ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ | ತೇವಾಂಶ ಹೆಚ್ಚಳ; ನೆಟೆರೋಗ ಆತಂಕ

Last Updated 10 ಅಕ್ಟೋಬರ್ 2021, 4:15 IST
ಅಕ್ಷರ ಗಾತ್ರ

ವಾಡಿ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗುತ್ತಿವೆ. ಮುಂಗಾರು ಹಂಗಾಮಿನ ತೊಗರಿ ಬೆಳೆ ಕುಡಿ, ಮೊಗ್ಗು ಮತ್ತು ಹೂವು ಬಿಡುವ ಹಂತದಲ್ಲಿದ್ದು, ಅಲ್ಲಲ್ಲಿ ನೆಟೆ ರೋಗದಿಂದ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ವಾರದಿಂದ ಬಿಡುವು ನೀಡಿದ್ದ ವರುಣ, ಶುಕ್ರವಾರದಿಂದ ಮತ್ತೆ ಸುರಿಯುತ್ತಿದೆ. ತೊಗರಿ ಸಾಲುಗಳ ಮಧ್ಯೆ ನೀರು ನಿಂತು, ಬೆಳೆಗಳಿಗೆ ನೆಟೆ ರೋಗ ಹಬ್ಬುತ್ತಿದೆ. ಇದರಿಂದ ಬೆಳೆಗಾರರಲ್ಲಿ ಇಳುವರಿ ಕುಂಠಿತ ಭಯ ಕಾಡುತ್ತಿದೆ. ಆಳೆತ್ತರ ಬೆಳೆದು ಹಸಿರಿನಿಂದ ಕಂಗೊ ಳಿಸಿ ನಳನಳಿಸಬೇಕಾಗಿದ್ದ ತೊಗರಿ ಬೆಳೆಯು ಸತತ ಮಳೆಗೆ ಸಿಲುಕಿ ನಲುಗುತ್ತಿದೆ. ಅವುಗಳಿಗೆ ತೇವಾಂಶವು ಕಂಟಕವಾಗಿ ಕಾಡುತ್ತಿದೆ. ಬೆಳವಣಿಗೆಗೆ ತೀವ್ರ ಅಡ್ಡಿಯಾಗಿದೆ.

ನಾಲವಾರ ವಲಯದಲ್ಲಿ ತರಕಸ್ ಪೇಟ್, ಕೊಲ್ಲೂರು, ರಾವೂರು, ಚಾಮನೂರು, ಬಳವಡ್ಗಿ, ಅಳ್ಳೊಳ್ಳಿ ಕರದಳ್ಳಿ ಹಾಗೂ ಕಡಬೂರು ಗ್ರಾಮಗಳಲ್ಲಿ ಕಪ್ಪು ಮಿಶ್ರಿತ ಭೂಮಿ ಇದೆ. ಇಲ್ಲಿನ ತೊಗರಿಗೆ ಹಸಿ ತೇವಾಂಶ ಸಮಸ್ಯೆವ್ಯಾಪಕವಾಗಿ ಕಾಡುತ್ತಿದೆ. ಇನ್ನೊಂದಿಷ್ಟು ದಿನ ಮಳೆ ಇದೆ ರೀತಿ ಸುರಿದರೆ ಇದರ ತೀವ್ರ ದ್ವಿಗುಣಗೊಂಡು ಬೆಳೆ ಒಣಗಬಹುದು. ನೀರು ಬಸಿದು ಹೋಗುವ ಮಸಾರಿ ಜಮೀನುಗಳಲ್ಲಿ ಬಿತ್ತಿರುವ ತೊಗರಿಗೂ ಸಹ ಆಪತ್ತು ಎದುರಾಗಿದೆ. ಇದು ರೈತರ ಉತ್ಸಾಹಕ್ಕೆ ತಣ್ಣೀರು ಎರೆಚಿದೆ.

ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬಿತ್ತನೆಯಾದ ತೊಗರಿ ಬೆಳೆ ಕೆಲವು ಕಡೆ ಹೂವು ಬಿಡುವ ಹಂತದಲ್ಲಿದೆ. ಉಳಿದ ಕಡೆ ಬೆಳವಣಿಗೆ ಹಂತದಲ್ಲಿದೆ. ಸತತ ಮಳೆಗೆ ಸಿಲುಕಿದ ಬೆಳೆಗಳ ಬೆಳವಣಿಗೆ ತೀವ್ರ ಕುಸಿತವಾಗಿದೆ.

‘ನಾಲವಾರ ವಲಯದಲ್ಲಿ 15,200 ಹೆಕ್ಟೆರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಜಿಆರ್ ಜಿ811 ಹಾಗೂ ಟಿಎಸ್3ಆರ್ ಹೆಸರಿನ ತಳಿಗಳನ್ನು ನಾಲವಾರ ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾಗಿದೆ. ಇವು ನೆಟೆರೋಗ ನಿರೋಧಕ ಸಾಮರ್ಥ್ಯ ಹೊಂದಿದೆ’ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

‘ಜಿಲ್ಲೆಯಲ್ಲಿ ತೊಗರಿ ಬೆಳೆಗೆ ಸಂಚಕಾರ ಎದುರಾಗಿದೆ. ಬೆಳೆ ಕೈಸೇರುವ ಯಾವುದೇ ಲಕ್ಷಣಗಳಿಲ್ಲ. ಸರ್ಕಾರ ಸಂಪೂರ್ಣ ಹಾನಿಯೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕು' ಎಂದು ಆರ್‌ಕೆಎಸ್ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗಂಡಣ್ಣ ಎಂ.ಕೆ ಒತ್ತಾಯಿಸಿದರು.

ರೈತರು ಜಮೀನುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೊಗರಿ ಬೆಳೆಗಳ ಮಧ್ಯೆ ನೀರು ನಿಂತರೆ ನೆಟೆರೋಗ ಬರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಪ್ರತಿ ಲೀಟರ್ ನೀರಿಗೆ 10 ಗ್ರಾಂ 19-19-19 ಮೇಲುಗೊಬ್ಬರ ಸಿಂಪಡಿಸಬೇಕು ಎನ್ನುತ್ತಾರೆ ನಾಲವಾರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸತೀಶಕುಮಾರ ಪವಾರ್.

*ಅತಿವೃಷ್ಟಿಯಿಂದ ತೊಗರಿ ನಾಶವಾಗಿ, ಬಿತ್ತಿದ್ದ ಬೀಜ ಮಣ್ಣುಪಾಲಾಗುವ ಭೀತಿ ಇದೆ. ಶೇ 75ರಷ್ಟು ಮುಂಗಾರು ಬೆಳೆಗಳು ಕೈತಪ್ಪುವ ಆತಂಕವಿದೆ. ಸರ್ಕಾರ ಪರಿಹಾರ ನೀಡಲು ಮುಂದಾಗಬೇಕು

-ಶಕುಂತಲಾ ಪವಾರ್, ಕರ್ನಾಟಕ ಪ್ರಾಂತ ರೈತ ಸಂಘ, ಇಂಗಳಗಿ ಕಾರ್ಯದರ್ಶಿ

*12 ಎಕರೆಯಲ್ಲಿ ಬಿತ್ತಿದ್ದ ತೊಗರಿ ಬೆಳೆ ಪೈಕಿ 6 ಎಕರೆ ಮಳೆಗೆ ಹಾಳಾಗಿದ್ದರಿಂದ ಮರುಬಿತ್ತನೆ ಮಾಡಿದ್ದೆ. ಮತ್ತೆ ಮಳೆ ಸುರಿದಿದ್ದರಿಂದ ಶೇ.75ರಷ್ಟು ತೊಗರಿ ಬೆಳೆ ನಷ್ಟಕ್ಕೀಡಾಗಿದೆ

-ನಿಂಗಪ್ಪ ಪೂಜಾರಿ, ಇಂಗಳಗಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT