ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ನೆರೆ ಬಂದು ಹೋದ ಮೇಲೆ ಹುಟ್ಟಿದ ಸವಾಲು

ಸಾವಿರಾರು ಎಕರೆ ಜಮೀನಿನಲ್ಲಿ ತುಂಬಿದ ಹೂಳು, ಹಿಂಗಾರಿಗೆ ಭೂಮಿ ಹದಗೊಳಿಸಲು ರೈತರ ಪರದಾಟ
Last Updated 27 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ವಾಡಿ: ಭೀಮೆಯ ಪ್ರವಾಹ ಈಗ ಶಾಂತವಾದರೂ ಅದು ಮಾಡಿದ ಹೋದ ಹಾನಿಯ ಕರಾಳ ಛಾಯೆ ಕಣ್ಣಿಗೆ ರಾಚುತ್ತಿದೆ. ನದಿ ನೀರು ಹಿಂದೆ ಸರಿದರೂ ಪ್ರವಾಹ ಸಂತ್ರಸ್ತರ ಬದುಕು ಮಾತ್ರ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.

ಮನೆ, ಗ್ರಾಮ, ಜಮೀನುಗಳಿಗೆ ನುಗ್ಗಿದ ನದಿನೀರು ಎಲ್ಲೆಂದರಲ್ಲಿ ತನ್ನ ಕರಾಳತೆ ಬಿಟ್ಟು ಹೋಗಿದೆ. ಸತತ ಮಳೆಯಿಂದ ಸಂಕಷ್ಟದ ಬದುಕಿಗೆ ತಳ್ಳಲ್ಪಟ್ಟಿದ್ದ ರೈತರಿಗೆ, ಪ್ರವಾಹವು ಗಾಯದ ಮೇಲೆ ಬರೆ ಎಳೆದಿದೆ. ಕಡಬೂರು, ಇಂಗಳಗಿ, ಚಾಮನೂರು, ಕುಲ್ಕುಂದಿ, ಕೊಲ್ಲೂರು, ಸನ್ನತಿ ಸೇರಿದಂತೆ ನದಿ ಪಾತ್ರದ ಸಾವಿರಾರು ಎಕರೆ ಪ್ರದೇಶದ ಭೂಮಿಯಲ್ಲಿ ಬೆಳೆಗಳು ನಾಶವಾಗಿವೆ. ಮುಂಗಾರು ಬೆಳೆ ಕಿತ್ತುಕೊಂಡ ಪ್ರವಾಹ ಹಿಂಗಾರು ಬಿತ್ತನೆಗೂ ಸಂಕಷ್ಟ ತಂದಿದೆ. ಈಗ ಪ್ರವಾಹ ಹೊತ್ತು ತಂದ ಕಸಕಡ್ಡಿ ಹಾಗೂ ಹೂಳಿನಿಂದ ಜಮೀನುಗಳು ತುಂಬಿ ಹೋಗಿದ್ದು, ಸ್ವಚ್ಛಗೊಳಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.

ನೂರಾರು ಎಕರೆ ಪ್ರದೇಶದಲ್ಲಿ ಬಿತ್ತಲಾಗಿದ್ದ ಮುಂಗಾರು ಹಂಗಾಮಿನ ತೊಗರಿ, ಹತ್ತಿ ಬೆಳೆಗಳು ನೀರು ಪಾಲಾಗಿವೆ. ಇನ್ನು ಕೆಲವರು ನೀರಲ್ಲಿ ನಿಂತು ಕೊಳೆತು ಹೋಗಿವೆ. ಹತ್ತಿ ಗಿಡಗಳು ಕಪ್ಪಿಟ್ಟಿವೆ. ಹೂವುಗಳಿಂದ ನಳನಳಿಸಬೇಕಾಗಿದ್ದ ತೊಗರಿ ಗಿಡಗಳು ಅಸ್ತಿ ಪಂಜರದಂತೆ ಗೋಚರಿಸುತ್ತಿವೆ. ಒಣಗಿ ನಿಂತ ತೊಗರಿ, ಹತ್ತಿ ನೋಡಿ ರೈತರು ಮಮ್ಮಲ ಮರುಗುತ್ತಿದ್ದಾರೆ. ಬೇಸಾಯಕ್ಕಾಗಿ ಸುರಿದ ಹಣ ಪ್ರವಾಹದ ಪಾಲಾದ ಸಂಗತಿ ನೆನೆದು ಕಣ್ಣೀರು ಸುರಿಸುತ್ತಿದ್ದಾರೆ.

ಹಿಂಗಾರು ಬಿತ್ತನೆಗೂ ಸಂಕಷ್ಟ: ಪ್ರವಾಹದಿಂದ ನದಿ ಪಾತ್ರದ ಜಮೀನುಗಳು ಅಕ್ಷರಶಃ ಜವುಗು ಭೂಮಿಯಾಗಿವೆ. ಹೂಳು, ಕಸಕಡ್ಡಿಗಳಿಂದ ತುಂಬಿ ಹೋಗಿದ್ದು, ಬೇಸಾಯ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಿಸಿದೆ. ಹಿಂಗಾರು ಜೋಳ ಬಿತ್ತನೆ ಸಮಯ ಇದಾಗಿದ್ದು, ಹೊಲ ಸ್ವಚ್ಛಗೊಳಿಸುವುದು ದೊಡ್ಡ ಸವಾಲಾಗಿದೆ.

ಮಳೆ ನಿಂತು ವಾರ ಕಳೆದರೂ ಕಪ್ಪು ನೆಲದ ಹಸಿ ತೇವಾಂಶ ಇನ್ನೂ ಆರಿಲ್ಲ. ಜಮೀನುಗಳಲ್ಲಿ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದ್ದು, ಹಿಂಗಾರು ಬಿತ್ತನೆಗೆ ತೀವ್ರ ಸಮಸ್ಯೆ ಉಂಟಾಗಿದೆ.

‘ಅಕ್ಟೋಬರ್ ಮುಗಿಯುತ್ತ ಬಂದರೂ ಬಿತ್ತನೆಗೆ ಪೂರಕ ವಾತಾವರಣ ಇಲ್ಲ. ಇಷ್ಟೊತ್ತಿಗೆ ಜೋಳ ಬಿತ್ತನೆ ಮುಗಿಯುತ್ತಿತ್ತು. ಆದರೆ, ಭೂಮಿ ಸಿದ್ಧಪಡಿಸುವುದೇ ದೊಡ್ಡ ಸವಾಲಾಗಿದೆ. ಪ್ರವಾಹ ಹೊತ್ತು ತಂದ ಕಸ, ಜಾಲಿಮರಗಳು ಹಾಗೂ ಇನ್ನಿತರ ಅವಶೇಷಗಳು ಹೊಲದ ತುಂಬಾ ಹರಡಿವೆ. ಇದರ ಜೊತೆಗೆ ಭೂಮಿ ಹಸಿ ಇದ್ದು, ಬಿತ್ತನೆ ಸಾಧ್ಯವಾಗುತ್ತಿಲ್ಲ. ಜೋಳ ಬಿತ್ತನೆ ಸಮಯ ಮುಗಿದು ಹೋದರೆ ಹೇಗೆಂಬ ಚಿಂತೆ ಕಾಡುತ್ತಿದೆ' ಎನ್ನುವುದು ಎಂದು ಹಲವು ರೈತರ ಅಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT