ಕಲಬುರಗಿ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಗುರುವಾರ ಅಫಜಲಪುರ ತಾಲ್ಲೂಕಿನಲ್ಲಿ ಎರಡು ಸೇತುವೆಗಳು ಮುಳುಗಡೆಯಾಗಿವೆ. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿದೆ. ಆಗಸ್ಟ್ 5ರಂದು ಒಂದು ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಭೀಮಾ ನದಿಗೆ ಹರಿಸಲಾಗಿತ್ತು. ನದಿ ನೀರಿನ ಮಟ್ಟ ಹೆಚ್ಚಳವಾಗಿ ಘತ್ತರಗಾ–ಜೇರಟಗಿ ಮತ್ತು ಗಾಣಗಾಪುರ–ಇಟಗಾ ನಡುವಿನ ಸೇತುವೆಗಳು ಮುಳುಗಡೆಯಾಗಿವೆ. ಬ್ಯಾರಿಕೇಡ್ ಹಾಕಿ ಎರಡು ದಿನಗಳ ಮಟ್ಟಿಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನದಿ ತೀರದ ಅಫಜಲಪುರ ತಾಲ್ಲೂಕಿನ ಶಿವಪುರ ಹಾಗೂ ಹಾವಳಗಿ ಗ್ರಾಮಗಳ ಜಮೀನಿಗಳಿಗೆ ನೀರು ನುಗ್ಗಿದೆ. ತೊಗರಿ, ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ಪ್ರವಾಹಕ್ಕೆ ಸಿಲುಕಿ ನದಿ ದಡದಲ್ಲಿನ ಕೃಷಿ ಪಂಪ್‌ಸೆಟ್‌ಗಳು ಕೊಚ್ಚಿ ಹೋಗಿವೆ. ನದಿ ತೀರದ ಗ್ರಾಮಗಳಲ್ಲಿ ಆತಂಕ ಮೂಡಿದೆ.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ನದಿ ತೀರಕ್ಕೆ ಭೇಟಿ ನೀಡಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊಪ್ಪಳ ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ಗುರುವಾರ ಉತ್ತಮವಾಗಿ ಮಳೆಯಾಗಿದೆ. ಜೋರಾಗಿ ಮಳೆ ಸುರಿದ ಖುಷಿಗೆ ತಾಲ್ಲೂಕಿನ ಹಲವಾಗಲಿ ಗ್ರಾಮದ ರೈತನೊಬ್ಬ ಮಳೆಯ ನೀರಿನಲ್ಲಿಯೇ ಉರುಳಾಡಿ ಖುಷಿಪಟ್ಟಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಕಲಬುರಗಿಯ ಅಫಜಲಪುರ ತಾಲ್ಲೂಕಿನ ಗಾಣಗಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಇಟಗಾ ನಡುವಿನ ಭೀಮಾ ನದಿ ಸೇತುವೆ ಮುಳುಗಡೆಯಾಗಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್