ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟನಾಶಕ ಬಳಸಿದರೆ ಅಪಾಯ ತಪ್ಪದು: ಗೋಪಾಲಭಾಯಿ ಸುತಾರಿಯಾ

ಸಮರ್ಥ ಗೋಭಕ್ತರ ಸಮಾಗಮ ಮತ್ತು ಉಪನ್ಯಾಸ
Last Updated 19 ಏಪ್ರಿಲ್ 2021, 3:27 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅತಿಯಾದ ಕೀಟನಾಶಕ ಬಳಕೆಯಿಂದ ಹಲವು ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಕೀಟನಾಶಕ ಬಳಕೆ ನಿಲ್ಲಿಸಿದರೆ ಮಾತ್ರ ಮನುಷ್ಯನ ಆರೋಗ್ಯ ಸದೃಢವಾಗುತ್ತೆ. ದೇಶದ ರೈತರು ಸಹ ನಷ್ಟ ಹೊಂದುವುದು ತಪ್ಪುತ್ತದೆ’ ಎಂದು ಗುಜರಾತಿನ ಬನ್ನಿ ಘೀರ್‌ ಗೋಶಾಲೆ ಮುಖ್ಯಸ್ಥ ಗೋಪಾಲಭಾಯಿ ಸುತಾರಿಯಾ ಸಲಹೆ ನೀಡಿದರು.

ಆಳಂದ ತಾಲ್ಲೂಕಿನ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದಲ್ಲಿ ಕಲಬುರ್ಗಿಯ ವಿಕಾಸ ಅಕಾಡೆಮಿ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ಅವರಾದ(ಬಿ) ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಸಮರ್ಥ ಗೋಭಕ್ತರ ಸಮಾಗಮ ಮತ್ತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗೋಕೃಪಾಮೃತವನ್ನು ಕೀಟನಾಶಕದಂತೆ ಬಳಸಲು ಎಲ್ಲರೂ ಮುಂದೆ ಬರಬೇಕು. ಸಾವಯವ ಬೆಲ್ಲ, ಆಕಳ ಹಾಲಿನ ಮೊಸರು ಜತೆಗೆ ಮಜ್ಜಿಗೆಯಿಂದ ಗೋಕೃಪಾಮೃತ ತಯಾರಿಸಬಹುದಾಗಿದೆ. ತರಕಾರಿಗಳಿಗೆ ಅತಿಯಾದ ಕೀಟನಾಶಕ ಬಳಕೆಯಿಂದ ಕ್ಯಾನ್ಸರ್ ಸೇರಿ ಇತರ ಹತ್ತಾರು ರೋಗಗಳು ದಾಳಿ ಮಾಡುತ್ತವೆ’ ಎಂದರು.

‘ದೇಶದಲ್ಲಿ ಈಗ ₹ 11 ಲಕ್ಷ ಕೋಟಿ ಮೊತ್ತದ ಕೀಟನಾಶಕ ಬಳಕೆ ಮಾಡಲಾಗುತ್ತಿದೆ. ಇದನ್ನೆಲ್ಲ ದೂರ ಮಾಡಿ ಗೋಕೃಪಾಮೃತ ಬಳಸಿದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಜತೆಗೆ ಆರ್ಥಿಕವಾಗಿ ತೊಂದರೆಗೆ ಒಳಗಾಗುವುದು ತಪ್ಪುತ್ತದೆ’ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಸೇಡಂ, ರಾಜಶೇಖರ ಸ್ವಾಮೀಜಿ ಮಾತನಾಡಿದರು. ಶ್ರೀಶೈಲ ಬದಾಮಿ ಧಾರವಾಡ, ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಸವರಾಜ ಮಾಡಗಿ, ಕಾರ್ಯದರ್ಶಿ ಶಿವಾನಂದ ಗುಡ್ಡಾ, ವಿ.ಶಾಂತರೆಡ್ಡಿ, ವಿಶ್ರಾಂತ ಕುಲಪತಿಗಳಾದ ಡಾ.ಎಸ್.ಎ.ಪಾಟೀಲ, ಡಾ.ರಾಜೇಂದ್ರ ಯರನಾಳ ಇದ್ದರು. ಗೋಭಕ್ತ ಸಮಾಗಮ ಅಂಗವಾಗಿ ವಿವಿಧ ಗೋಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT