ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಳೆಯಿಂದ ವಿನೂತನ ಆಹಾರ ಕಂಡುಕೊಳ್ಳಿ: ಡಾ.ಎನ್‌.ಜಿ.ಐಬೋಯಿಮಾ ಸಿಂಗ್‌

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಹಿರಿಯ ವಿಜ್ಞಾನಿ ಸಲಹೆ
Last Updated 29 ಸೆಪ್ಟೆಂಬರ್ 2018, 13:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಹೆಚ್ಚು ಬೆಳೆಯುವ ದ್ವಿದಳ ಧಾನ್ಯ ಬಳಸಿ ವಿನೂತನ ಆಹಾರ ಪದಾರ್ಥಗಳನ್ನು ತಯಾರಿಸುವ ಅಗತ್ಯವಿದೆ. ಸಿಎಫ್‌ಟಿಆರ್‌ಐನಲ್ಲಿ ಇದಕ್ಕೆ ಬೇಕಿರುವ ತರಬೇತಿ ಉಚಿತವಾಗಿ ಸಿಗಲಿದೆ’ ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಎನ್‌.ಜಿ. ಐಬೋಯಿಮಾ ಸಿಂಗ್‌ ಸಲಹೆ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹಾಗೂ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆಹಾರ ಸಂಸ್ಕರಣ ವಲಯದಲ್ಲಿ ವ್ಯಾಪಾರ ಅವಕಾಶಗಳು’ ಕುರಿತು ಅವರು ಮಾಹಿತಿ ನೀಡಿದರು.

‘ಈ ಭಾಗದಲ್ಲಿ ತೊಗರಿ, ಹೆಸರು, ಜೋಳ, ಎಣ್ಣೆಕಾಳು ಯಥೇಚ್ಛವಾಗಿ ಬೆಳೆಯುತ್ತವೆ. ಸಾಂಪ್ರದಾಯಿಕ ಆಹಾರ ಪದ್ಧತಿಯ ಜತೆಗೇ, ಇದೇ ಧಾನ್ಯ ಬಳಸಿ ವಿನೂತನ ತಿನಿಸುಗಳನ್ನು ಕಂಡುಕೊಳ್ಳಬೇಕು’ ಎಂದರು.

‘ಮಂಡ್ಯ, ಮೈಸೂರು ಭಾಗದಲ್ಲಿ ಮುಂಚೆ ರಾಗಿಮುದ್ದೆ ಮಾತ್ರ ಚಾಲ್ತಿಯಲ್ಲಿತ್ತು. ಆದರೆ, ಈಗ ರಾಗಿರೊಟ್ಟಿ, ಜೂಸ್‌, ಐಸ್ಕ್ರೀಂ, ದೋಸೆ, ಬೇಕರಿ ಪದಾರ್ಥ, ರಾಗಿ ಅಕ್ಕಿಯ ಅನ್ನ, ಉಪ್ಪಿಟ್ಟು, ಪಾಯಸ, ಚಿಪ್ಸ್‌... ಹೀಗೆ ಹಲವಾರು ಮಾದರಿಗಳನ್ನು ಕಂಡುಕೊಂಡಿದ್ದಾರೆ. ಇದರಿಂದ ರಾಗಿಗೆ ಹೆಚ್ಚು ಬೇಡಿಕೆ ಇದೆ. ಇಂಥದ್ದೇ ಪ್ರಯೋಗಗಳನ್ನು ಹೈ.ಕ. ಭಾಗದಲ್ಲೂ ಮಾಡಬೇಕಿದೆ’ ಎಂದು ಹೇಳಿದರು.

‘ಸಿಎಫ್‌ಟಿಆರ್‌ಐ ಹಾಗೂ ಸಿಎಸ್‌ಐಆರ್‌ (ಕೇಂದ್ರೀಯ ಆಹಾರ ಸಂಶೋಧನಾಲಯ)ಗಳಲ್ಲಿ ಆಹಾರ ಕ್ಷೇತ್ರದ ಕುರಿತು ಸಾಕಷ್ಟು ಅವಕಾಶಗಳಿವೆ. ಹೊಸ ಸಂಶೋಧನೆ, ತರಬೇತಿ, ತಾಂತ್ರಿಕ ಸಲಹೆ, ಯಂತ್ರೋಪಕರಣ ಪೂರೈಕೆ ಸೇರಿದಂತೆ ಹಲವು ಬಗೆಯ ಸೌಲಭ್ಯ ಉಚಿತವಾಗಿವೆ. ಆಸಕ್ತಿ ಇರುವವರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಅವರು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಸಂಸ್ಥೆ ಜಂಟಿ ಕಾರ್ಯದರ್ಶಿ ಮಾಣಿಕ್‌ ವಿ. ರಘೋಜಿ, ಕಾಸಿಯಾ ಉಪಾಧ್ಯಕ್ಷ ಆರ್‌.ರಾಜು, ಜಂಟಿ ಕಾರ್ಯದರ್ಶಿ ಸುರೇಶ್‌ ಎನ್‌. ಸಾಗರ್‌, ಎಚ್‌ಕೆಸಿಸಿಐ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ ಸೇರಿ ಹಲವು ಉದ್ಯಮಿಗಳು ವೇದಿಕೆಯಲ್ಲಿದ್ದರು.

ದಾಲ್‌–ರೋಟಿ ತಿನ್ನಿ ಐಎಎಸ್‌ ಆಗಿ...

‘ದ್ವಿದಳ ಧಾನ್ಯ ಹಾಗೂ ತರಕಾರಿಗಳಲ್ಲಿ ಸಾಕಷ್ಟು ಪೋಷಕಾಂಶ ಇರುತ್ತವೆ. ಮಾಂಸಾಹಾರಕ್ಕಿಂತ ಹೆಚ್ಚು ಶಕ್ತಿ ನೀಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಕಾಳುಪಲ್ಯ– ಜೋಳದ ರೊಟ್ಟಿ ತಿಂದರೆ ಸಾಕು; ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯ ವೃದ್ಧಿಸುತ್ತದೆ’ ಎಂದು ಡಾ.ಎನ್‌.ಜಿ. ಐಬೋಯಿಮಾ ಸಿಂಗ್‌ ಹೇಳಿದರು.

‘ರಾಗಿಮುದ್ದೆ ತಿಂದ ದೇವೇಗೌಡರು ಪ್ರಧಾನಿ ಆದರು ಎಂಬ ಮಾತನ್ನು ಸಾಕಷ್ಟುಬಾರಿ ಕೇಳಿದ್ದೇವೆ. ಗೌಡರೇ ರಾಗಿಯ ಬ್ರ್ಯಾಂಡ್‌ ಅಂಬಾಸಡರ್ ಎನ್ನುವಷ್ಟು ಆ ಎರಡೂ ಹೆಸರು ರೂಢಿಯಲ್ಲಿವೆ. ಗೌಡರ ಹಾಗೆ ನೀವೂ ದಾಲ್‌– ರೋಟಿ ತಿನ್ನಿ ಐಎಎಸ್‌ ಆಫೀಸರ್‌ ಆಗಿ’ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.

ಡೀ ದಿನಕ್ಕೆ 8 ಗ್ರಾಂ ಚಾಕೊಲೇಟ್‌ ಸಾಕು!

‘8 ಗ್ರಾಂನ ಒಂದು ಚಾಕೊಲೇಟ್‌ ತಿಂದರೆ ಸಾಕು; 24 ಗಂಟೆ ಹೊಟ್ಟೆ ಹಸಿಯುವುದಿಲ್ಲ. ಶೌಚಕ್ಕೂ ಹೋಗುವ ಅಗತ್ಯ ಬೀಳುವುದಿಲ್ಲ’ ಎಂಬ ಸಂಗತಿ ತಿಳಿಸಿದ ಕಾಸಿಯಾ ಪ್ರಧಾನ ಕಾರ್ಯದರ್ಶಿ ರವಿಕಿರಣ ಕುಲಕರ್ಣಿ, ಸಭಿಕರನ್ನು ನಿಬ್ಬೆರಗು ಮಾಡಿದರು.

‘ಅತಿ ಕಡಿಮೆ ಪದಾರ್ಥ ತಿಂದು ಹಸಿವು ನೀಗಿಸುವ ಆಹಾರ ಕಂಡುಕೊಳ್ಳಲು ನಿರಂತರ ಸಂಶೋಧನೆಗಳು ನಡೆದೇ ಇವೆ. ಇತ್ತೀಚೆಗೆ 8 ಗ್ರಾಂನ ಚಾಕೊಲೇಟ್‌ ಒಂದನ್ನು ವಿಜ್ಞಾನಿಗಳು ಕಂಡುಕೊಂಡರು. ಇಂಥ 20 ಕೆ.ಜಿ ಚಾಕೊಲೇಟ್‌ನಿಂದ 20 ದಿನ ಹಸಿವಿಲ್ಲದೇ ಬದುಕಬಹುದು’ ಎಂದರು.

‘ಕೇಂದ್ರ ಸರ್ಕಾರ ಈ ಚಾಕೊಲೇಟ್‌ ದರ ₹ 400 ನಿಗದಿ ಮಾಡಿತು. ಮಾರುಕಟ್ಟೆಯಲ್ಲಿ ಇದು ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಬಹುಪಾಲ ಉದ್ಯಮಿಗಳು ಅಂದುಕೊಂಡಿದ್ದೆವು. ಆದರೆ, ಸೈನಿಕರಿಗೆ, ಭದ್ರತಾ ಸಿಬ್ಬಂದಿಗೆ, ಅವಘಡಗಳಲ್ಲಿ ಸಿಕ್ಕಿಕೊಂಡವರಿಗೆ ಇಂಥ ಚಾಕೊಲೇಟ್‌ ಎಷ್ಟು ಉಪಯುಕ್ತ ಎಂದು ಸರ್ಕಾರ ಸಾಧಿಸಿ ತೋರಿಸಿತು. ಆಹಾರ ಉದ್ಯಮದಲ್ಲಿ ಸಂಶೋಧನೆಗೆ ಕೊನೆ ಇಲ್ಲ. ಸ್ಥಳೀಯ ಉದ್ಯಮಿಗಳು ಇಂಥ ಕಸರತ್ತಿಗೆ ಕೈಹಾಕಬೇಕು’ ಎಂದು ಸಲಹೆ ನೀಡಿದರು.

* ಜಿಡಿಪಿಯಲ್ಲಿ ಶೇ 37ರಷ್ಟು ಪಾಲು ಸಣ್ಣ ಕೈಗಾರಿಕೆಗಳದ್ದೇ ಇದೆ. ಇವುಗಳನ್ನು ಮುಳುಗಲು ಬಿಟ್ಟರೆ ದೇಶದ ಅರ್ಥವ್ಯವಸ್ಥೆಗೆ ಹೊಡೆತ ಬೀಳುವುದು ಖಚಿತ

–ಅಮರನಾಥ ಸಿ. ಪಾಟೀಲ,ಅಧ್ಯಕ್ಷ, ಎಚ್‌ಕೆಸಿಸಿಐ

* ಹೈ.ಕ ಭಾಗದಲ್ಲಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಕಾಸಿಯಾ ವೈವಿಧ್ಯಮಯ ಕಾರ್ಯಕ್ರಮ ರೂಪಿಸಿದೆ. ತಾಂತ್ರಿಕ ಸಲಹೆ, ತರಬೇತಿ, ಮಾರುಕಟ್ಟೆಯನ್ನೂ ಕಲ್ಪಿಸಲಿದೆ

–ರವಿಕಿರಣ ಕುಲಕರ್ಣಿ,ಪ್ರಧಾನ ಕಾರ್ಯದರ್ಶಿ, ಕಾಸಿಯಾ

* ದೇಶದ ಪ್ರತಿಯೊಬ್ಬರೂ ತೊಗರಿ ತಿನ್ನುವಂಥ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಬೇಕು. ಇದರಿಂದ ರೈತರು ಹಾಗೂ ದಾಲ್‌ಮಿಲ್‌ಗಳು ಬದುಕುತ್ತವೆ

–ಬಸವರಾಜ ಎಸ್‌. ಜವಳಿ,ಅಧ್ಯಕ್ಷ, ಕಾಸಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT