ಶನಿವಾರ, ಮೇ 28, 2022
24 °C
ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ದರ್ಗಾ– ದೇವಸ್ಥಾನ ವಿವಾದ ಇತ್ಯರ್ಥ, ಪರಸ್ಪರ ಸಿಹಿ ಹಂಚಿದ ಮುಖಂಡರು

ಹಿಂದೂ– ಮುಸ್ಲಿಮರ ಸಂಧಾನ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಂಟನೂರು(ಆಳಂದ): ತಾಲ್ಲೂಕಿನ ಸೂಂಟನೂರು ಗ್ರಾಮದಲ್ಲಿ ಶುಕ್ರವಾರ ಹಜರತ್ ಬಾವಾ ಫಕ್ರುದ್ದೀನ್ ದರ್ಗಾ ಸಮಿತಿ ಮತ್ತು ಭಾನುಮತಿ ದೇವಸ್ಥಾನ ಸಮಿತಿ ಸದಸ್ಯರ ನಡುವಿನ ವಿವಾದ ಗ್ರಾಮಸ್ಥರ ಸಮ್ಮುಖದಲ್ಲಿ ಇತ್ಯರ್ಥ ಆಯಿತು. ನಂತರ ಹಿಂದೂ–ಮುಸ್ಲಿಮರು ಪರಸ್ಪರ ಸಿಹಿ ಹಂಚಿ ಸಂಧಾನಕ್ಕೆ ಸಹಮತ ವ್ಯಕ್ತಪಡಿಸಿದರು.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಮಂಜುನಾಥ ಹಾಗೂ ಜಿಲ್ಲಾ ವಕ್ಪ್ ಮಂಡಳಿ ಅಧಿಕಾರಿ ಅಲಿ ಅಹಮದ್ ಅವರು ಸಂಧಾನ ಸಭೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮದಲ್ಲಿನ ಬಾವಾ ಫಕ್ರುದ್ದಿನ್ ದರ್ಗಾ ಮತ್ತು ಭಾನುಮತಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಲವು ವರ್ಷದಿಂದ ಗ್ರಾಮದಲ್ಲಿ ವಿವಾದ ಇತ್ತು. ಕಳೆದ ವರ್ಷ ಕಲಬುರ್ಗಿ ಉಪವಿಭಾಗಾಧಿಕಾರಿಯವರ ಸುಪರ್ಧಿಯಲ್ಲಿ ಪೂಜೆ ಮತ್ತಿತರ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದವು. ಹೀಗಾಗಿ ಇಂದಿನ ಸಭೆಯು ಸಹಜವಾಗಿ ಕುತೂಹಲ ಕೆರಳಿಸಿತು. ಮುಂಜಾಗ್ರತಾ ಕ್ರಮವಾಗಿ ಅಧಿಕ ಸಂಖ್ಯೆಯಲ್ಲಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಗ್ರಾಮಸ್ಥರ ಸಭೆ ನಡೆಯಿತು.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮಾತನಾಡಿ, ‘ಹಿಂದೂ, ಮುಸ್ಲಿಮರಿಗೆ ದರ್ಗಾ, ದೇವಸ್ಥಾನದ ಪೂಜೆ, ಆಚರಣೆಗಳಲ್ಲಿ ಮುಕ್ತ ಅವಕಾಶವಿದೆ. ದರ್ಗಾ ಆಡಳಿತವು ವಕ್ಫ್‌  ಮಂಡಳಿ ಸಮಿತಿ ನಿರ್ವಹಿಸಲಿದೆ. ಭಾನುಮತಿ ದೇವಸ್ಥಾನದ ಆಚರಣೆ, ಆಡಳಿತವು ಹಿಂದೂಗಳಿರುವ ಸಮಿತಿ ನಿರ್ವಹಿಸಲಿದೆ’ ಎಂದರು.

ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಮಾತನಾಡಿ, ‘ಗ್ರಾಮದಲ್ಲಿ ಯಾವುದೇ ಧಾರ್ಮಿಕ ವೈಮನಸ್ಸುಗಳಿಗೆ ಅವಕಾಶ ಬೇಡ. ಪರಸ್ಪರ ಸಹಿಷ್ಣುತೆ ಗುಣ ಬೆಳೆಸಿಕೊಂಡಾಗ ಮಾತ್ರ ಗ್ರಾಮಗಳಲ್ಲಿ ನೆಮ್ಮದಿ, ಶಾಂತಿ ನೆಲೆಸುವುದು’ ಎಂದರು.

ವಕ್ಫ್ ಮಂಡಳಿ ಜಿಲ್ಲಾಧಿಕಾರಿ ಹಜರತ್ ಅಲಿ, ಸಿಪಿಐ ಮಂಜುನಾಥ, ಪಿಎಸ್ಐಗಳಾದ ಉದ್ದಂಡಪ್ಪ, ಮಹಾಂತೇಶ ಪಾಟೀಲ, ಸುವರ್ಣಾ ಮಲಶೆಟ್ಟಿ, ಇಂದುಮತಿ, ಗ್ರಾಮದ ಪ್ರಮುಖರಾದ ಜನಾರ್ಧನ ದೇಶಪಾಂಡೆ, ಶಿವಪುತ್ರ ನ್ಯಾಮನ್, ಇಮಾಮಸಾಬ ಮುಜಾವರ್, ಬಾಬುರಾವ ಪಾಣೇಗಾಂವ, ಅರ್ಜುನ ವಗ್ಗನ್, ನಾಗೇಶ ಬಿರಾದಾರ, ಕಂದಾಯ ನಿರೀಕ್ಷಕ ಅನೀಲ ಸೇರಿದಂತೆ ಹಲವು ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು