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೀದರ್‌ನಲ್ಲಿ ನಡೆದ ಸಮಾವೇಶದಲ್ಲಿ 1,500 ರೈತರು ಭಾಗವಹಿಸಿದ್ದು ವಿಶೇಷವಾಗಿತ್ತು ಎಂದು ವಿವರಿಸಿದರು.

ಬೆಳಗಾವಿ ಮತ್ತು ಯಾದಗಿರಿಯಲ್ಲಿ ಕನ್ನಡ ಸಭಾ ಭವನ ನಿರ್ಮಿಸಲು ಅನುದಾನ ನೀಡಲಾಗಿದೆ. ಸರ್ಕಾರಿ, ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಗ್ರಂಥಾಲಯದ ಸೌಲಭ್ಯ ಇದ್ದರೆ 300 ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ಬಹ್ರೇನ್‌ನಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಗೋವಾದಲ್ಲಿ ಕಸಾಪ ಘಟಕ ತೆರೆಯಲಾಗಿದೆ. ಬೃಹತ್ ಮುಂಬೈಗೆ ಜಿಲ್ಲಾ ಘಟಕದ ಸ್ಥಾನಮಾನ ನೀಡಲಾಗಿದೆ ಎಂದರು.

ಮೇಲ್ಮನವಿ ಸಲ್ಲಿಕೆ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರ ಅವಧಿಯನ್ನು ಮೂರರಿಂದ ಐದು ವರ್ಷಕ್ಕೆ ಏರಿಸುವ ನಿರ್ಣಯವನ್ನು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಉಪನಿಬಂಧಕರು 13 ತಿದ್ದುಪಡಿಗಳಲ್ಲಿ 9 ತಿದ್ದುಪಡಿಗಳಿಗೆ ಮಾತ್ರ ಅನುಮೋದನೆ ನೀಡಿದ್ದರು.

ಅಧ್ಯಕ್ಷರ ಅವಧಿ ಏರಿಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳೆಯರ ಪ್ರಾತಿನಿದ್ಯ ಹೆಚ್ಚಿಸುವುದಕ್ಕೆ ಅನುಮೋದನೆ ನೀಡಿಲ್ಲ. ಅನುಮೋದನೆ ಸಿಕ್ಕಿದ್ದರೆ ತಲಾ 750 ಜನ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಮಹಿಳೆಯರಿಗೆ ಪ್ರಾತಿನಿದ್ಯ ಸಿಗುತ್ತಿತ್ತು ಎಂದರು.

ಮೇಲ್ಮನವಿಯಲ್ಲಿ ಏನೇ ತೀರ್ಪು ಬಂದರೂ ಅದನ್ನು ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

ವೀರಭದ್ರ ಸಿಂಪಿ ಮತ್ತು ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT