ಮಂಗಳವಾರ, ಅಕ್ಟೋಬರ್ 20, 2020
26 °C
ಕಲಬುರ್ಗಿಯಲ್ಲಿ ಸ್ಥಾಪನೆಗೆ ಕೇಂದ್ರ ಸರ್ಕಾರ ಕ್ರಮ

ಕಲಬುರ್ಗಿ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ ವಿಮಾನ ಚಾಲನೆ ತರಬೇತಿ ಕೇಂದ್ರ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ವಿಮಾನ ಹಾರಾಟ ತರಬೇತಿ ಸಂಸ್ಥೆಯ ಆರಂಭಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರಸ್ತುತ ರಾಜ್ಯದ ಬೆಂಗಳೂರು ಹಾಗೂ ಪಕ್ಕದ ತೆಲಂಗಾಣದ ಹೈದರಾಬಾದ್‌ನಲ್ಲಿ ಮಾತ್ರ ಪೈಲಟ್‌ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ವಿಮಾನಯಾನ ಕ್ಷೇತ್ರ ವಿಸ್ತಾರವಾಗುತ್ತಿರುವುದರಿಂದ ಪ್ರತಿವರ್ಷ ಹಲವು ಸಂಸ್ಥೆಗಳು ವಿಮಾನಯಾನ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿವೆ. ಹೀಗಾಗಿ, ಪೈಲಟ್‌ಗಳ ಅಗತ್ಯವೂ ಹೆಚ್ಚಾಗುತ್ತಿದೆ. ಇದನ್ನು ಗುರುತಿಸಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಕಲಬುರ್ಗಿ, ಬೆಳಗಾವಿ, ಜಲಗಾಂವ್, ಖಜುರಾಹೊ, ಲೀಲಾಬರಿ ಹಾಗೂ ಸೇಲಂ ಜಿಲ್ಲೆಗಳಲ್ಲಿ ವಿಮಾನ ತರಬೇತಿ ಕೇಂದ್ರಗಳನ್ನು ಆರಂಭಿಸಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತರಬೇತಿ ಸಂಸ್ಥೆಗಳಿಗೆ ಅವಕಾಶ ನೀಡಲಿದೆ. ಕೆಲವೇ ದಿನಗಳಲ್ಲಿ ಇದಕ್ಕಾಗಿ ಆಸಕ್ತ ವಿಮಾನ ತರಬೇತಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ‍ಎಎಐ ಅಧ್ಯಕ್ಷ ಅರವಿಂದ ಸಿಂಗ್ ದೆಹಲಿಯಲ್ಲಿ ತಿಳಿಸಿದ್ದಾರೆ.

2019ರಿಂದಲೇ ಪ್ರಯತ್ನ: ಸುಮಾರು 800 ಎಕರೆ ವಿಸ್ತಾರದಲ್ಲಿ ನಿರ್ಮಾಣವಾಗಿರುವ ಸೇಡಂ ರಸ್ತೆಯ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಸಂಸ್ಥೆಯನ್ನು ಆರಂಭಿಸಲು 2019ರ ಜನವರಿಯಲ್ಲೇ ಪ್ರಯತ್ನ ನಡೆದಿತ್ತು. ರಾಜ್ಯ ಸರ್ಕಾರವೇ ಈ ನಿಲ್ದಾಣವನ್ನು ಅಭಿವೃದ್ಧಿಪಡಿಸಿದ್ದರಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ವಿಮಾನ ಹಾರಾಟ ತರಬೇತಿ ಸಂಸ್ಥೆಗಳಿಂದ ಪ್ರಸ್ತಾವಗಳನ್ನು ಆಹ್ವಾನಿಸಿತ್ತು. ಹೈದರಾಬಾದ್‌ ಮೂಲದ ಜಿಎಂಆರ್‌ ಸೇರಿದಂತೆ ಎರಡು ಸಂಸ್ಥೆಗಳು ಇಲ್ಲಿ ಸಂಸ್ಥೆ ಆರಂಭಕ್ಕೆ ಆಸಕ್ತಿ ತೋರಿಸಿದ್ದವು. ಆದರೆ, ನಿಗಮವು ನಿಯಮಗಳಲ್ಲಿ ಮಾರ್ಪಾಟು ಮಾಡಿದ್ದರಿಂದ ಹಿಂದೆ ಸರಿದಿದ್ದವು. ನಂತರ ರಾಜ್ಯ ಸರ್ಕಾರ ಭೂಮಿ ಹಾಗೂ ಅಭಿವೃದ್ಧಿಪಡಿಸಿದ ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಿತ್ತು. ಇದೀಗ ಪ್ರಾಧಿಕಾರವೇ ಈ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿರುವುದರಿಂದ ಪೈಲಟ್‌ ಆಗುವ ನಿರೀಕ್ಷೆಯಲ್ಲಿರುವ ಈ ಭಾಗದ ಯುವಕ, ಯುವತಿಯರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದಂತಾಗಿದೆ.

ಅಲ್ಲದೇ, ಕಲ್ಯಾಣ ಕರ್ನಾಟಕ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಪೈಲಟ್‌ ಆಗಲು ಬಯಸುವವರೂ ಇಲ್ಲಿ ತರಬೇತಿ ಪಡೆಯಬಹುದಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಕೆಲಸ ಮಾಡಲು 9,488 ಪೈಲಟ್‌ಗಳು ಬೇಕಾಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್‌ ಇಂಡಿಯಾ, ಇಂಡಿಗೊ, ವಿಸ್ತಾರ, ಸ್ಪೈಸ್‌ಜೆಟ್, ಗೋಏರ್‌, ಸ್ಟಾರ್‌ ಏರ್‌ ಸಂಸ್ಥೆಗಳು ಪೈಲಟ್‌ಗಳ ಕೊರತೆಯನ್ನು ಎದುರಿಸುತ್ತಿವೆ. ಕೊರೊನಾ ಸೋಂಕು ಕಡಿಮೆಯಾದ ಬಳಿಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಶುರುವಾಗಲಿದ್ದು, ಆ ಸಂದರ್ಭದಲ್ಲಿ ಹೆಚ್ಚಿನ ಪೈಲಟ್‌ಗಳ ಅವಶ್ಯಕತೆ ಇದೆ. ಹೀಗಾಗಿ, ವಿಮಾನ ನಿಲ್ದಾಣ ಪ್ರಾಧಿಕಾರ ಈಗಾಗಲೇ ಇರುವ ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ಜೊತೆಗೆ ಆರು ಕಡೆ ವಿಮಾನಯಾನ ತರಬೇತಿ ಸಂಸ್ಥೆಗಳನ್ನು ಆರಂಭಿಸಲು ಅವಕಾಶ ನೀಡಲಿದೆ.

ಮೊದಲ ವಿಮಾನ ಇಳಿಸಿದ್ದ ಬೀದರ್‌ ಪೈಲಟ್

ಕಲಬುರ್ಗಿಯ ವಿಮಾನ ನಿಲ್ದಾಣದಲ್ಲಿ ಮೊದಲ ವಾಣಿಜ್ಯ ವಿಮಾನವನ್ನು ಇಳಿಸಿದ ಪೈಲಟ್‌ಗಳ ಪೈಕಿ ಒಬ್ಬರು ಬೀದರ್‌ ಜಿಲ್ಲೆಯವರು. ಬೀದರ್‌ನ ಹೃಷಿಕೇಶ ಪಾಟೀಲ 2019ರ ನವೆಂಬರ್‌ 23ರಂದು ಸ್ಟಾರ್‌ ಏರ್‌ ಸಂಸ್ಥೆಯ ವಿಮಾನವನ್ನು ಬೆಂಗಳೂರಿನಿಂದ ಹಾರಿಸಿಕೊಂಡು ಬಂದು ಕಲಬುರ್ಗಿ ನಿಲ್ದಾಣದ ರನ್‌ವೇನಲ್ಲಿ ಯಶಸ್ವಿಯಾಗಿ ಇಳಿಸಿದ್ದರು. ಅದನ್ನು ಗಮನಿಸಿದ್ದ ಯುವಕ, ಯುವತಿಯರಿಗೆ ಪೈಲಟ್ ಆಗುವ ಕನಸು ಮೊಳಕೆಯೊಡೆದಿತ್ತು. ಅದೀಗ ನನಸಾಗುತ್ತಿದೆ.

ಲೀಲಾಬರಿಯಲ್ಲಿ ಕನ್ನಡಿಗ ಅಧಿಕಾರಿ

ವಿಮಾನ ಹಾರಾಟ ತರಬೇತಿ ಸಂಸ್ಥೆ ಆರಂಭಿಸಲು ಆಯ್ಕೆಯಾದ ವಿಮಾನ ನಿಲ್ದಾಣಗಳ ಪೈಕಿ ಒಂದಾದ ಅಸ್ಸಾಂನ ಲಖೀಂಪುರ ಜಿಲ್ಲೆಯ ಲೀಲಾಬರಿ ವಿಮಾನ ನಿಲ್ದಾಣದ ನಿರ್ದೇಶಕರಾಗಿರುವವರು ಕನ್ನಡಿಗ ಶಿವಾನಂದ ಬೇನಾಳ. ಇತ್ತೀಚೆಗೆ ಅಲ್ಲಿ ವಿಮಾನಗಳ ವಾಣಿಜ್ಯ ಹಾರಾಟ ನಿಂತು ಹೋಗಿತ್ತು. ಹೀಗಾಗಿ, ಅಲ್ಲಿ ವಿಮಾನ ಹಾರಾಟ ತರಬೇತಿ ಸಂಸ್ಥೆ ತೆರೆದರೆ ಅಸ್ಸಾಂನ ಆಸಕ್ತರಿಗೆ ಅನುಕೂಲವಾಗಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು