ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಎತ್ತಿಪೋತೆ ಜಲಪಾತದಲ್ಲಿ ‘ಹೊಗೆನಕಲ್ ವೈಭವ’

Published 21 ಜುಲೈ 2023, 6:55 IST
Last Updated 21 ಜುಲೈ 2023, 6:55 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಎತ್ತಿಪೋತೆ ಜಲಪಾತದ ರುದ್ರನರ್ತನ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದು, ಇದು ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಜಲಸಿರಿಯ ವೈಭವ ಸೃಷ್ಟಿಸಿದೆ.

ತೆಲಂಗಾಣದಲ್ಲಿ ಸುರಿದ ಭಾರಿಮಳೆಯಿಂದ ಎತ್ತಿಪೋತೆ ನಾಲೆಯಲ್ಲಿ ಪ್ರವಾಹ ಉಂಟಾಗಿದ್ದು, ಕಲ್ಲು ಬಂಡೆಗಳ ಸಂದು, ವಿಶಾಲ ಪ್ರದೇಶದಲ್ಲಿ ಭೋರ್ಗರೆಯುತ್ತಿರುವ ಮಳೆ ನೀರು ಹೊಗೇನಕಲ್ ಜಲಪಾತದಂತೆ ಗೋಚರಿಸಿತು.

ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಜಲಪಾತಗಳು ಮರುಜೀವ ಪಡೆದು ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ತಾಲ್ಲೂಕಿನ ಕುಂಚಾವರಂ ವನ್ಯಜೀವಿ ಧಾಮದಲ್ಲಿರುವ ಎತ್ತಿಪೋತೆ ಹಾಗೂ ಮಾಣಿಕಪುರ ಜಲಪಾತಗಳು ಮೈದುಂಬಿ ಹರಿಯುತ್ತಿವೆ.

ತಾಲ್ಲೂಕಿನಲ್ಲಿ ಹಲವು ಪ್ರವಾಸಿ ತಾಣಗಳಿವೆ. ಜಲಪಾತಗಳು ವರ್ಷದಲ್ಲಿ ಸುಮಾರು 6 ತಿಂಗಳು ಜಲವೈಭವದ ಮೂಲಕ ಕಣ್ಮನ ಸೆಳೆಯುತ್ತವೆ. ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಂದ್ರಂಪಳ್ಳಿ ಜಲಾಶಯಕ್ಕೆ ಒಂದೇ ದಿನದಲ್ಲಿ ಸಾಕಷ್ಟು ನೀರು ಹರಿದು ಬಂದಿದ್ದು, ಕೂಡ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಇಂತಹ ಪ್ರವಾಸಿ ತಾಣಗಳು ಸುರಕ್ಷತೆ ಮತ್ತು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ.

ವನ್ಯಜೀವಿ ಧಾಮದ ಸೆರಗಿನಲ್ಲಿ ತೆಲಂಗಾಣ–ಕರ್ನಾಟಕ ಗಡಿಯಲ್ಲಿ ಬರುವ ಎತ್ತಿಪೋತೆ ಜಲಪಾತ ವೀಕ್ಷಸಿಲು ದೂರದ ಕಲಬುರಗಿ, ಬೀದರ್, ಹೈದರಾಬಾದ ಮತ್ತು ತಾಂಡೂರು, ಜಹೀರಾಬಾದ ನಗರಗಳಿಂದಲೂ ಪ್ರಕೃತಿ ಪ್ರಿಯರು ಧಾವಿಸುತ್ತಾರೆ. ಕುಂಚಾವರಂ ಧರ್ಮಾಸಾಗರ ಮಾರ್ಗದಲ್ಲಿ ಬರುವ ಗೋಪುನಾಯಕ ತಾಂಡಾದಿಂದ ಸಂಗಾಪುರ ಮಾರ್ಗಮಧ್ಯೆ ಎತ್ತಿಪೋತೆ ಜಲಪಾತ ಕಾಣಸಿಗುತ್ತದೆ. ಇಲ್ಲಿ ಎರಡು ಕಡೆ ನೀರಿನ ಭೋರ್ಗರೆತ ಕಣ್ತುಂಬಿಕೊಳ್ಳಬಹುದಾಗಿದೆ. ಬುಧವಾರ ಸಾಧಾರಣ ಜಲಧಾರೆಯಿತ್ತು. ಆದರೆ ಗುರುವಾರ ನಯನ ಮನೋಹರ ದೃಶ್ಯ ಸೃಷ್ಟಿಯಾಗಿತ್ತು. ತೆಲಂಗಾಣದಲ್ಲೂ ಭಾರಿ ಮಳೆಯಾಗಿದ್ದರಿಂದ ಎತ್ತಿಪೋತೆ ನಾಲೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ ಎಂದು ರಘುನಾಥ ಚವ್ಹಾಣ ಪ್ರಜಾವಾಣಿಗೆ ತಿಳಿಸಿದರು.

ಮಾಣಿಕಪುರ ಜಲಪಾತ:

ತಾಲ್ಲೂಕಿನ ಕುಸ್ರಂಪಳ್ಳಿ ಗ್ರಾಮದಿಂದ 500 ಮೀಟರ್ ಉತ್ತರಕ್ಕೆ ಕ್ರಮಿಸಿ ಬಲಗಡೆ 2.5 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದರೆ ರಾಚೇನಹಳ್ಳ ನಾಲೆಯಲ್ಲಿ ಹರಿಯುವ ಮಾಣಿಕಪುರ ಜಲಪಾತ ಗೋಚರಿಸುತ್ತದೆ. ನೀರು ಎತ್ತರದಿಂದ ಕೆಳಕ್ಕೆ ಬೀಳುವ ಮೂರು ತಾಣ(ವ್ಯೂವ್ ಪಾಯಿಂಟ)ಗಳಿವೆ.

ಚಿಂಚೋಳಿಯಿಂದ ಚಿಕ್ಕಲಿಂಗದಳ್ಳಿ ಕಾಡಿನ ಮೂಲಕ ಕುಂಚಾವರಂ ತಲುಪಿ ಅಲ್ಲಿಂದ ಎತ್ತಿಪೋತೆ ಜಲಪಾತ ವೀಕ್ಷಿಸಿ, ಚಂದ್ರಂಪಳ್ಳಿ ಜಲಾಶಯದ ಹಿನ್ನೀರಿನಲ್ಲಿ ಬರುವ ವನ್ಯಜೀವಿ ಧಾಮದ ಹೃದಯ ಭಾಗದರುವ ಗೊಟ್ಟಮಗೊಟ್ಟ ಪ್ರಕೃತಿ ಸೌಂದರ್ಯ ಆಸ್ವಾದಿಸಿಕೊಂಡು ಮಾಣಿಕಪುರ ಜಲಪಾತ ತಲುಪಿದರೆ, ಅಲ್ಲಿನ ರಮಣೀಯತೆ ಕಣ್ತುಂಬಿಕೊಂಡು ಚಂದ್ರಂಪಳ್ಳಿಯ ಕಾಟೇಜಿನಲ್ಲಿ ವಿರಮಿಸಬಹುದಾಗಿದೆ.

ಕಾಟೇಜ್ ವನ್ಯಜೀವಿ ಧಾಮ ಅಥವಾ ಅರಣ್ಯ ಇಲಾಖೆಯ ವಿಭಾಗೀಯ ಕಚೇರಿಯಲ್ಲಿ ಮುಂಗಡ ಕಾಯ್ದಿರಿಸಬೇಕು. ಇಲ್ಲಿ ತಿನ್ನಲು ಊಟ, ಕುರುಕುಲ ತಿಂಡಿ ತಿನಿಸು ಹಾಗೂ ಶುದ್ಧ ನೀರು ದೊರೆಯುವುದಿಲ್ಲ. ಪ್ರವಾಸಿಗರೇ ಜತೆಗೆ ತರುವುದು ಉತ್ತಮ. ಕಾಟೇಜ್ ಮುಂಗಡ ಕಾಯ್ದಿರಿಸಿ, ಊಟದ ಬೇಡಿಕೆ ಇಟ್ಟರೆ, ಅರಣ್ಯ ಇಲಾಖೆ ಸಿಬ್ಬಂದಿ ಪೂರೈಸುತ್ತಾರೆ. ಇದಕ್ಕೆ ಪ್ರತ್ಯೇಕ ಖರ್ಚು ವಿಧಿಸುತ್ತಾರೆ.

ಎತ್ತಿಪೋತೆ ಜಲಪಾತ ವೀಕ್ಷಣೆ ಸರಳವಾಗಿ ಮಾಡಬಹುದು. ಆದರೆ ವನ್ಯಜೀವಿ ಧಾಮದ ಹೃದಯಭಾಗದಲ್ಲಿ ಮಾಣಿಕಪುರ ಜಲಪಾತ ಬರುವುದರಿಂದ ಇಲ್ಲಿಗೆ ಕಾಲ್ನಡಿಗೆಯಲ್ಲಿ ತೆರಳಬೇಕಾಗುತ್ತದೆ. ಇಲ್ಲಿಗೆ ಹೋಗುವವರು ಎಚ್ಚರಿಕೆ ವಹಿಸಬೇಕು. ಆಯುಧ ಒಯ್ಯುವಂತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ತಿಳಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಎತ್ತಿಪೋತೆ ಜಲಪಾತದಲ್ಲಿ ಪ್ರವಾಹದೋಪಾದಿಯಲ್ಲಿ ಬೋರ್ಗರೆಯುತ್ತಿರುವ ಮುಖ್ಯತಾಣ
ಚಿಂಚೋಳಿ ತಾಲ್ಲೂಕಿನ ಎತ್ತಿಪೋತೆ ಜಲಪಾತದಲ್ಲಿ ಪ್ರವಾಹದೋಪಾದಿಯಲ್ಲಿ ಬೋರ್ಗರೆಯುತ್ತಿರುವ ಮುಖ್ಯತಾಣ
ತಾಲ್ಲೂಕಿನ ಪರಿಸರ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಈ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿದರೆ ಸರ್ಕಾರಕ್ಕೆ ಆದಾಯ ತರಲಿವೆ.
ಲಿಂಗರಾಜ ಸ್ವಾಮಿ ಹವ್ಯಾಸಿ ಪ್ರವಾಸಿಗ
ಜುಲೈ ತಿಂಗಳಲ್ಲಿ ಪ್ರತಿವರ್ಷ ಪ್ರವಾಸಿಗರು ಎತ್ತಿಪೋತೆಗೆ ಬರುತ್ತಿದ್ದರು. ಆದರೆ ಪ್ರಸಕ್ತ ವರ್ಷ ಮಳೆ ತಡವಾಗಿದ್ದರಿಂದ ಜಲಧಾರೆ ತಡವಾಗಿ ಮೈದುಂಬಿಕೊಂಡಿದೆ.
ರಘುನಾಥ ಚವ್ಹಾಣ ಸಾಮಾಜಿಕ ಕಾರ್ಯಕರ್ತ ಒಂಟಿಚಿಂತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT