ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನವೇ ನಮ್ಮ ಧರ್ಮವಾಗಲಿ: ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ

ಡಾ.ಬಿ.ಆರ್.ಜಯಂತಿ ಸರಳ ಆಚರಣೆ, ಪುತ್ಥಳಿಗೆ ಮಾಲಾರ್ಪಣೆ
Last Updated 14 ಏಪ್ರಿಲ್ 2021, 11:55 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆ ಮತ್ತು ನಗರದಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಬುಧವಾರ ಆಚರಣೆ ಮಾಡಲಾಯಿತು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಎಸ್‌ಸಿ, ಎಸ್‌ಟಿ ನೌಕರರ ಸಂಘದ ವತಿಯಿಂದ ನಗರದ ಜಗತ್‌ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ‘ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆಯನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಅಂಬೇಡ್ಕರ್ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತಾಗುತ್ತದೆ. ಸಂವಿಧಾನವೇ ನಮ್ಮ ಧರ್ಮ, ಧ್ಯೇಯವಾಗಲಿ’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್‌ ಅವರು ಸಂವಿಧಾನವನ್ನು ರಚನೆ ಮಾಡುವ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದಾರೆ. ನಾವೆಲ್ಲರೂ ಅವರ ಹಾಕಿಕೊಟ್ಟ ಮರ್ಗದಲ್ಲಿ ನಡೆಯುವ ಮೂಲಕ ಬಡವರು, ತುಳಿತಕ್ಕೊಳಗಾದವರನ್ನು ಮೇಲೆತ್ತುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಪ್ರಸ್ತುತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಅಂಬೇಡ್ಕರ್ ಅವರಿಗೆ ನಿಜವಾಗಿಯೂ ನಮನ ಸಲ್ಲಿಸಿದಂತಾಗುತ್ತದೆ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸು ನನಸು ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನವನ್ನು ಕಾಪಾಡುವ ಅನಿವಾರ್ಯತೆ ಈಗ ಬಂದಿದೆ. ಈ ಬಗ್ಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜಯಂತಿ ಆಚರಣೆ ಮಾಡುವ ಜತೆಗೆ, ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಂವಿಧಾನದ ಆಶಯಗಳನ್ನು ಜಾರಿಗೆ ತರಬೇಕು ಎಂದರು.

ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಆರ್ಥಿಕ, ಸಾಮಾಜಿಕ ನ್ಯಾಯ ಕೊಡಿಸಲು, ಸ್ವಾಭಿಮಾನದ ಬದುಕು ಕಲ್ಪಿಸಲು ಕೆಲಸ ಮಾಡಬೇಕು. ಜಯಂತಿ ಆಚರಣೆ ಮಾಡಿದರೆ ಸಾಲದು. ಅವರ ಮೌಲ್ಯಗಳನ್ನು ಉಳಿಸಲು ಶ್ರಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಬುದ್ಧ ವಿಹಾರದ ಸಂಗಾನಂದ ಭಂತೇಜಿ ನೇತೃತ್ವದಲ್ಲಿ ಬುದ್ಧ ವಂದನೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಅವರು ಪಂಚಶೀಲ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಂ ಜಾರ್ಜ್‌ ಅವರು ನೀಲಿ ಧ್ವಜಾರೋಹಣ ನೆರವೇರಿಸಿದರು.

ಪೌರಕಾರ್ಮಿಕರಿಗೆ ಮಾಸ್ಕ್ ವಿತರಿಸಲಾಯಿತು. ಮುಖಂಡರಾದ ವಿಠ್ಠಲ ದೊಡ್ಡಮನಿ, ಅಲ್ಲಮಪ್ರಭು ಪಾಟೀಲ, ಜಿಲ್ಲಾ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಮದನಕರ್, ಪ್ರಧಾನ ಕಾರ್ಯದರ್ಶಿ ಬಾಬು ಮೋರೆ, ಕಾರ್ಯದರ್ಶಿ ಮಹೇಶ ಹುಬ್ಬಳ್ಳಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಔರಾದಕರ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಮುಖಂಡರಾದ ಗುಂಡಪ್ಪ‌ ಲಂಡನಕರ್, ದಶರಥ‌ ಒಂಟಿ, ಪಾಲಿಕೆ ಅಧಿಕಾರಿಗಳು ಇದ್ದರು.

ಸಂಸದ ಡಾ.ಉಮೇಶ ಜಾಧವ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಡಾ.ಅಜಯಸಿಂಗ್, ಪ್ರಿಯಾಂಕ್ ಖರ್ಗೆ, ಬಸವರಾಜ ಮತ್ತಿಮೂಡ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಸುವರ್ಣಾ ಮಲಾಜಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾ ಪಂಚಾಯಿತಿ ಸಿಇಒ ದಿಲೀಶ್‌ ಸಾಸಿ, ಸೂರ್ಯಕಾಂತ, ಕಿಶೋರ ಕುಮಾರ ದುಬೆ, ಮಹಾದೇವ ಬಿ., ರಮೇಶ ಸುಲ್ಪಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT