ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ತಾ.ಪಂ ಸದಸ್ಯರು, ಇಂದು ಗ್ರಾ.ಪಂ ಸದಸ್ಯರು

ದೇಗಲಮಡಿ ಗ್ರಾಮದಲ್ಲಿ ಟಾಸ್ ಮೂಲಕ ವಿಜೇತರ ಗೆಲುವು ಘೋಷಣೆ, ಸೋತ ಅಭ್ಯರ್ಥಿಗಳಿಗೆ ಕೈ ಹಿಡಿದ ಮೀಸಲಾತಿ
Last Updated 31 ಡಿಸೆಂಬರ್ 2020, 10:03 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ಫಲಿತಾಂಶ ಪ್ರಕಟವಾಗಿದೆ. ಚಿಂಚೋಳಿ ತಾಲ್ಲೂಕು ಪಂಚಾಯಿತಿಯ ಸದಸ್ಯ ವೆಂಕಟರೆಡ್ಡಿ ಸಾಯಿರೆಡ್ಡಿ ಅವರು ಜಟ್ಟೂರು ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭೀಮರಾವ್ ಹೂಗಾರ ಘೋಷಿಸಿದರು.

ಐನಾಪುರ ಗ್ರಾಮ ಪಂಚಾಯಿತಿಗೆ ಭೂಂಯಾರ(ಕೆ) ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಮಲಾಪುರ ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮ್ಲಿಬಾಯಿ ಬನ್ಸಿಲಾಲ್ ಗೆಲುವಿನ ನಗೆ ಬೀರಿದ್ದಾರೆ.

ಈ ಇಬ್ಬರು ಕಾಂಗ್ರೆಸ್ ಬೆಂಬಲಿತರು. ವೆಂಕಟರೆಡ್ಡಿ ಅವರು ಡಾ. ಶರಣಪ್ರಕಾಶ ಪಾಟೀಲ ಬೆಂಬಲಿಗರಾದರೆ, ಉಮ್ಲಿಬಾಯಿ ಬನ್ಸಿಲಾಲ್ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ಬೆಂಬಲಿಗರಾಗಿದ್ದಾರೆ. ಮತ್ತೊಬ್ಬ ತಾಲ್ಲೂಕು ಪಂಚಾಯಿತಿ ಸದಸ್ಯ ಜಗನ್ನಾಥ ಈದಲಾಯಿ ಅವರು ತಮ್ಮ ಸ್ವಗ್ರಾಮ ಕಲ್ಲೂರು ರೋಡ್ ಗ್ರಾಮದಲ್ಲಿ ಪತ್ನಿ ಜಗದೇವಿ ಜಗನ್ನಾಥ ಈದಲಾಯಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಜಗದೇವಿ ಜಗನ್ನಾಥ ಈದಲಾಯಿ ಅವರು ಹಿಂದಿನ ಅವಧಿಗೆ ಸೋಮಲಿಂಗದಳ್ಳಿ ಗ್ರಾಮದಿಂದ ಗೆದ್ದಿದ್ದರು. ಈಗ ಎರಡನೇ ಬಾರಿಗೆ ಅವರು ಗೆಲುವು ಸಾಧಿಸಿದ್ದಾರೆ.

ಪತಿ ಜಗನ್ನಾಥ ಈದಲಾಯಿ ಅವರ ಗೆಲುವಿಗೆ ಸೋಮಲಿಂಗದಳ್ಳಿ ಜನ ಕೈ ಹಿಡಿದರೆ, ಈ ಬಾರಿ ಪತ್ನಿ ಗೆಲುವಿಗೆ ಕಲ್ಲೂರು ರೋಡ್ ಗ್ರಾಮದ ಜನರು ಕೈ ಹಿಡಿದಿದ್ದಾರೆ. ಇದೇ ಪಂಚಾಯಿತಿಯಲ್ಲಿ ರವಿಶಂಕರ ಶರಣಪ್ಪ 326 ಮತ ಪಡೆದು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು. ಇಲ್ಲಿ ರಾಜಕುಮಾರ ಭೀಮಶಾ ಅವರು 325 ಮತಗಳು ಪಡೆದು ಪರಾಭವಗೊಂಡರು.

ಪುತ್ರನ ಸೋಲು; ಸೋತು ಗೆದ್ದ ತಾಯಿ: ದೇಗಲಮಡಿ ಗ್ರಾ.ಪಂ ನೀಮಾ ಹೊಸಳ್ಳಿ ಗ್ರಾಮದಿಂದ ತಾಯಿ ಘಾಸಿಬಿ ಲಾಲ ಅಹಮದ್ ಹಾಗೂ ಮಗ ಮಹಮದ್ ರಹಿಮತ ಪಾಶಾ ಲಾಲ್ ಅಹಮದ್ ಸ್ಪರ್ಧಿಸಿದ್ದರು. ಇದರಲ್ಲಿ ಪುತ್ರನಿಗೆ ಸೋಲಾಗಿದೆ. ತಾಯಿ ಘಾಸಿಬಿ ಸೋತು ಗೆಲುವು ಸಾಧಿಸಿದರು. ಸಾಮಾನ್ಯ ಮಹಿಳೆ ಸ್ಥಾನಕ್ಕೆ ಸ್ಪರ್ಧಿಸಿದ್ದ ರಿಜವಾನಾ ಬೇಗಂ 394 ಮತ ಗಳಿಸಿ ಗೆಲುವು ಸಾಧಿಸಿದರೆ, ಘಾಸಿಬಿ ಲಾಲ ಅಹಮದ್ 381 ಮತ ಗಳಿಸಿ ಪರಾಭವಗೊಂಡಿದ್ದರು. ಆದರೆ ಪರಾಭವಗೊಂಡ ಘಾಸಿಬಿ ಲಾಲಹಮದ್ ಅವರು ಸಾಮಾನ್ಯ ಕ್ಷೇತ್ರದಲ್ಲಿದ್ದ ಉಮೇದುವಾರರಗಿಂತ ಅಧಿಕ ಮತ ಗಳಿಸಿದ್ದರಿಂದ ಚುನಾವಣಾಧಿಕಾರಿ ಕಿಶನ ಅವರು ಘಾಸಿಬಿ ಗೆಲುವು ಘೋಷಿಸಿದರು.

ದೇಗಲಮಡಿ ಗ್ರಾಮದಲ್ಲಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಈರಮ್ಮ ನಾಗಪ್ಪ ರಾಚೋಟಿ ಮತ್ತು ಚಂದ್ರಕಲಾ ಜಗನ್ನಾಥರೆಡ್ಡಿ ಅವರು ತಲಾ 349 ಮತ ಗಳಿಸಿದ್ದರು. ಆಗ ಟಾಸ್ ಹಾರಿಸಲಾಯಿತು. ಇದರಲ್ಲಿ ಈರಮ್ಮ ನಾಗಪ್ಪ ಗೆಲುವು ಸಾಧಿಸಿದರು.

ವರವಾದ ಬಿಸಿಬಿ ಮೀಸಲು: ಗಾರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡನಹಳ್ಳಿ ಗ್ರಾಮದ ಬಿಸಿಬಿ ಮೀಸಲು ಕ್ಷೇತ್ರದಲ್ಲಿ ಲಕ್ಷ್ಮಿಕಾಂತ ಶಂಕುರ ಹಾಗೂ ರವಿ ಅಲ್ಲಾಪುರ ಸ್ಪರ್ಧಿಸಿದ್ದರು. ಲಕ್ಷ್ಮಿಕಾಂತ 298 ಮತ ಗಳಿಸಿ ಗೆದ್ದರೆ ಇಲ್ಲಿ 287 ಮತ ಪಡೆದು ಸೋತ ರವಿ ಅಲ್ಲಾಪುರ ಸಾಮಾನ್ಯ ಸ್ಥಾನದ ಉಮೇದುವಾರರಲ್ಲಿ ಇಸ್ಮಾಯಿಲ್ ಮುಲ್ಲಾ ಗರಿಷ್ಠ 268 ಮತ ಪಡೆದಾಗ 287 ಮತ ಪಡೆದು ಸೋತಿದ್ದ ರವಿ ಸಾಮಾನ್ಯ ಸ್ಥಾನಕ್ಕೆ ಆಯ್ಕೆಯಾಗಿ ಗೆಲುವಿನ ನಗೆ ಬೀರಿದರು. ಆದರೆ ಸಾಮಾನ್ಯ ಸ್ಥಾನಕ್ಕೆ ಹೆಚ್ಚು ಮತ ಪಡೆದರೂ ಇಸ್ಮಾಯಿಲ್ ಸೋಲಿನ ಕಹಿ ಅನುಭವಿಸುವಂತಾಯಿತು.

ಸೋತು ಗೆದ್ದ ಅಭ್ಯರ್ಥಿ: ಚಿಮ್ಮನಚೋಡ ಗ್ರಾ.ಪಂ ವಾರ್ಡ್‌ 3ರಲ್ಲಿ ಪರಿಶಿಷ್ಟ ಜಾತಿ ಮಹಿಳಾ ಸ್ಥಾನದಲ್ಲಿ ರುಕ್ಮಾಬಾಯಿ ಶಂಕರ 361 ಮತ ಪಡೆದು ಗೆಲುವು ಸಾಧಿಸಿದರೆ, ಎದುರಾಳಿ ಅನಿತಾ ರಾಜು 301 ಮತ ಗಳಿಸಿ ಸೋತಿದ್ದರು. ಆದರೆ ಇವರು ಸಾಮಾನ್ಯ ಮಹಿಳೆ ಸ್ಥಾನದಲ್ಲಿ ಇಬ್ಬರು ಗೆಲ್ಲಬೇಕಿತ್ತು. ಅನಿತಾ ರಾಜು ಸಾಮಾನ್ಯ ಸ್ಥಾನಕ್ಕೆ ಗರಿಷ್ಠ ಮತ ಪಡೆದಿದ್ದರಿಂದ ಗೆದ್ದರು. ಇನ್ನೊಂದು ಸ್ಥಾನಕ್ಕೆ ಸನ್ರಿನ್ ಅರ್ಷದ್ 289 ಮತ ಪಡೆದು ಗೆಲುವಿನ ನಗೆ ಬೀರಿದರು.

ನಿಡಗುಂದಾ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಜಿ.ಪಂ ಸದಸ್ಯ ಶಿವಶರಣಪ್ಪ ಶಂಕರ ಅವರ ಸಹೋದರ ಮಂಜುನಾಥ ಗೆಲುವು ಸಾಧಿಸಿದರೆ, ಚಿಕ್ಕಪ್ಪನ ಮಗ ಸಂಜೀವಕುಮಾರ ದೇವೇಂದ್ರಪ್ಪ ಡೊಂಗರಗಾಂವ್ ಐನಾಪುರ ಗ್ರಾ.ಪಂ.ಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT