ಬಾಲ್ಯದ ನಮ್ಮೂರು ಕಡಕೋಳ ಮಡಿವಾಳಪ್ಪ ಮುತ್ಯಾನ ಜಾತ್ರೆಯೆಂದರೆ ನಮಗೆಲ್ಲ ಹಂಡೆ ಹಾಲುಹುಗ್ಗಿ ಉಂಡ ಖಂಡುಗ ಖಂಡುಗ ಖುಷಿ. ಜಾತ್ರೆಗೆ ತಿಂಗಳೊಪ್ಪತ್ತು ಮೊದಲೇ ಊರಿಗೂರೇ ಸಿಂಗಾರವಾಗುವ ಸಂಭ್ರಮದ ಸಿದ್ಧತೆಗಳು. ಅಪ್ಪ ತರುವ ಯಡ್ರಾಮಿ ಸಂತೆ ಗುಡಾರದಂಗಡಿಯ ಹೊಸ ಅಂಗಿಯಿಂದ ಹಿಡಿದು ಮಠಕ್ಕೆ ಅವ್ವ ಮಾಡಿಕೊಡುವ ಸಜ್ಜೆಹಿಟ್ಟಿನ ರೊಟ್ಟಿವರೆಗೆ ಎಡಬಿಡದ ಸಡಗರಗಳು. ಊರುತುಂಬಾ ಎಲ್ಲರ ಮನೆ ಮನಗಳಲ್ಲೂ ಹಿಗ್ಗು ಹಿಗ್ಗಿನ ಬುಗ್ಗೆಗಳು.

ಗವಿ ಭೀಮಾಶಂಕರ ಅವಧೂತರ ಗವಿ ಗದ್ದುಗೆ ಮುಂದಿನ ಧುನಿಯ ಏಕತಾರಿ ನಾದಮೇಳದ ಸಂಪ್ರೀತಿ ಉಕ್ಕಿಸುವ ಉಮೇದುಗಳು, ಹೊರ ರಾಜ್ಯಗಳಿಂದಲೂ ಆಗಮಿಸಿದ ಸಾಧು ಸಂತ ಮಹಾರಾಜರುಗಳ ತತ್ಪಪದಗಳ ಭಜನೆ, ಖಾಂಡದ ರಾತ್ರಿ ಜರುಗುವ ಶಕ್ತಿ ದೇವತೆ ಬನ್ನಿ ಮಹಾಂಕಾಳಿಯ ಅಗ್ರಪೂಜೆ. ಮರುದಿನ ಮುಂಜಾನೆ ಪುರವಂತರಾಟ. ಪಾಲಕಿ ಉತ್ಸವದೊಂದಿಗೆ ಅಗ್ಗಿ ತುಳಿಯುವ, ಸಂಜೆಯ ಗೋಧೂಳಿಯಲಿ ತೇರು ಎಳೆಯುವ ದಾಂಗುಡಿಯ ಧಾವಂತಗಳು, ರಾಜಕಾರಣಿಗಳು, ಹರಗುರು ಚರಮೂರ್ತಿಗಳ ಧರ್ಮಸಭೆ. ಸಾಹಿತಿ, ಪುರಾಣಿಕರ ಪ್ರವಚನಗಳು. ಆಹೋರಾತ್ರಿ ಭಜನೆ, ತತ್ವಪದಗಳ ಶಾಸ್ತ್ರೀಯ ಸಂಗೀತದ ಆರೋಗಣೆ, ಸೇವು ಮಂಡಾಳದ ಫಳಾರ, ಸಕ್ಕರಿ ಸಿಣ್ಣಿ, ಬೆಲ್ಲದ ಜಿಲೇಬಿ, ಬೆಂಡು ಬತ್ತಾಸಿನ ಹಿಂಡು ಹಿಂಡು ಅಂಗಡಿಗಳು. ಥ್ರೀಡಿ ಎಫೆಕ್ಟಿನ ಮೂಕ ಸಿನೆಮಾದ ಗರ್ದಿಗಮ್ಮತ್ತು... ಹೀಗೆ ಒಂದೆರಡಲ್ಲ ಹತ್ತುಹಲವು ಸಹಸ್ರ ಸಹಸ್ರ ಸಿರಿಸಂಭ್ರಮ, ಸಡಗರಗಳ ಸರಮಾಲೆಯೇ ನಮ್ಮೂರ ಮಡಿವಾಳಪ್ಪನ ಜಾತ್ರೆ.

ಕಜ್ಜಭಜ್ಜಿಯ ಮಹಾಪ್ರಸಾದ

ಮುತ್ಯಾ ಮಡಿವಾಳಪ್ಪನ ಜಾತ್ರೆಯ ಕಜ್ಜಭಜ್ಜಿಯ ಮಹಾಪ್ರಸಾದವೆಂದರೆ ನಮಗೆ ಮೃಷ್ಟಾನ್ನ ಭೋಜನ. ಆಹಾ..! ಅದೆಷ್ಟು ಕಾಯಿಪಲ್ಯ, ದವಸ ಧಾನ್ಯಗಳ ಮಿಸಾಳಭಾಜಿ ಭಜ್ಜಿಯದು. ಅಲಸಂದಿ, ಹೆಸರು, ಕಡಲೆ, ಹುರುಳಿ, ತೊಗರಿ, ಸಜ್ಜೆ, ನವಣಿ ಹೀಗೆ ಎಲ್ಲಾ ಬಗೆಯ ದವಸ ಧಾನ್ಯಗಳು. ಅವು ಸೇರು, ಪಂಚೇರುಗಟ್ಟಲೇ ಅಲ್ಲ ಮಣಗಟ್ಟಲೇ., ಒಮ್ಮೊಮ್ಮೆ ಅದಕ್ಕು ಮಿಕ್ಕಿದ ವ್ಯಂಜನ ವೆಚ್ಚಗಳು. ಮುಖ್ಯವಾಗಿ ಪುಂಡಿಪಲ್ಯ, ಮೆಂತೆಪಲ್ಯ, ಗೊರಜಿ, ಸಬಸಿ... ಹೀಗೆ ಎಲ್ಲ ಬಗೆಯ ತಪ್ಪಲು ಪಲ್ಯ. ನೆನಪಿರಲಿ ಶಾಸ್ತ್ರಕ್ಕೆಂಬಂತೆ ಬೇವಿನ ಸೊಪ್ಪನ್ನು ಸಹಿತ ಮರೆಯದೇ ಸೇರಿಸುತ್ತಾರೆ. ಹಸಿರು ಸೊಪ್ಪು ಸಿವುಡುಗಟ್ಟಲೇ ಅಲ್ಲ ಬಂಡಿಗಟ್ಟಲೇ ಬೇಕು. ಮಣಗಟ್ಟಲೇ ಹಸಿ ಮೆಣಸಿನಕಾಯಿ, ಚಕ್ಕಡಿಗಾಡಿಗಳ ತುಂಬಾ ಕುಂಬಳಕಾಯಿಗಳು ಬೇಕು.

ಹೀಗೆ ತರಹೇವಾರಿ ಸಿರಿಧಾನ್ಯಗಳು, ಹಸಿರು ತರಕಾರಿಗಳನ್ನು ಒಗ್ಗೂಡಿಸಿ ಸೊಂಟದೆತ್ತರದ ನಾಕೈದು ಕಡಾಯಿಗಳಲ್ಲಿ ಬೇಯಿಸಿ ಮಾಡುವ ಅಡುಗೆಯೇ ಭಜ್ಜಿ. ಅದು ಬಟಾಬಯಲಲ್ಲಿ ಒಲೆ ಹೂಡಿ ತಯಾರಿಸುವ ಮಹಾಬಯಲ ಮಹಾಂತ ಮಡಿವಾಳನ ಮಹಾಪ್ರಸಾದ. ಅಷ್ಟಿಷ್ಟಲ್ಲ ಅದಕ್ಕೆ ಪೌಷ್ಟಿಕ ಆಹಾರ ತಜ್ಞರೇ ಸರ್ಟಿಫಿಕೇಟ್ ಕೊಡುವಷ್ಟು ಅಮೋಘ ರುಚಿ. ಕಡಕೋಳ ಜಾತ್ರೆಯ ಕಜ್ಜಭಜ್ಜಿಯೆಂಬುದು ಖುದ್ದು ಮಡಿವಾಳಪ್ಪನವರ ಮಹಾಪಾಕ. ಅದು ಮಡಿವಾಳಪ್ಪನ ಪ್ರೀತಿಯ ಮಹಾಪ್ರಸಾದ. ಅಂತೆಯೇ ಅದಕ್ಕೆ ಮಡಿವಾಳತನದ ಅನ್ಯಾದೃಶ ಗುಣವಿದೆ. ಇದು ಹಿರಿಯರನೇಕರ ಅನುಭವದ ಮಾತು. ಕಜ್ಜಭಜ್ಜಿ ಕೇವಲ ರೊಟ್ಟಿ ಪಲ್ಯದ ರುಚಿಯಲ್ಲ ಅದರೊಂದಿಗೆ ಜವಾರಿ ಅನುಭಾವದ ಅನುಸಂಧಾನವಿದೆ.

ಉಲ್ಲೇಖಿಸಲೇಬೇಕಾದ ಮತ್ತೊಂದು ಮಹತ್ವದ ಸಂಗತಿ ಇಲ್ಲಿದೆ. ಬೇರೆ, ಬೇರೆ ಊರುಗಳಿಂದ ಆಗಮಿಸಿದ ದಲಿತರಾದಿಯಾಗಿ ಎಲ್ಲ ಸಮುದಾಯದ ಸಾಮಾನ್ಯರು ಸೇರಿ ತಯಾರಿಸುವ ಅಸಾಮಾನ್ಯ ಭಜ್ಜಿ ಅದು. ನಮ್ಮೂರಿನ ಕರೆಪ್ಪಗೌಡ, ಹಂದಿಗನೂರಿನ ಗೊಲ್ಲಾಳಪ್ಪಗೌಡ, ಕೋರವಾರದ ಖಾಜಾ ಹುಸೇನಿ, ಚೌಧರಿ ಮಡಿವಾಳಪ್ಪ ಮತ್ತವರ ತಂಡ, ವರವಿಯ ಅಂದಿನ ಬಾಳಾರಾಮ ದಾದಾ ಮತ್ತವನ ಮಗ ಸಂಜೀವ ದಾದಾ ಹೀಗೆ ಭಜ್ಜಿ ತಯಾರಿಸುವ ಪರಿಣಿತರ ಸೆಕ್ಯುಲರ್ ಸಮೂಹವೇ ಅಲ್ಲಿರುತ್ತದೆ.

ಅವರು ತಯಾರಿಸುವ ಭಜ್ಜಿ ಅಪ್ರತಿಮ ರುಚಿಯ ಆರೋಗ್ಯಕರ ವ್ಯಂಜನ. ಜಾತ್ರೆಯ ಮೊದಲ ದಿನದ ರಾತ್ರಿಯೇ ಖಾಂಡ. ಖಾಂಡದ ರಾತ್ರಿ ಶ್ರೀಮಠದ ಪೂಜ್ಯರಾದ ಡಾ. ರುದ್ರಮುನಿ ಶಿವಾಚಾರ್ಯರೇ ಖುದ್ದು ಮಹಾಪ್ರಸಾದ ವಿತರಣೆಗೆ ಚಾಲನೆ ನೀಡುತ್ತಾರೆ. ಕಜ್ಜಭಜ್ಜಿಯ ಜಾತ್ರೆಗೆ ಆಗಮಿಸುವ ಸಮಾಜದ ಎಲ್ಲಾ ಜಾತಿ, ವರ್ಗಗಳ ಸಹಸ್ರಾರು ಮಂದಿ ನೆಲದ ಮೇಲೆ ಏಕಪಂಕ್ತಿಯಲ್ಲೇ ಕುಂತು ಸಾಮೂಹಿಕವಾಗಿ ಪ್ರಸಾದ ಸೇವಿಸುತ್ತಾರೆ. ಅಂಗೈಯಲ್ಲಿ ಕಜ್ಜಗಳು, ಕಜ್ಜಗಳ ಮೇಲೆ ಭಜ್ಜಿ ಬಡಿಸಿಕೊಂಡು ಉಣ್ಣುವ ಪ್ರೀತಿ ಬಣ್ಣಿಸಲಸದಳ. ಅಕ್ಷರಶಃ ಬಹುಳಪ್ರಜ್ಞೆಯ ಜೀವಬಾಹುಳ್ಯದ ಪಂಕ್ತಿ ಭೋಜನವದು. ಜಾತ್ರೆಗೆ ಆಮಂತ್ರಿತ ಸ್ವಾಮೀಜಿಗಳು ಸಹಿತ ಖಾಯಷ್ ಪಟ್ಟು ಇದೇ ಕಜ್ಜಭಜ್ಜಿಯ ಪ್ರಸಾದವನ್ನು ಪ್ರೀತಿಯಿಂದ ಸೇವಿಸುತ್ತಾರೆ. ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಕಡಕೋಳ ಜಾತ್ರೆಗೆ ಬಂದಾಗೆಲ್ಲ ಖಾಯಷ್ ಪಟ್ಟು ಕಜ್ಜಭಜ್ಜಿ ಉಣ್ಣುತ್ತಿದ್ದರು. ಈಗ ಅವರ ಮಗ ನಮ್ಮ ಶಾಸಕ ಡಾ. ಅಜಯಸಿಂಗ್ ಅವರಿಗೂ ಕಜ್ಜಭಜ್ಜಿ ರುಚಿಪ್ರಾಪ್ತಿಯ ನೆನಪು. ಅದನ್ನೆಲ್ಲ ಕೇಳುವುದಕ್ಕಿಂತ ಕಂಡುಂಡು ಸಂಭ್ರಮಿಸುವುದೇ ಲೇಸು.

ಕಜ್ಜದ ಕಥನ ಇನ್ನೂ ಅನ್ಯೋನ್ಯವಾದುದು

ಭಜ್ಜಿಯ ಸಂಕ್ಷಿಪ್ತ ಕಥನ ಹೀಗಿದ್ದರೆ, ಕಜ್ಜದ ಕಥನ ಇನ್ನೂ ಅನ್ಯೋನ್ಯವಾದುದು. ಮುತ್ಯಾನ ಜಾತ್ರೆ ಹತ್ತಿರ ಬರುತ್ತಿದ್ದಂತೆ ಕಜ್ಜದ ಕಟಿಬಿಟಿ. ನೂರಾರು ಊರುಗಳಲ್ಲಿ ಸಜ್ಜೆ, ಮುಂಗಾರಿ, ಹಿಂಗಾರಿ ಬಿಳಿಜೋಳದ ಕಜ್ಜ(ರೊಟ್ಟಿ) ತಯಾರಿ ಆರಂಭ. ಪಟಪಟ ಅಂತ ಎರಡೂ ಕೈಗಳಿಂದ ಬಡಿದು, ರುಚಿ ಬರುವಂತೆ ತಟ್ಟಿ ಹಂಚಿನ ಮೇಲೆ ಸುಟ್ಟು ಸಿದ್ಧಗೊಳಿಸಿದ ರಾಶಿ, ರಾಶಿ ರೊಟ್ಟಿಗಳು. ಮಡಿವಾಳಪ್ಪನ ಜಾತ್ರೆಗೆಂದೇ ಹತ್ತಾರು ಊರುಗಳಿಂದ ಭಕ್ತರು ಕಜ್ಜಗಳನ್ನು ತಯಾರಿ ಮಾಡಿಕೊಂಡು ತರುತ್ತಾರೆ.

ಕಜ್ಜವೆಂಬ ರೊಟ್ಟಿಗಳನ್ನು ಬಡವರು ಬಟ್ಟೆಯ ಪಾವಡದಲ್ಲಿ ಕಟ್ಟಿಕೊಂಡು ತಲೆ ಮೇಲೆ ಹೊತ್ತು ತರುವರು. ಇನ್ನು ಕೆಲವರು ಎತ್ತಿನಗಾಡಿ, ಟ್ರ್ಯಾಕ್ಟರುಗಳಲ್ಲಿ ಚೀಲಗಟ್ಟಲೇ ಒಣಗಿದ ಕಟಿಕಟಿ ಕಜ್ಜದ ರೊಟ್ಟಿಗಳನ್ನು ತಂದು ಮುತ್ಯಾ ಮಡಿವಾಳಪ್ಪನ ಮಠಕ್ಕೆ ಸಲ್ಲಿಸುವರು. ತನ್ಮೂಲಕ ಪುನೀತರಾದ ಸಂತೃಪ್ತಿ ಸಾರ್ವಜನಿಕ ಭಕ್ತ ಮಹಾಶಯರದು. ಜಾತ್ರೆಗೆ ಒಂದೆರಡು ದಿನಕ್ಕೆ ಮುನ್ನ ಮಠದ ಉಗ್ರಾಣದಂತಹ ಖೋಲಿಗಳ ತುಂಬ ಒಟ್ಟಿದ ಕಜ್ಜದ ಹೆಸರಿನ ರಗಡು ರಗಡು ರೊಟ್ಟಿಗಳು.

ಡಿಸೆಂಬರ್ ತಿಂಗಳ ಕೊರೆವ ಚಳಿಗಾಲದ ಥಂಡಿಗೆ ಅಂಜದೇ, ಅಳುಕದೇ ಸಹಸ್ರ ಸಹಸ್ರ ಸಂಖೆಯಲ್ಲಿ ಜನರು ಜಾತ್ರೆಗೆ ಆಗಮಿಸತ್ತಾರೆ. ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದಲೂ ಭಕ್ತರು ತಂಡೋಪತಂಡವಾಗಿ ಬರುತ್ತಾರೆ. ಹಾಗೆ ಬಂದವರು ಖಾಂಡ, ರಥೋತ್ಸವ ಎರಡು ದಿನವೂ ನಿವಾಂತವಾಗಿ ಜಾತ್ರೆಯ ಸಂಭ್ರಮ ಸವಿಯುತ್ತಾರೆ. ತೇರಿನ ರಾತ್ರಿ ಒಮ್ಮೊಮ್ಮೆ ಇಂಗರೇಜಿ ಸೀಮೆಯ ಪಾರಿಜಾತದ ಸಣ್ಣಾಟಗಳು. ಇಲ್ಲವೇ ನಮ್ಮೂರ ಹವ್ಯಾಸಿ ಕಲಾವಿದರೇ ಕಲಿತು ಆಡುವ ನಾಟಕಗಳು. ಜಾತ್ರೆಗೆ ಠಿಕಾಣಿ ಹಾಕುವ ಗೋಲಗೇರಿಯವರ ಬೆಂಡು ಬತ್ತಾಸಿನ ಅಂಗಡಿಗೆ ಪಾರಂಪರಿಕ ರುಚಿಯ ಮಹತ್ವ, ತೇರಿನ ಕಳಸ ಇಳಿಸುವವರೆಗೂ ಇಂತಹ ಹತ್ತಾರು ಬೆಂಡು ಬತ್ತಾಸಿನ ಅಂಗಡಿಗಳ ವಾಸ್ತವ್ಯ ಖಾಯಂ. ಬೆಂಡು ಬತ್ತಾಸು, ಬೆಲ್ಲದ ಜಿಲೇಬಿ, ಸಕ್ರಿಸಿಣ್ಣಿ, ಬಿಸಿ ಬಿಸಿ ಖಾಂದಾಭಜಿ ಮತ್ತು ಜಿಲೇಬಿಯ ಜವಾರಿ ರುಚಿಯನ್ನು ಗೋಲಗೇರಿ ಅಂಗಡಿ ಇಂದಿಗೂ ಉಳಿಸಿಕೊಂಡು ಬಂದ ನೆನಪು ಮಾಸಿಲ್ಲ.

ತತ್ವಪದಗಳ ಮಹಾಸಂಗಮ

ಮಡಿವಾಳಪ್ಪನ ಅನುಭಾವ ಜಾತ್ರೆಯ ಜೀವಾಳವೆಂದರೆ ತತ್ವಪದಗಳ ಮಹಾಸಂಗಮ. ಈ ಮಹಾಸಂಗಮವೇ ಗವಿ ಭೀಮಾಶಂಕರ ಅವಧೂತರ ಫೌಳಿಯ ಸಾಧುರ ಮೇಳ ಮತ್ತು ಅವರ ತರಹೇವಾರಿ ಅವತಾರಗಳು. ನಿಗಿ ನಿಗಿ ಕೆಂಡದ ಧುನಿಯ ಸುತ್ತಲೂ ಗಾಂಜಾ ಚಿಲುಮೆ ಸೇದುತ್ತಾ ಓಂಕಾರ ನಾದೋನ್ಮಾದದ ಬೆಳಕಿನ ಹೊಗೆ ಹೊರಡಿಸುವುದನ್ನು ನೋಡುವುದೇ ರೋಮಾಂಚಕಾರಿ. ಮತ್ತೊಂದೆಡೆ ಏಕತಾರಿ, ಚಿನ್ನಿ, ತಾಳ, ದಮಡಿಗಳ ಝೇಂಕಾರ. ಗುರುಮಾರ್ಗ ಮಾಧುರ್ಯದ ಘಮಲು. ಅಲ್ಲಿ ಮಡಿವಾಳಪ್ಪನ ತತ್ವಪದಗಳು ಮಾತ್ರ ಪ್ರಸ್ತುತವಲ್ಲ.

ಶಿಶುನಾಳ ಶರೀಫ, ನವಲಗುಂದದ ನಾಗಲಿಂಗ, ಶಿರಹಟ್ಟಿಯ ಫಕೀರೇಶ, ರಾಂಪುರದ ಬಕ್ಕಪ್ಪ ಹೀಗೆ ಒಬ್ರೆ ಇಬ್ರೆ ಹತ್ತಾರು ಮಂದಿ ತತ್ವಪದಕಾರರ ಪದಗಳ ಮಹಾಭಜನೆ. ಸವಾಲ್ ಜವಾಬಿನಂತೆ ಮೇಲಾಟದ ಮೇಲೆ ರಾಶಿ ರಾಶಿ ಪದಗಳ ಹಂತಿ ಹೂಡಿದ್ದೇ ಹೂಡಿದ್ದು. ಕನ್ನಡದ ಜತೆಗೆ ಕೆಲವರು ಮರಾಠಿ, ಉರ್ದು, ತೆಲುಗಿನಲ್ಲಿ ತತ್ವಪದಗಳಿಗೆ ಪದಾರ್ಥ ಜ್ಞಾನದ ಟೀಕು ಹೇಳುವ ಭರಾಟೆ. ಭಾಷೆ ಎಂಬುದು ಅಲ್ಲಿ ಯಾರಿಗೂ ತೊಡಕಾಗಿ ಕಾಡುವುದೇ ಇಲ್ಲ. ಅದು ಅಕ್ಷರಶಃ ಸಂವೇದನಾಶೀಲ ಸಂವಾದ. ಒಮ್ಮೊಮ್ಮೆ ಅದು ತಾರಕದ ಶಿಖರ ಏರುತ್ತದೆ. ಉತ್ತುಂಗ ಅನುಭಾವದ ಉನ್ಮನಿಯ ಉನ್ಮೇಷಣೆ. ಅದಕ್ಕೆ ಭಾಷೆ, ವೇಷ, ಬಣ್ಣ, ಸಂತಸ, ಸಂಕಟ ಯಾವುದರ ಅರಿವು - ಪರಿವು, ಹಂಗು - ಹರಕತ್ತು ಇರುವುದೇ ಇಲ್ಲ. ಅದೊಂದು ವಿಭಿನ್ನ ಜನಸಂಸ್ಕೃತಿಯ ಸಂದೋಹ.

ಪ್ರಾಯಶಃ ಇದೆಲ್ಲ ಹಿಂದಿನ ಮಠಾಧೀಶರಾಗಿ ಅವಧೂತ ಪ್ರೀತಿಯನ್ನೇ ಬದುಕಿದ ವೀರಯ್ಯ ಮುತ್ಯಾ ಅವರ ಅವಧಿಯ ಪಾರಮ್ಯಕಾಲ. ಗ್ಲೋಬೀಕರಣದ ದೆವ್ವಗಾಳಿ ಎಲ್ಲಕಡೆಗೂ ಬೀಸಿದಂತೆ ಸಂತ ಮಹಾಂತರ ಮಠ, ಜಾತ್ರೆಗಳ ಮೇಲೂ ಬೀಸಿ ನಮ್ಮೂರ ಜಾತ್ರೆಯ ಚೆಹರೆಗಳು ಸ್ಥಿತ್ಯಂತರಗೊಂಡಿವೆ. ಮತ್ತೆ ಕೆಲವು ಜಾತ್ರೆಗಳು ಆಧುನಿಕತೆಗೆ ರೂಪಾಂತರಗೊಂಡಿವೆ. ಅವು ನೆಲಧರ್ಮದಿಂದ ದೂರ ಸಾಗುತ್ತಿವೆ. ನನ್ನ ಅಪ್ಪ ಅವ್ವನ ಕಾಲದ ನೆಲಧರ್ಮದ ಸಂಪ್ರೀತಿ ಪರಂಪರೆಯ ಬೇರುಗಳು ಒಣಗಿ ಹೋಗಿವೆ. ಗ್ರಾಮ್ಯಜನ್ಯ ಅನನ್ಯತೆಯೊಂದು ಮುಗ್ಗಿ ಹೋಗುತ್ತಿರುವ ಅನಾಥಪ್ರಜ್ಞೆ ನನ್ನನ್ನು ತೀವ್ರವಾಗಿ ಕಾಡುತ್ತಿದೆ.

ಈಗ ಜಾತ್ರೆಗಳು ಮಾತ್ರವಲ್ಲ, ಮಹಾನವಮಿ, ಯುಗಾದಿ, ದೀವಳಿಗೆಯಂತಹ ಸಾರ್ವತ್ರಿಕ ಹಬ್ಬ ಹರಿದಿನಗಳು ಎಂದಿನ ಪರಂಪರೆಯ ಪ್ರೀತಿ, ಸೌಹಾರ್ದತೆಗಳನ್ನು ಹೊಂದಿಲ್ಲ. ಅವು ಜೀವಪ್ರೀತಿ ಕಳಕೊಳ್ಳುತ್ತಲಿವೆ. ಜಾತಿ ನಿರಶನಕ್ಕೆ ನಿದರ್ಶನವಾಗಿದ್ದ ಜೀವನ ಪ್ರೀತಿಯ ಅವಕ್ಕೀಗ ವರ್ಗ ವರ್ಣಗಳ ಬಣ್ಣ ಬಳಿಯಲಾಗುತ್ತಿದೆ. ಏಕಸ್ವಾಮ್ಯದ ಕೆಲವು ದುಷ್ಟ ಶಕ್ತಿಗಳು, ಕೋಮುವಾದಿ ಮನಸುಗಳ ಪ್ರವೇಶ. ಜಾತ್ರೆ ಮತ್ತು ಇತರೆ ಸಾಂಸ್ಕೃತಿಕ ಮತ್ತು ಜನಪದೀಯ ಹಬ್ಬಗಳನ್ನು ತಮ್ಮ ಕೈವಶಕ್ಕೆ ತೆಗೆದುಕೊಳ್ಳುವ ವಿನಾಶದ ಹುನ್ನಾರಗಳು. ಈ ಹುನ್ನಾರಗಳು ಇತ್ತೀಚಿನ ವರುಷಗಳಲ್ಲಿ ಮುನ್ನೆಲೆಗೆ ಬಂದು ಆಕ್ರಮಣಕಾರಿ ನಿಲುವು ತಾಳುತ್ತಲಿವೆ.

ವರ್ತಮಾನ ಗ್ರಾಮಭಾರತದ ಸಡಗರ, ಸಂಭ್ರಮಗಳು ದಿನೆ ದಿನೇ ಪತನದ ಹಾದಿ ಹಿಡಿಯುತ್ತಲಿವೆ. ಸ್ವೋಪಜ್ಞಶೀಲ ನೆಲಮೂಲ ಸಂಸ್ಕೃತಿ ವಿನಾಶದತ್ತ ಸಾಗುತಿದೆ. ಸಾಂಸ್ಥಿಕಗೊಂಡ ಧರ್ಮ, ಸಂಪ್ರದಾಯಗಳು ಸಾಮರಸ್ಯ ಭಾವೈಕ್ಯದ ಜನಸಂಸ್ಕೃತಿ ಜೀವ ಸಂವೇದನೆಗಳನ್ನು ಕದಡಿವೆ. ಹೀಗಿರುವಾಗ ಬತ್ತಿ ಹೋದ ಹಳೆಯ ಬೇರುಧಾರೆಗಳಿಂದ ಮತ್ತೆ ಹೊಸಜೀವ ಚಿಗುರು ಚಿಗುರುವುದು ಸಾಧ್ಯವೇ.? ಜಾತ್ರೆ ಹಬ್ಬಗಳಿಗೆ ಮೊದಲಿನ ಜೀವಪ್ರೀತಿ ಮತ್ತೆ ಮರುಕಳಿಸಿ, ಲೋಕಮಾನಸದ ಅಂತಃಕರಣ ಮರು ಪೂರಣಗೊಳ್ಳಲು ಸಾಧ್ಯವಾಗುವುದು ಯಾವಾಗ.?

ಲೇಖಕರು: ನಿರ್ದೇಶಕರು. ವೃತ್ತಿ ರಂಗಭೂಮಿ ರಂಗಾಯಣ. ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.