ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದು ಹೊಲ ಹಾಳು, ಹೊಳಿ ಬಂದು ಮನೆ ಹಾಳು!

ಸೊನ್ನ ಬ್ಯಾರೇಜ್‌ ಕಟ್ಟಿದ ಮೇಲೆ ಸಂತ್ರಸ್ತರಾದ ಮಂದರವಾಡ ಜನ, ಸ್ಥಳಾಂತರ ಕೂಗಿಗೆ ಕಿವಿಗೊಡದ ಸರ್ಕಾರ
Last Updated 18 ಅಕ್ಟೋಬರ್ 2020, 15:45 IST
ಅಕ್ಷರ ಗಾತ್ರ

ಕಲಬುರ್ಗಿ: ಸೊನ್ನ ಬ್ಯಾರೇಜ್‌ ಹಿನ್ನೀರು ಜೇವರ್ಗಿ ತಾಲ್ಲೂಕಿನ ಮಂದರವಾಡ ಗ್ರಾಮಸ್ಥರನ್ನು ಊರು ಬಿಡಿಸಿದೆ. ಶನಿವಾರ ರಾತ್ರಿಯ ಹೊತ್ತಿಗೆ ಗ್ರಾಮದ ಸುತ್ತಲೂ ನೀರು ಆವರಿಸಿಕೊಂಡಿದೆ. ಭಾನುವಾರ ಮಧ್ಯಾಹ್ನದ ಹೊತ್ತಿಗೆ ಜನರನ್ನು ಖಾಲಿ ಮಾಡಿಸಲಾಗಿದೆ. ಆದರೆ, ಊರು ಬಿಟ್ಟು ಹೋದ ಜನ; ಮರಳಿ ಬರುವಷ್ಟರಲ್ಲಿ ಮನೆಗಳು ಏನಾಗಿರುತ್ತವೆಯೋ ಎಂಬ ಚಿಂತೆಯಲ್ಲೇ ಕಾಲ ದೂಡುತ್ತಿದ್ದಾರೆ ಜನ.

2010ಕ್ಕೂ ಮೊದಲು ಕೂಡ ಭೀಮಾ ನದಿ ಪ್ರವಾಹ ಬಂದಾಗ ಈ ಗ್ರಾಮದ ಹತ್ತಿರಕ್ಕೆ ನೀರು ಬರುತ್ತಿತ್ತು. ಆದರೆ, ಊರಿನೊಳಗೆ ನುಗ್ಗುತ್ತಿರಲಿಲ್ಲ. ಊರು ತುಸು ಎತ್ತರದಲ್ಲಿ ಇರುವ ಕಾರಣ ನೀರು ಸರಾಗವಾಗಿ ಹರಿದುಹೋಗುತ್ತಿತ್ತು. ಆದರೆ, ಸೊನ್ನ– ಭೀಮಾ ಬ್ಯಾರೇಜ್‌ ಕಟ್ಟಿದ ಮೇಲೆ ಅದರ ಹಿನ್ನೀರು ‘ಭೀಮ’ ಬಾಹುಗಳನ್ನು ಚಾಚುತ್ತಿದೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಮಳೆ ಬಂದರೆ ಸಾಕು ಈ ಊರಿನ ಜನ ಬೆಚ್ಚಿ ಬೀಳುತ್ತಾರೆ.

ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು ಎಂದು ದಶಕಗಳಿಂದಲೂ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅದಕ್ಕೆ ಮಂಜೂರಾತಿಯೂ ಸಿಕ್ಕಿದೆ. ಊರಿನಿಂದ ಒಂದೂವರೆ ಕಿ.ಮೀ ದೂರದಲ್ಲಿ ಎರಡು ಎಕರೆ ವಾರಿ (ಗೈರಾಣ) ಜಮೀನು ಗುರುತಿಸಲಾಗಿದೆ. ಆದರೆ, ಸ್ಥಳಾಂತರಿಸುವ ವಿಚಾರವನ್ನೇ ಸರ್ಕಾರ ಮರೆತುಬಿಟ್ಟಿದೆ.‌

2010ರಲ್ಲಿ ಇದೇ ರೀತಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ನೂರಾರು ಮನೆಗಳು ಬಿದ್ದವು. ಆಗ ಜನರನ್ನು ಶಾಶ್ವತ ಸ್ಥಳಾಂತರ ಮಾಡುವ ಸಲುವಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ 100 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಅದರಲ್ಲಿ ಅರ್ಧದಷ್ಟು ಮನೆಗಳಲ್ಲಿ ಮಾತ್ರ ಜನ ಉಳಿದುಕೊಂಡಿದ್ದಾರೆ. ಇನ್ನರ್ಧ ವಾಸಕ್ಕೆ ಸರಿಯಾಗಿಲ್ಲ ಎಂದು ಮರಳಿ ಹಳೆ ಮನೆಗೆ ಬಂದಿದ್ದಾರೆ.

ಸ್ವಾಮೀಜಿ ಮನೆ ಕಟ್ಟಿಸಿ ಬಿಟ್ಟ ಮೇಲೆ ಸರ್ಕಾರ ಸ್ಥಳಾಂತರವನ್ನೇ ಮರೆತುಬಿಟ್ಟಿದೆ. ಹೀಗಾಗಿ, ಪ್ರತಿ ವರ್ಷವೂ ಪ್ರವಾಹಕ್ಕೆ ನಲುಗುತ್ತಿದೆ ಈ ಊರು.

‘ಸದ್ಯ ಇಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, 800ಕ್ಕೂ ಹೆಚ್ಚು ಜನಸಂಖ್ಯೆ ಇದೆ. 7ನೇ ತರಗತಿ ವರೆಗೆ ಮಾತ್ರ ಶಾಲೆ ಇದ್ದು, ಪ್ರೌಢಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕೂಡಿಗೆ ಹೋಗಬೇಕು. ಕಾಲೇಜಿಗೆ ಜೇವರ್ಗಿಗೆ ಅಲೆಯಬೇಕು. ಪ್ರತಿ ವರ್ಷ ಮಳೆಗಾಲದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅಡ್ಡಿಯಾಗುತ್ತದೆ’ ಎಂಬುದು ಯುವಕ ವೀರೇಶ ಬಡಿಗೇರ ಅವರ ಗೋಳು.

‘ಸೊನ್ನ ಬ್ಯಾರೇಜ್‌ ನಿರ್ಮಾಣವಾಗಿ ದಶಕ ಕಳೆದಿದೆ. ಪ್ರತಿ ವರ್ಷವೂ ಗ್ರಾಮದೊಳಗೆ ನೀರು ನುಗ್ಗುತ್ತದೆ. ಆದರೆ, ಈ ಬಾರಿ ಯಾರೂ ನಿರೀಕ್ಷಿಸದ ಮಟ್ಟಿಗೆ ಅಪಾಯ ತಂದೊಡ್ಡಿದೆ. ಬಹುಪಾಲು ಜನ ನಂಬಿದ್ದು ಕೃಷಿಯನ್ನೇ. ತೊಗರಿ, ಕಬ್ಬು, ಹತ್ತಿ, ಹೆಸರು ಮುಖ್ಯ ಬೆಳೆಗಳು.ಮುಂಗಾರು ಆರಂಭದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಎಲ್ಲ ಬೆಳೆಗಳೂ ಕೊಳೆತು ಹೋದವು. ಈಗ ಹಿಂಗಾರಿನಲ್ಲಾದರೂ ಹತ್ತಿ, ಕಬ್ಬು, ಜೋಳ ತೆಗೆದರಾಯಿತು ಎಂದು ಧೈರ್ಯವಾಗಿದ್ದ ರೈತರನ್ನು ‘ಮಹಾ’ಮಳೆ ಹೆದರಿಸುತ್ತಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಪೊಲೀಸ್‌ ಪಾಟೀಲ.

‘ಹೊಲದಲ್ಲಿದ್ದ ಪೈರು ಹೋದರೆ ಹೇಗಾದರೂ ತಾಳಿಕೊಳ್ಳಬಹುದು. ಆದರೆ, ಮನೆಯಲ್ಲಿ ಉನ್ನಲು ಇಟ್ಟುಕೊಂಡಿದ್ದ ಅಕ್ಕಿ, ಜೋಳ, ಬೇಳೆ ತೋಯ್ದು ಹಾಳಾಗಿವೆ. ಬಟ್ಟೆ, ಪಾತ್ರಗಳು ತೇಲಿ ಹೋಗಿವೆ. ಜಾನುವಾರುಗಳನ್ನೂ ಕಳೆದುಕೊಂಡಿದ್ದೇವೆ. ಶಾಶ್ವತವಾಗಿ ಸ್ಥಳಾಂತರಿಸದ ಹೊರತು ಬೇರೇನೂ ಪರಿಹಾರ ಬೇಕಿಲ್ಲ. ಇಷ್ಟು ವರ್ಷ ಕೊಟ್ಟ ಪರಿಹಾರದ ದುಡ್ಡಿನಲ್ಲೇ ಇವರು ಇಡೀ ಊರನ್ನು ಸ್ಥಳಾಂತರಿಸಬಹುದಿತ್ತು. ಆದರೆ, ಯಾರೊಬ್ಬರೂ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ’ ಎಂಬುದು ಕೃಷಿಕ ಮುತ್ತಪ್ಪ ಪೂಜಾರಿ ಅವರ ನೋವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT