ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಪ‍್ರವಾಹ ಪರಿಹಾರ, ಗ್ರಾಮ ಸ್ಥಳಾಂತರಕ್ಕೆ ಪಟ್ಟು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ ನಡೆಸಿದ ರೈತರು
Last Updated 27 ಅಕ್ಟೋಬರ್ 2020, 15:49 IST
ಅಕ್ಷರ ಗಾತ್ರ

ಅಫಜಲಪುರ: ಭೀಮಾ ಪ್ರವಾಹಕ್ಕೆ ಒಳಗಾದ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು. ಹಾಳಾದ ಬೆಳೆಗಳಿಗೆ ಎನ್‌.ಡಿ.ಆರ್‌.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕು ಮತ್ತು ರೈತರಿಗೆ 12 ಗಂಟೆ ವಿದ್ಯುತ್ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ತಾಲ್ಲೂಕು ಜಲ ಸಮಿತಿ ಒಕ್ಕೂಟದ ವತಿಯಿಂದ ತಹಶೀಲ್ದಾರ್‌ ಕಚೇರಿ ಎದುರುಗಡೆ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.

ರೈತ ಸಂಘದ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ರೈತರ ಟಿ.ಸಿ.ಗಳು ಸುಟ್ಟರೆ ದುರಸ್ತಿ ಮಾಡಲು ಜೆಸ್ಕಾಂ ಅಧಿಕಾರಿಗಳು ₹ 25ರಿಂದ ₹ 45 ಸಾವಿರದವರೆಗೆ ಹಣ ವಸೂಲಿ ಮಾಡುತ್ತಾರೆ. ಇದು ನಿಲ್ಲಬೇಕು. ರೈತರ ಬಾವಿಗಳಿಗೆ ಮತ್ತು ಕೊಳವೆ ಬಾವಿಗಳಿಗೆ ಮತ್ತು ಭೀಮಾನದಿಗೆ ನೀರು ಬಂದಿರುವುದರಿಂದ 12 ಗಂಟೆವರೆಗೆ ವಿದ್ಯುತ್ ಪೂರೈಕೆ ಮಾಡಬೇಕು. ಗ್ರಾಮಗಳನ್ನು ಸ್ಥಳಾಂತರ ಮಾಡಿ, ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಎಂದರು.

ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಹಾಗೂ ತಾಲ್ಲೂಕು ಜಿಲ್ಲಾ ಸಮಿತಿ ಅಧ್ಯಕ್ಷ ಸಿದ್ದು ದಣ್ಣೂರ ಮಾತನಾಡಿ, ಸರ್ಕಾರ ತಕ್ಷಣ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿ ಕೊಡಬೇಕು ಮತ್ತು ಭೀಮಾ ಪ್ರವಾಹದಿಂದ ರೈತರ ವಿದ್ಯುತ್ ಕಂಬಗಳು ಬಿದ್ದು ಹೋಗಿವೆ, ಟಿ.ಸಿ ಹಾಳಾಗಿ ಹೋಗಿವೆ, ಅವುಗಳನ್ನು ಸಮೀಕ್ಷೆ ಮಾಡಿ ವಾರದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕರಾದ ಶಾಂತಾ ಘಂಟೆ, ಜಿಲ್ಲಾ ಸಮಿತಿ ಖಜಾಂಚಿ ಗುರು ಚಾಂದವಕೋಟೆ, ತಾಲ್ಲೂಕು ಪ್ರಾಂತ ರೈತ ಸಂಘದ ಉಪಾಧ್ಯಕ್ಷ, ಅಶೋಕ ಹೂಗಾರ, ಸದಾಶಿವ ಮೇತ್ರೆ, ಬಸಣ್ಣಾ ಗುಣಾರಿ, ಶಂಕರೆಪ್ಪ ಮಣೂರ, ತಾಲ್ಲೂಕು ಡಿಎಸ್‌ಎಸ್ ಸಂಚಾಲಕರಾದ ರಾಜು ಆರೇಕರ ಮಾತನಾಡಿದರು.

ತಹಶೀಲ್ದಾರ್‌ ಎಂ.ಕೆ. ನಾಗಮ್ಮ ಮನವಿ ಸ್ವೀಕರಿಸಿದರು.

ಜೆಸ್ಕಾಂ ಸಹಾಯಕ ಎಂಜಿನಿಯರ್ ನಾಗರಾಜ ಮಾತನಾಡಿ, ಭೀಮಾ ಪ್ರವಾಹಕ್ಕೆ ಒಳಗಾದ ರೈತರ ಜಮೀನುಗಳು ಕಂಬಗಳು, ಟಿ.ಸಿ ದುರಸ್ತಿ ಮಾಡಲು ಬುಧವಾರದಿಂದಲೇ ಸಮೀಕ್ಷೆ ಮಾಡಿ ಆದ್ಯತೆ ಪ್ರಕಾರ ವಿದ್ಯುತ್ ಪೂರೈಕೆ ಮಾಡಲಾಗುವುದು ಮತ್ತು ರೈತರ ಟಿ.ಸಿ. ಸುಟ್ಟರೆ ನಮ್ಮ ಜೆಸ್ಕಾಂನಿಂದ ಯಾರೂ ಹಣ ತೆಗೆದುಕೊಳ್ಳುವುದಿಲ್ಲ. ಹಾಗೇನಾದರು ಕಂಡುಬಂದರೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ರೈತ ಮುಖಂಡರಾದ ಶಿವು ಹೀರಾಪುರ, ಸೂರ್ಯಕಾಂತ ಪಂಡರೆ, ಅಶೋಕ ಬಗಲಿ, ಭಾಗಣ್ಣ ಕುಂಬಾರ, ಮಲ್ಲಿಕಾರ್ಜುನ ಪಾಟೀಲ, ಸಂಗಣ್ಣ ನಾಶಿ, ವಿಶ್ವನಾಥ ಹೂಗಾರ, ಶಿವರಾಯ ದಣ್ಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT