ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಲೋಕಸಭಾ ಕ್ಷೇತ್ರ | ಖರ್ಗೆ–ಮೋದಿ ಯಾರ ವರ್ಚಸ್ಸಿಗೆ ಫಲ?

ಬಿಜೆಪಿ ಸೇರಿ ಜಾಧವ ಗೆಲ್ಲಿಸಿದ್ದ ಮುಖಂಡರೀಗ ಮರಳಿ ಕಾಂಗ್ರೆಸ್‌ ತೆಕ್ಕೆಗೆ
Published 27 ಏಪ್ರಿಲ್ 2024, 23:04 IST
Last Updated 27 ಏಪ್ರಿಲ್ 2024, 23:04 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ತೊಗರಿ ಕಣಜ ಎಂದೇ ಹೆಸರಾದ ಕಲಬುರಗಿ ಜಿಲ್ಲೆಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯೂ ಹೌದು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಾ.ಉಮೇಶ ಜಾಧವ ಸ್ಪರ್ಧಿಸಿದ್ದು, ಕದನ ಕಣದಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

2019ರಲ್ಲಿ ತಮ್ಮ ರಾಜಕೀಯ ಜೀವನದ ಮೊದಲ ಸೋಲು ಕಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಎಐಸಿಸಿ ಅಧ್ಯಕ್ಷರು. ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಖರ್ಗೆ ಅವರು ರಾಧಾಕೃಷ್ಣ ಅವರನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ಚದುರಂಗದಾಟವನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. 

ಬಿಜೆ‍‍‍ಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು ‘ಮೋದಿ ಅಲೆ’ಯನ್ನೇ ಪ್ರಮುಖವಾಗಿ ನೆಚ್ಚಿಕೊಂಡಿ ದ್ದಾರೆ. ಜೊತೆಗೆ ತಮ್ಮ ಅವಧಿಯಲ್ಲಿ ಹೆದ್ದಾರಿಗಳ ಅಭಿವೃದ್ಧಿ, ವಂದೇ ಭಾರತ್ ರೈಲನ್ನು ತಂದಿರುವುದು, ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ನೆನಪಿಸುತ್ತಾ ಮತಯಾಚನೆ ಮಾಡುತ್ತಿದ್ದಾರೆ. 

ಖರ್ಗೆ ಅವರು ಎರಡು ಬಾರಿ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಮೂಲಕ ಈ ಚುನಾವಣೆ ತಮಗೆ ಎಷ್ಟು ಮಹತ್ವದ್ದು ಎಂಬುದನ್ನು ಮನದಟ್ಟು ಮಾಡಿದ್ದಾರೆ. ಜೊತೆಗೆ, ‘ಕರ್ನಾಟಕ ಮತ್ತು ಕಲಬುರಗಿಗೆ ನಾನು ಏನಾದರೂ ಒಳ್ಳೆಯ ಕೆಲಸ ಮಾಡಿದ್ದು ನಿಮ್ಮ ನೆನಪಿನಲ್ಲಿದ್ದರೆ ವೋಟು ಹಾಕಲು ಬನ್ನಿ; ಇಲ್ಲವೇ ಸತ್ತ ಮೇಲೆ ನನ್ನ ಮಣ್ಣಿಗಾದರೂ ಬನ್ನಿ’ ಎಂದು ಹೇಳುವ ಮೂಲಕ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಮುಂದಾಗಿದ್ದಾರೆ.

ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ 2019ರಲ್ಲಿ ಬಿಜೆಪಿಯಲ್ಲಿದ್ದರು. ಇಬ್ಬರೂ ನಾಯಕರು ಮರಳಿ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಸೇರಿದ್ದರೂ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ ಸೇರಿದಂತೆ ಹಲವು ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಮಾಲೀಕಯ್ಯ ಅವರ ಸೇರ್ಪಡೆಯಿಂದಾಗಿ ಈಡಿಗ ಸಮುದಾಯದ ಮತಗಳು ಕಾಂಗ್ರೆಸ್‌ ಕಡೆಗೆ ವಾಲಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಮುಖಂಡರು ಇಟ್ಟುಕೊಂಡಿದ್ದಾರೆ. ಬಾಬುರಾವ ಚಿಂಚನಸೂರ ಅವರು ಹೋದಲ್ಲೆಲ್ಲ ‘ಡಾ. ಜಾಧವ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವುದಾಗಿ ನಂಬಿಸಿ ಮೋಸ ಮಾಡಿದರು’ ಎಂದು ಹೇಳುತ್ತಿದ್ದಾರೆ.

ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕೋಲಿ ಸಮಾಜದವರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂಬುದು ಚುನಾವಣಾ ವಿಷಯವಾಗಿದೆ. 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಈ ಕುರಿತು ತೀರ್ಮಾನ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಟೀಕಿಸುತ್ತಿದೆ. ಕಲಬುರಗಿಯಲ್ಲಿ ಪ್ರಚಾರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಿ, ಗೊಂಡ ಸಮುದಾಯದವರಿಗೆ ಎಸ್ಟಿ ಮೀಸಲಾತಿ ನೀಡದ ಕೇಂದ್ರವನ್ನು ಟೀಕಿಸುವ ಮೂಲಕ ಮೀಸಲಾತಿ ಅಸ್ತ್ರ ಪ್ರಯೋಗಿಸಿದ್ದಾರೆ. 

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲಿಂಗಾಯತ ಸಮುದಾಯದವರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಅವರ ಪಕ್ಷದವರೇ ಅಸಮಾಧಾನಗೊಂಡಿದ್ದಾರೆ.

ಕೇಂದ್ರ ಸರ್ಕಾರ ಘೋಷಿಸಿದ್ದ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ ಇನ್ನೂ ಕಾರ್ಯಾರಂಭವಾಗಿಲ್ಲ. ಖರ್ಗೆ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಘೋಷಿಸಿದ್ದ ಕಲಬುರಗಿಗೆ ವಿಭಾಗೀಯ ರೈಲ್ವೆ ಕಚೇರಿಯನ್ನು ಬಿಜೆಪಿ ಸರ್ಕಾರ ಕಾರ್ಯರೂಪಕ್ಕೆ ತರಲಿಲ್ಲ. ಈ ಕುರಿತು ಮತದಾರರ ಅಸಮಾಧಾನವನ್ನು ಬಿಜೆಪಿ ಹೇಗೆ ತಣಿಸಲಿದೆ ಎಂಬುದರ ಮೇಲೆ ಚುನಾವಣೆಯ ಫಲಿತಾಂಶ ನಿಂತಿದೆ.

ನರೇಂದ್ರ ಮೋದಿ ಅವರು ಜಿಲ್ಲೆಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಿದ್ದು ಇದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಆಯ್ಕೆಯಾದರೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವೆ.
–ಡಾ. ಉಮೇಶ ಜಾಧವ, ಬಿಜೆಪಿ ಅಭ್ಯರ್ಥಿ
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದು ನಾನು ಸಂಸದನಾದರೆ ಇಬ್ಬರೂ ಸೇರಿ ಜಿಲ್ಲೆಗೆ ಕೇಂದ್ರದಿಂದ ಹಲವು ಅಭಿವೃದ್ಧಿ ಯೋಜನೆಗಳನ್ನು ತರುತ್ತೇವೆ.
–ರಾಧಾಕೃಷ್ಣ ದೊಡ್ಡಮನಿ, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT